ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಮತದಾರರ ಪಟ್ಟಿಯಲ್ಲಿನ ದೋಷ ನಿವಾರಣೆಗೆ ಚುನಾವಣಾ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ..!ಕಾಂಗ್ರೆಸ್ ಬೆಂಗಳೂರಲ್ಲಿ ಇತ್ತೀಚಿಗೆ ನಡೆಸಿದ ಪ್ರತಿಭಟನೆಯಿಂದಾಗಿ ಕೇಳಿ ಬರುತ್ತಿರುವ ಕೂಗು.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಯಾವುದೇ ಪಕ್ಷದ ಅಧಿಕಾರವಿರಲಿ. ಯಾವುದೇ ಚುನಾವಣೆ ಇದ್ದರೂ ಆಗ ಕೇಳಿ ಬರುವುದು ಚುನಾವಣಾ ಅಕ್ರಮ. ಅದರಲ್ಲೂ ನಕಲಿ ಮತದಾರರ ಹಾವಳಿ. ಜತೆಗೆ ಒಬ್ಬನೇ ವ್ಯಕ್ತಿ. ಎರಡ್ಮೂರು ಕಡೆಗಳಲ್ಲಿ ಹೆಸರು ಹೊಂದಿರುವುದು. ಚುನಾವಣಾ ಆಯೋಗವೂ ನಕಲಿ ಮತದಾರರು, ಡಬ್ಲಿಂಗ್, ತಿದ್ದುಪಡಿಗಾಗಿ ಆಯೋಗ ವಿಶೇಷ ಅಭಿಯಾನ ನಡೆಸುತ್ತದೆ. ಜತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೂ ವಿಶೇಷ ಅಭಿಯಾನ ನಡೆಯುತ್ತಿರುತ್ತದೆ.ಆದರೂ ಕಳೆದ ಸಲವಂತೂ ಡಬ್ಲಿಂಗ್ ಆದವರು (ಎರಡು ಕಡೆಗಳಲ್ಲಿ ಹೆಸರಿರುವುದು), ಮೃತಪಟ್ಟವರ ಹೆಸರಗಳನ್ನು ತೆಗೆದುಹಾಕಿತ್ತು. ಆಗ ಬರೋಬ್ಬರಿ ಧಾರವಾಡ ಜಿಲ್ಲೆಯಲ್ಲೇ 1.36 ಲಕ್ಷ ಹೆಸರುಗಳನ್ನು ಡಿಲಿಟ್ ಮಾಡಿತ್ತು. ಆಗಲೂ ಆಧಾರ ಕಾರ್ಡ್‌ನೊಂದಿಗೆ ಗುರುತಿನ ಚೀಟಿ ಲಿಂಕ್ ಮಾಡಿಬಿಡಿ. ಆಗ ಸಮಸ್ಯೆಯೇ ಇರಲ್ಲ ಎಂಬ ವಾದ ಕೇಳಿ ಬರುತ್ತಿದೆ.
ಅದರಲ್ಲೂ ಕಾಂಗ್ರೆಸ್ ಪಕ್ಷವೂ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿತ್ತು. ನಕಲಿ ಮತದಾರರಿದ್ದಾರೆ. ಎರಡ್ಮೂರು ಕ್ಷೇತ್ರಗಳಲ್ಲೂ ಒಬ್ಬನೇ ವ್ಯಕ್ತಿ ಮೂರು ಸಲ ಮತ ಚಲಾಯಿಸಿದ್ದುಂಟು. ಚುನಾವಣಾ ಆಯೋಗವೂ ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ನಿರ್ವಹಿಸುತ್ತಿದೆ ಎಂಬೆಲ್ಲ ಆರೋಪಗಳನ್ನು ಮಾಡಿದ್ದರು.ಈ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹೀಗಾಗಿ ಆರೋಪ ಮಾಡುತ್ತಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆಗ ಬಿಜೆಪಿ ಆರೋಪ ಮಾಡುತ್ತದೆ ಅಷ್ಟೇ. ಎಲ್ಲ ರಾಜಕೀಯ ಪಕ್ಷಗಳು ಇಷ್ಟೇ ಎಂದು ಪ್ರಜ್ಞಾವಂತರ ಟೀಕಿಸುತ್ತಾರೆ.
ಪರಿಹಾರವೇನು?: ಇದೀಗ ಚುನಾವಣೆ ಹೆಸರಲ್ಲಿ ನಡೆಯುವ ಎಲ್ಲ ಅಕ್ರಮಗಳನ್ನು ತಡೆಗಟ್ಟಬೇಕೆಂದರೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅತ್ಯಂತ ಸೂಕ್ತ. ಈಗಂತೂ ಪ್ರತಿಯೊಂದಕ್ಕೂ ಆಧಾರ್ ಲಿಂಕ್ ಮಾಡಲಾಗುತ್ತದೆ. ನಮ್ಮ ಬ್ಯಾಂಕ್ ಖಾತೆ, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್ ಸೇರಿದಂತೆ ಯಾವುದೇ ಬಗೆಯ ಸೌಲಭ್ಯಕ್ಕೂ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ. ಇದೆಲ್ಲ ಹೋಗಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ತೆರೆದಿರುವ ಐಆರ್‌ಸಿಟಿಸಿ ಖಾತೆಗೂ ಕೂಡ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ತತ್ಕಾಲ್‌ದಲ್ಲೇ ಟಿಕೆಟ್ ಪಡೆಯಲು ಸಾಧ್ಯವಾಗುವುದಿಲ್ಲ.ಏನಾದರೂ ಲಿಂಕ್ ಆಗಿಲ್ಲವೆಂದರೆ ಅದು ಚುನಾವಣಾ ಗುರುತಿನ ಚೀಟಿ ಮಾತ್ರ. ಆದಕಾರಣ ಇದಕ್ಕೂ ಲಿಂಕ್ ಮಾಡಬೇಕು. ಇದಕ್ಕೆ ಲಿಂಕ್ ಮಾಡುತ್ತಿಲ್ಲವೇಕೆ? ಎಂಬ ಪ್ರಶ್ನೆ ಪ್ರಜ್ಞಾವಂತರದ್ದು.
ಆಧಾರ್ ಲಿಂಕ್ ಮಾಡಿಬಿಟ್ಟರೆ ಎರಡ್ಮೂರು ಕಡೆಗಳಲ್ಲಿ ಹೆಸರಿದ್ದರೆ ತಾನಾಗಿಯೇ ಗೊತ್ತಾಗುತ್ತದೆ. ಯಾವುದು ಅಧಿಕೃತವಾಗಿರುತ್ತದೆಯೋ ಆ ಗುರುತಿನ ಚೀಟಿಗೆ ಲಿಂಕ್ ಆಗುವಂತೆ ಮಾಡಬೇಕು. ಯಾವ ಆಧಾರ್ ಕಾರ್ಡ್ ಲಿಂಕ್ ಆಗುವುದಿಲ್ಲವೋ ಆ ಕಾರ್ಡ್‌ಗಳನ್ನು ನಕಲಿ ಎಂದು ಘೋಷಿಸಿ ಕೈಬಿಡಬೇಕು.ಯಾವುದೇ ಕಾರಣಕ್ಕೂ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಸಾಧ್ಯವಾಗಲ್ಲ. ಯಾವುದೇ ಪಕ್ಷದ ವಿರುದ್ಧವೂ ಆರೋಪಿಸಲು ಅವಕಾಶವೂ ಇರುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗವೇ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ಒಟ್ಟಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದಾಗಿನಿಂದ ಚುನಾವಣಾ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡಬೇಕು ಎಂಬ ಬಗ್ಗೆ ಚರ್ಚೆಯಾಗುತ್ತಿರುವುದಂತೂ ಸತ್ಯ. ಆಯೋಗ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ..!ಈಗ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವೆನಿಸಿದೆ. ಆದರೆ, ಈ ವರೆಗೂ ಚುನಾವಣಾ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಗೋಜಿಗೆ ಮಾತ್ರ ಹೋಗಿಲ್ಲ. ಇನ್ನು ಮೇಲಾದರೂ ಚುನಾವಣಾ ಅಕ್ರಮ ತಡೆಯಲು ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಜಮಖಂಡಿ ಹೇಳಿದರು.