ಸಾರಾಂಶ
ಹೊನ್ನಾವರ: ಪಟ್ಟಣದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನೂತನ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನಡೆಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಉದಯ ನಾಯ್ಕ, ಕಾರ್ಯದರ್ಶಿಯಾಗಿ ಎನ್.ಜಿ. ಭಟ್, ಖಜಾಂಚಿಯಾಗಿ ಶ್ರೀಕಾಂತ ಹೆಗಡೆಕರ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ವಿಶಾಲ್ ಎಸ್. ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಎಲ್‌ಸಿಐಎಫ್ ಡಿಸ್ಟ್ರಿಕ್ಟ್ ಕೊ- ಆರ್ಡಿನೇಟರ್ ಪಿಎಂಜೆಎಫ್ ಲಯನ್ ಹರಿಪ್ರಸಾದ ರೈ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಹೊನ್ನಾವರ ಕ್ಲಬ್ ಹೆಚ್ಚು ಚಟುವಟಿಕೆ ಹಮ್ಮಿಕೊಂಡು ಸಮಾಜಸೇವೆಯಲ್ಲಿ ತೊಡಗಿದೆ. ಲಯನ್ಸ್ ಡಿಸ್ಟ್ರಿಕ್ಟ್‌ನಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿದೆ. ಪ್ರಸಕ್ತ ವರ್ಷ ಚಿಕ್ಕಮಕ್ಕಳಿಗೆ ಕಿಟ್ ನೀಡುವುದು, ಬಡಮಕ್ಕಳಿಗೆ ಊಟ ನೀಡುವ ಜತೆಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು. ಲಯನ್ಸ್ ಎಂದರೆ ಎಲ್ಲರೂ ಅಭಿಮಾನಪಡುವ ರೀತಿ ಮಾಡಬೇಕು. ಜತೆಗೆ ಪರಿಸರ ಸಂರಕ್ಷಣೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ನೂತನ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ಹೊನ್ನಾವರ ಲಯನ್ಸ್ ಕ್ಲಬ್ ಪ್ರತಿವರ್ಷ ಸಮಾಜಕ್ಕೆ ಗಣನೀಯ ಸೇವೆ ನೀಡುತ್ತಿದೆ. ಸೇವಾ ಚಟುವಟಿಕೆಯ ಮೂಲಕ ಪ್ರಸಿದ್ಧಿ ಹೊಂದಿದೆ. ಲಯನ್ಸ್ ಎನ್ನುವುದು ಸಂಪನ್ಮೂಲಗಳ ತಂಡ. ಹಿರಿಯ ಸದಸ್ಯರು ತಮ್ಮ ಅಮೂಲ್ಯವಾದ ಸಮಯ ವಿನಿಯೋಗಿಸಿದರೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎನ್ನುವುದನ್ನು ಈ ಹಿಂದಿನ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾಗ ಅರಿತುಕೊಂಡಿದ್ದೇನೆ. ಹಿರಿಯ- ಕಿರಿಯ ಸದಸ್ಯರ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಜನಸೇವೆ ಎನ್ನುವ ಪೂಜೆಗೆ ಬದ್ಧವಾಗಿದೆ. ಮನುಕುಲಕ್ಕೆ ಮಾಡುವ ಸೇವೆ ಅದು ದೇವರಿಗೆ ಮಾಡುವ ಸೇವೆಯಾಗಿದೆ. ನಾವು ಸ್ವಚ್ಛತೆಯ ಪರಿಪಾಠ ಮರೆತಿದ್ದೇವೆ. ಮಕ್ಕಳನ್ನು ಕೇವಲ ಕೆಲಸದ ಯಂತ್ರಗಳನ್ನಾಗಿಸುತ್ತಿದ್ದೇವೆ. ಆದರೆ ಲಯನ್ಸ್ ಕ್ಲಬ್ ಗಿಡಗಳನ್ನು ನೆಟ್ಟು ಪರಿಸರ ಜ್ಞಾನ ಮೂಡಿಸುತ್ತಿದೆ ಎಂದರು.ನಿಕಟಪೂರ್ವ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ತಮ್ಮ ಅವಧಿಯಲ್ಲಿ ವೃತ್ತಿಜೀವನದ ಒತ್ತಡದ ನಡುವೆಯೂ 68- 70 ಸೇವಾ ಚಟುವಟಿಕೆ ನಡೆಸಲಾಗಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಎಂ.ಜಿ. ನಾಯ್ಕ, ಕಾರ್ಯದರ್ಶಿ ಮಹೇಶ ನಾಯ್ಕ, ಖಜಾಂಚಿ ಶಿವಾನಂದ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ವಿನೋದ ನಾಯ್ಕ, ಡಾ. ಚಂದ್ರಶೇಖರ ಶೆಟ್ಟಿ, ಎಸ್.ಜೆ. ಕೈರನ, ವೀಣಾ ಉದಯ ನಾಯ್ಕ ಹಾಗೂ ಕ್ಲಬ್‌ನ ನಿರ್ದೇಶಕರು ಉಪಸ್ಥಿತರಿದ್ದರು. ವಿವಿಧ ವಲಯದಿಂದ ಆಗಮಿಸಿದ ಗಣ್ಯರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದರು. ಡಾ. ಸುರೇಶ ಕಾರ್ಯಕ್ರಮ ನಿರ್ವಹಿಸಿದರು.