ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಲಯನ್ಸ್ ಸಂಸ್ಥೆಯ ನಿಸ್ವಾರ್ಥ ಸೇವೆ ಶ್ಲಾಘನೀಯ. ಸಂಸ್ಥೆಯಿಂದ ಮತ್ತಷ್ಟು ಸಾಮಾಜಿಕ, ಶೈಕ್ಷಣಿಕ, ಪರಿಸರ, ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಚಲನಚಿತ್ರ ನಟ ಅನಿರುದ್ಧ್ ಜಾಟ್ಕರ್ ಹೇಳಿದರು.ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ 317 ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಎರಡನೇ ವರ್ಷದ ಸಾರ್ಥ ಸಮಾವೇಶದಲ್ಲಿ ಪಾಲ್ಗೊಂಡು ಸಾಮಾಜಿಕ ಸೇವೆಗಾಗಿ ನೀಡುವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸಂಸ್ಥೆಯನ್ನು ಅಮೆರಿಕದ ವ್ಯಕ್ತಿಯೊಬ್ಬರು ಆರಂಭಿಸಿದರು. ಈಗ ದೇಶದ ಎಲ್ಲೆಡೆಯೂ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತೆ ಸ್ಥಳೀಯವಾಗಿಯೂ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದರು.ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡಲಾಗುತ್ತಿದೆ. ಪ್ರಚಾರವಿಲ್ಲದ ದಾನ ಶ್ರೇಷ್ಠ. ಸಂಸ್ಥೆಯ ಸಾಮಾಜಿಕ, ಪರಿಸರ, ಆರೋಗ್ಯ ಶಿಬಿರ, ಶೈಕ್ಷಣಿಕ ಚಟುವಟಿಕೆಗಳಲ್ಲಿ ನಾನು ಪಾಲ್ಗೊಂಡಿದ್ದೇನೆ ಎಂದು ಅವರು ಹೇಳಿದರು.
ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆ. ಇಂತಹ ಗೌರವಪೂರ್ವಕ ಸಂಸ್ಥೆಯ ಸದಸ್ಯನಾಗಿರುವುದು ಗೌರವದ ಸೂಚಕ. ನಿಸ್ವಾರ್ಥ ಸೇವೆಗೆ ಇಲ್ಲಿ ಪ್ರಥಮ ಆದ್ಯತೆ ಇದೆ. ಸಂಸ್ಥೆಯ ಬೆಳವಣಿಗೆಗೆ ಪೂರಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಸ್ಥಳೀಯ ಸಮಸ್ಯೆಗಳನ್ನು ಸರಿ ಪಡಿಸಲು ಆದ್ಯತೆ ನೀಡಲಾಗಿದೆ. ಸ್ವಚ್ಛತೆ ಕಾಪಾಡಲು, ಹಸಿವು ಮುಕ್ತ ಸಮಾಜ ನಿರ್ಮಿಸಲು, ಪರಿಸರ ಕಾಪಾಡಲು, ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತಿದೆ ಎಂದರು.ಪದ್ಮಾಶ್ರೀ ಪುರಸ್ಕೃತೆ ಡಾ. ವಿಜಯಲಕ್ಷ್ತ್ರ್ಮಿ ದೇಶಮಾನೆ ಮಾತನಾಡಿ ಪ್ರತಿಯೊಬ್ಬರಲ್ಲೂ ಅದಮ್ಯ ಚೈತನ್ಯ ಶಕ್ತಿ ಇರುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ನಮ್ಮ ಆಲೋಚನೆ, ವರ್ತನೆ ಬದಲಾಯಿಸುತ್ತವೆ. ಸ್ವಾರ್ಥ ಬಿಟ್ಟು ಸಮಾಜಮುಖಿ ಚಿಂತನೆ ಬೆಳೆಸುತ್ತದೆ. ಜಡಶೀಲ ಪರಂಪರೆಯಿಂದ ಚಲನಶೀಲ ಪರಂಪರೆಯತ್ತ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ರಾಜ್ಯಪಾಲ ಎನ್. ಸುಬ್ರಹ್ಮಣ್ಯ ಮಾತನಾಡಿ ದೂರದೃಷ್ಟಿ, ಪರಿಸರ ಸಂರಕ್ಷಣೆ, ಯುವ ಜನತೆಯಲ್ಲಿ ಜಾಗೃತಿ, ಮಕ್ಕಳ ಕ್ಯಾನ್ಸರ್ ನಿಯಂತ್ರಣ, ಮಧುಮೇಹ ನಿವಾರಣೆ ಹಾಗೂ ಹಸಿವು ಮುಕ್ತ ಸಮಾಜ ನಿರ್ವಾಣ ಇದರ ಮೂಲ ಉದ್ದೇಶ. ಮಧುಮೇಹ ಒಂದು ಸಾಂಕ್ರಾಮಿಕ ರೋಗ, ಪ್ರತಿ ನೂರು ಜನರಲ್ಲಿ ಒಬ್ಬರಿಗೆ ಹರಡುತ್ತದೆ. ನಾವು ದೂರದೃಷ್ಟಿಗೆ ಮಧುಮೇಹಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದೇವೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಮಲ್ಟಿಪಲ್ ಚೇರ್ ಪರ್ಸನ್ ಡಾ.ಎನ್. ಕೃಷ್ಣೇಗೌಡ, ಸಂಪುಟ ಸಲಹೆಗಾರ ಕೆ. ದೇವೆಗೌಡ, ಮೊದಲನೇ ಉಪ ಜಿಲ್ಲಾ ರಾಜ್ಯಪಾಲ ಕೆ.ಎಲ್. ರಾಜಶೇಖರ್, ಎರಡನೇ ಉಪ ಜಿಲ್ಲಾ ರಾಜ್ಯಪಾಲ ಎಸ್. ಮತಿದೇವ್ ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಸಿ.ಡಿ. ಕೃಷ್ಣ, ಖಜಾಂಚಿ ಪುನೀತ್ ಕುಮರ್, ಜಿಲ್ಲಾ ರಾಯಭಾರಿ ವಿ. ವರ್ಷ ಮೊದಲಾದವರು ಇದ್ದರು.