ಹಳ್ಳಿಗಳ ಅಭಿವೃದ್ಧಿಗೆ ಸಂಘ ಸಂಸ್ಥೆ ಸಹಕಾರ ಅಗತ್ಯ

| Published : Mar 24 2025, 12:35 AM IST

ಸಾರಾಂಶ

ಹಳ್ಳಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮ ಕೊಡುಗೆ ಏನು ಎಂದು ಆಲೋಚಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳ ಅಭಿವದ್ಧಿಗೆ ಸರ್ಕಾರವನ್ನು ಟೀಕಿಸುವ ಬದಲು, ಸಂಘ- ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶಖರ್‌ ಹೇಳಿದರು.

ವಿಶ್ವೇಶ್ವರನಗರದ ಬಿಲ್ಡರ್ಸ್‌ ಅಸೋಸಿಯೇಷನ್‌ಆಪ್‌ ಇಂಡಿಯಾ ಸಭಾಂಗಣದಲ್ಲಿ ಮೈಸೂರಿನ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ- 317ಜಿ ಪ್ರಾಂತ್ಯ- 6, 7ರ ಪ್ರಾಂತೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಳ್ಳಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮ ಕೊಡುಗೆ ಏನು ಎಂದು ಆಲೋಚಿಸಬೇಕು. ಪ್ರತಿಯೊಂದು ಸಂಘ ಸಂಸ್ಥೆಗಳು, ಜನರು ಹಾಗೂ ಸಮಾಜ ಎಲ್ಲರೂ ಸೇರಿ ಹಳ್ಳಿಯನ್ನು ಕಟ್ಟಬೇಕು. ಗಾಂಧೀಜಿ ಅವರು ದೇಶದಲ್ಲಿ ಗ್ರಾಮ ಸ್ವರಾಜ್ಯ ವಾಗಬೇಕು ಎಂದು ಬಯಸಿದ್ದರು. ಆದರೆ ಪ್ರಸ್ತುತ ಹಳ್ಳಿಗಳು ವೃದ್ಧಾಶ್ರಮವಾಗಿ ರೂಪುಗೊಳ್ಳುತ್ತಿದ್ದು, ಇದನ್ನು ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

ಲಯನ್ಸ್ 195 ದೇಶಗಳಲ್ಲಿ ಕಾರ್ಯಚಟುವಟಿಕೆ ಹೊಂದಿದೆ. ದೇಶದ ಎಲ್ಲಾ ನಗರ, ಹಳ್ಳಿಗಳಲ್ಲಿ ಲಯನ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಲಯನ್ಸ್ ಸಂಸ್ಥೆ ಸೇವೆ ಹಾಗೂ ದೇಶಭಕ್ತಿ ಬಿತ್ತುತ್ತಿದೆ. ದೇಶದಲ್ಲಿ 6.65 ಲಕ್ಷ ಗಳ್ಳಿಗಳಿದ್ದು, 4 ಸಾವಿರ ನಗರಗಳು ಮಾತ್ರ ಉಳಿದಿವೆ. ಬಹುಪಾಲು ಮಂದಿ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದರು.

ಇತ್ತೀಚೆಗೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ನಮ್ಮ ನಾಗತಿಹಳ್ಳಿ ಶಾಲೆಗೆ ಈಗ ಶತಮಾನೋತ್ಸವ ಸಂಭ್ರಮ. ನಮ್ಮ ಸಂಪಾದನೆಯಲ್ಲಿ ಒಂದು ಭಾಗವನ್ನು ಹಳ್ಳಿ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಬೇಕು ಎಂದು ಸಲಹೆ ಅವರು ನೀಡಿದರು.

ಯೂರೋಪ್, ಫ್ರಾನ್ಸ್ ಹಳ್ಳಿಗಳಲ್ಲಿ ತಿರುಗಾಡಿದ ನಂತರ ಭಾರತದ ಹಳ್ಳಿಗಳು ಏತಕ್ಕೆ ಹೀಗೆ ಇವೆ ಎಂಬ ಸಂಕಟ ಉಂಟಾಗುತ್ತದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ದೇಶದಲ್ಲಿ ಕೆಲವೇ ಕೆಲವು ಹಳ್ಳಿಗಳು ಮಾತ್ರ ಯೋಗ್ಯವಾಗಿದೆ. ಹಾಗಾಗಿ ಹಳ್ಳಿಗಳನ್ನು ಕಟ್ಟುವ ಕಾರ್ಯವನ್ನು ಎಲ್ಲರು ಮಾಡಬೇಕು. ಹಳ್ಳಿಯ ಜನರನ್ನು ಆರ್ಥಿಕ ಸ್ವಾವಲಂಬಿಯಾಗಿ ರೂಪಿಸಬೇಕು ಎಂದರು.

ಪ್ರಾಂತ್ಯ 6ರ ಅಧ್ಯಕ್ಷ ಶಿವರಾಮು ಮಾತನಾಡಿ, ಲಯನ್ ಸಂಸ್ಥೆ 200 ದೇಶಗಳು, 48 ಸಾವಿರ ಸಂಸ್ಥೆಗಳು ಇವೆ. ಸಂಸ್ಥೆಯು ಶತಮಾನದ ಇತಿಹಾಸ ಹೊಂದಿದೆ ಎಂದರು.

ಪ್ರಾಂತ್ಯ 7ರ ಪ್ರಾಂತೀಯ ಅಧ್ಯಕ್ಷ ಉಮೇಶ್ ಮಾತನಾಡಿ, ನಮ್ಮ ಸಂಸ್ಕೃತಿ ಉಳಿಯಲು ಹಳ್ಳಿಗಳು ಕಾರಣ. ಹಳ್ಳಿಗಳಲ್ಲಿ ಇಂದಿಗೂ ಹಬ್ಬ ಹರಿದಿನಗಳು ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಸಂಸ್ಕೃತಿ ಉಳಿಸಲು ಎಲ್ಲರು ಶ್ರಮಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಎನ್. ಕೃಷ್ಣೇಗೌಡ, ಕೆ. ದೇವೇಗೌಡ, ಶಿವರಾಮಮೂರ್ತಿ, ಉಮೇಶ್, ಚಂದ್ರಶೇಖರ್, ಜಯರಾಮು, ಶ್ರೀನಿವಾಸ್, ಜಯಕುಮಾರ್ ಇದ್ದರು.