ಸಂಪರ್ಕ ಸೇತುವೆ ಕಾಮಗಾರಿ ಸಮರ್ಪಕವಾಗಿಲ್ಲ: ಶಿವರಾಜ ಮೇಸ್ತ

| Published : Mar 21 2024, 01:00 AM IST

ಸಾರಾಂಶ

ಮಳೆಗಾಲದಲ್ಲಿ ನದಿಯಲ್ಲಿ ಕಸದ ರಾಶಿ ತುಂಬಿಕೊಳ್ಳುತ್ತದೆ. ಅದಕ್ಕಾಗಿ ಸೇತುವೆ ಎರಡು ಕಡೆ ತೆರೆದ ಒಳಚರಂಡಿ ಅವಶ್ಯಕತೆ ಇದೆ.

ಹೊನ್ನಾವರ: ತಾಲೂಕಿನ ಮಾವಿನಕುರ್ವಾ- ಹೊನ್ನಾವರ ಸಂಪರ್ಕ ಸೇತುವೆ ಕೊನೆಯ ಹಂತದ ಕಾಮಗಾರಿಯು ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸಬೇಕೆನ್ನುವ ಆಗ್ರಹ ಕೇಳಿಬಂದಿದೆ.

ಮಾವಿನಕುರ್ವಾ- ಹೊನ್ನಾವರ ಸಂಪರ್ಕ ಸೇತುವೆ ಬಹುತೇಕ ಮುಕ್ತಾಯ ಹಂತ ತಲುಪಿದೆ. ಸೇತುವೆ ಕೊನೆಯ ಹಂತದಲ್ಲಿ ಚರ್ಚರಸ್ತೆಯ ತಾರಿಬಾಗಲು ನದಿತಟದ ಸಮೀಪದಲ್ಲಿ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ದಡಕ್ಕೆ ಸೇತುವೆಗೆ ಇರುವ ಅಂದಾಜು ಐವತ್ತು ಮೀಟರ್ ಅಂತರದಲ್ಲಿ ನದಿಗೆ ಅಡ್ಡಲಾಗಿ ಮಣ್ಣು ತುಂಬಲಾಗಿದೆ. ಇನ್ನೊಂದು ಹಂತದಲ್ಲಿ ಕಾಮಗಾರಿ ಮುಂದುವರಿದು ಜಿರೋ ಹಂತ ತಲುಪಿದಲ್ಲಿ ಸಮರ್ಪಕವಾಗಿರುತ್ತಿತ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇನ್ನು ಸೇತುವೆ ಕಾಮಗಾರಿ ಸಮೀಪವೇ ನೀರಿನ ಟ್ಯಾಂಕ್, ಬಸ್ ತಂಗುದಾಣ ಇರುವುದು ಮುಂದಿನ ದಿನಗಳಲ್ಲಿ ಇದು ಸಮಸ್ಯೆಯೊಡ್ಡುತ್ತದೆ. ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ ಎನ್ನುವ ಮಾತು ಕೇಳಿಬಂದಿದೆ.

ಈ ಕುರಿತು ಪಟ್ಟಣ ಪಂಚಾಯಿತಿ ಸದಸ್ಯ ಶಿವರಾಜ ಮೇಸ್ತ ಮಾತನಾಡಿ, ಈ ಮೊದಲಿನಂತೆ ಕಾಮಗಾರಿ ಅಂದಾಜು ಪ್ರತಿ ಪ್ರಕಾರ ನಡೆದಲ್ಲಿ ನದಿತಟದಿಂದ ಕೇವಲ ಹತ್ತು ಮೀಟರ್ ನೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಸೇತುವೆ ಎತ್ತರವಾಗಿದ್ದರಿಂದ ಇದೀಗ ನದಿತಟದಿಂದ ಅಂತರ ಹೆಚ್ಚಾಗಿದೆ. ಇದರಿಂದ ಸಮಸ್ಯೆ ಉಂಟಾಗಲಿದೆ. ಅಪಘಾತಕ್ಕೂ ಎಡೆಮಾಡಿಕೊಡುವ ಸಾಧ್ಯತೆ ಇದೆ. ಗುತ್ತಿಗೆದಾರ ಕಂಪನಿ ಈ ಬಗ್ಗೆ ಗಮನಹರಿಸಬೇಕು. ಕುಳಕೋಡ ಮಾರ್ಗದ ರಸ್ತೆ ಸಂಚಾರಕ್ಕೆ ಯಾವ ರೀತಿ ಅನೂಕೂಲ ಮಾಡಲಿದ್ದಾರೆ ಹಾಗೂ ಮುಂದಿನ ಹಂತದ ಕಾಮಗಾರಿಯ ಸ್ಪಷ್ಟವಾದ ನಕಾಶೆ ಸ್ಥಳೀಯರಿಗೆ ತೋರಿಸಬೇಕು. ಸಮರ್ಪಕ ಕಾಮಗಾರಿ ನಡೆಸಬೇಕೆಂದು ಆಗ್ರಹಿಸಿದರು.

ನೀರಿನ ಟ್ಯಾಂಕ್, ಬಸ್ ತಂಗುದಾಣ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿರುವುದರಿಂದ ಸೂಕ್ತ ಪರಿಹಾರದ ಜತೆಗೆ ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಅದನ್ನು ತೆರವುಗೊಳಿಸಲು ಸಹಕಾರ ನೀಡುತ್ತೇವೆ ಎಂದರು.

ಪಪಂ ಸದಸ್ಯೆ ಜೋಸ್ಬಿನ್ ಡಯಾಸ್ ಮಾತನಾಡಿ, ಇಲ್ಲಿರುವ ನೀರಿನ ಟ್ಯಾಂಕ್ ಪ್ರವಾಸಿಗರಿಗೆ, ಇಲ್ಲಿನ ಸಾರ್ವಜನಿಕರಿಗೆ ತೀರಾ ಅನೂಕೂಲಕರವಾಗಿದೆ. ಇದನ್ನು ಕೆಡವುವ ಬದಲು ಲಿಫ್ಟಿಂಗ್ ಪ್ರಕ್ರಿಯೆ ಮೂಲಕ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಮಳೆಗಾಲದಲ್ಲಿ ನದಿಯಲ್ಲಿ ಕಸದ ರಾಶಿ ತುಂಬಿಕೊಳ್ಳುತ್ತದೆ. ಅದಕ್ಕಾಗಿ ಸೇತುವೆ ಎರಡು ಕಡೆ ತೆರೆದ ಒಳಚರಂಡಿ ಅವಶ್ಯಕತೆ ಇದೆ ಎಂದರು.ಸಂಚಾರಕ್ಕೆ ಅನುಕೂಲ: ಇಲ್ಲಿನ ಟ್ಯಾಂಕ್ ಮತ್ತು ಬಸ್ ನಿಲ್ದಾಣ ತೆಗೆದಲ್ಲಿ ಮಾತ್ರ ಸೇತುವೆ ಕಾಮಗಾರಿ ಅನೂಕೂಲ ರೀತಿಯಲ್ಲಿ ಆಗಲು ಸಾಧ್ಯವಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಬಸ್ ಅಥವಾ ಇನ್ನಿತರ ಬೃಹತ್ ವಾಹನ ಸಂಚಾರವಾಗಲು ಅನುಕೂಲವಾಗುತ್ತದೆ ಎಂದು ಮಾವಿನಕುರ್ವಾ- ಹೊನ್ನಾವರ ಸಂಪರ್ಕ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಪೀಟರ್ ಮೆಂಡಿಸ್ ತಿಳಿಸಿದರು.ಲೋಪವಾಗದಂತೆ ಕಾಮಗಾರಿ: ಸ್ಥಳೀಯರು ತಮಗೆ ಅನೂಕೂಲವಾಗುವಂತೆ ಕಾಮಗಾರಿ ಮಾಡಲು ಈ ಹಿಂದೆ ಬೇಡಿಕೆ ಇಟ್ಟಿದ್ದು ನಿಜ. ಎರಡು ಕಡೆ ರ್ಯಾಂಪ್ ಮಾಡಿ, ಡ್ರೈನ್ ಮಾಡಿಕೊಡಲಿದ್ದೇವೆ. ಬಸ್ ತಂಗುದಾಣ, ನೀರಿನ ಟ್ಯಾಂಕ್ ತೆರವುಗೊಳಿಸಲು ಪಟ್ಟಣ ಪಂಚಾಯಿತಿಯವರಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ಅನುಮತಿ ನಿರಾಕರಿಸಿದ್ದಾರೆ. ಒಪ್ಪಿಗೆ ನೀಡಿದರೆ ಸ್ಥಳೀಯರ ಆಗ್ರಹದಂತೆ ಕಾಮಗಾರಿ ನಡೆಸುವ ಭರವಸೆ ನೀಡಿದ್ದೇವೆ. ಕಾಮಗಾರಿ ಯಾವುದೇ ಲೋಪವಾಗದೆ ನಡೆದಿದೆ ಎಂದು ಗುತ್ತಿಗೆದಾರ ಕಂಪನಿಯ ಎಂಜಿನಿಯರ್ ಆನಂದ್ ತಿಳಿಸಿದರು.