ಜನರ ಮನದಲ್ಲಿ ನೆಲೆಸಿದ ಲಯನ್ಸ್ ಸಂಸ್ಥೆ

| Published : Jul 16 2024, 12:39 AM IST

ಸಾರಾಂಶ

ಗೋಕಾಕ: ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜಗತ್ತಿನಾದ್ಯಂತ ಲಯನ್ಸ್ ಸಂಸ್ಥೆ ಕಾರ್ಯನಿರ್ವಹಿಸಿ ಜನರ ಮನದಲ್ಲಿ ನೆಲೆಸಿದೆ ಎಂದು ಲಯನ್ಸ್ ಕ್ಲಬ್‌ನ ಜಾಗತಿಕ ಸೇವಾ ತಂಡದ ಸಂಯೋಜಕಿ ಭಾರತಿ ವಡವಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜಗತ್ತಿನಾದ್ಯಂತ ಲಯನ್ಸ್ ಸಂಸ್ಥೆ ಕಾರ್ಯನಿರ್ವಹಿಸಿ ಜನರ ಮನದಲ್ಲಿ ನೆಲೆಸಿದೆ ಎಂದು ಲಯನ್ಸ್ ಕ್ಲಬ್‌ನ ಜಾಗತಿಕ ಸೇವಾ ತಂಡದ ಸಂಯೋಜಕಿ ಭಾರತಿ ವಡವಿ ಹೇಳಿದರು.

ಭಾನುವಾರ ನಗರದ ಸಮುದಾಯ ಭವನದಲ್ಲಿ ಇಲ್ಲಿನ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸೇವೆಗಳಿಂದ ನೆಮ್ಮದಿ ದೊರೆಯುತ್ತದೆ. ಎಲ್ಲವನ್ನು ನೀಡಿದ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ಮೂಲಕ ಜನ್ಮ ಸಾರ್ಥಕಪಡಿಸಿಕೊಳ್ಳಲು ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆಯಾಗಿದೆ. ಇಲ್ಲಿಯ ಸಂಸ್ಥೆ 45 ವರ್ಷಗಳಿಂದ ನೇತ್ರಚಿಕಿತ್ಸೆ, ನೇತ್ರದಾನ, ಅನ್ನದಾಸೋಹದಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಶ್ಲಾಘಿಸಿದ ಅವರು, ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಮಾಜ ಸೇವೆ ದೊರೆಯಲಿ ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಅಶೋಕ ಲಗಮಪ್ಪಗೋಳ, ಕಾರ್ಯದರ್ಶಿಯಾಗಿ ಸುರೇಶ ಶಿಂಧಿಹಟ್ಟಿ, ಖಜಾಂಚಿಯಾಗಿ ಪ್ರಶಾಂತ ಅಂಕದವರ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ವೇದಿಕೆಯ ಮೇಲೆ ಪ್ರೋ.ಬಿ.ಬಿ. ನಂದ್ಯಾಲ, ಡಾ.ಅಶೋಕ ಪಾಟೀಲ, ಶಂಕರ ದೊಡ್ಡಮನಿ ಇದ್ದರು.