ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಸಂಸ್ಥೆ ಸ್ಥಾಪನೆ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲೆಗೆ ದಾನಿಗಳಿಂದ ಸಂಗ್ರಹಿಸಿದ ಧನ, ಲ್ಯಾಪ್ ಟಾಪ್ ಮತ್ತು ಧ್ವನಿವರ್ಧಕ ವಿತರಣೆ ಮಾಡಲಾಯಿತು.ಲಯನ್ ಕ್ಲಬ್‌ನ ಜಿಲ್ಲಾ ರಾಜ್ಯಪಾಲ ಸುಬ್ರಹ್ಮಣ್ಯ ಮಾತನಾಡಿ, ಕಾನ್ವೆಂಟ್ ನಲ್ಲಿ ಓದಿದವರೆಲ್ಲ ಎತ್ತರಕ್ಕೆ ಹೋಗುತ್ತಾರೆ ಎಂಬ ಭ್ರಾಂತಿಯು ಸುಳ್ಳಾಗಿದೆ. ನಾನು ಸೇರಿದಂತೆ ಅನೇಕರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಶ್ರದ್ಧೆಯಿಂದ ಓದಿದರೆ ಪ್ರತಿಯೊಬ್ಬರೂ ಭಾರತಕ್ಕೆ ಒಳ್ಳೆಯ ಪ್ರಜೆಯಾಗುತ್ತಾರೆ ಎಂದರು.
ಅಂಧತ್ವ ನಿವಾರಣೆ, ಸ್ವಚ್ಛತೆ, ಮಧುಮೇಹ ಹಾಗೂ ಬಾಲ್ಯ ಕ್ಯಾನ್ಸರ್ ವಿರುದ್ಧ ಜಾಗೃತಿ- ನಮ್ಮ ಲಯನ್ಸ್ ಸಂಸ್ಥೆ ಪ್ರಮುಖ ಚಟುವಟಿಕೆಗಳಾಗಿವೆ. ಮೌಲ್ಯಾಧಾರಿತ ಶಿಕ್ಷಣದತ್ತ ನಮ್ಮ ಗಮನವಿದೆ ಎಂದು ವಿವರಿಸಿದರು.ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಲಯನ್ಸ್ ಕ್ಲಬ್ ಸದಸ್ಯರಾದ ಸಿ.ಎಸ್.ನಾಗರಾಜು ಸೇರಿದಂತೆ ದಾನಿಗಳು ಇಂತಹ ಶ್ರೇಷ್ಠ ಸೇವೆಗಳಲ್ಲಿ ತೊಡಗಿರುವುದು ಅಭಿನಂದನೀಯ. ಫ್ರೆಂಚ್ ರಾಕ್ ಸಂಸ್ಥೆ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಮನ್ಮುಲ್ ಡೈರಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಖರ್ಚು ವೆಚ್ಚವನ್ನೂ ಸಂಸ್ಥೆ ಭರಿಸಲಿದೆ ಎಂದರು.
ಲಯನ್ಸ್ ಕ್ಲಬ್ ಆಫ್ ಫ್ರೆಂಚ್ ರಾಕ್ಸ್ ಅಧ್ಯಕ್ಷ ಕರಿಗೌಡ ಮಾತನಾಡಿ, 12 ದಿನಗಳ ಕಾಲ ಆರೋಗ್ಯ ಶಿಬಿರ ಹಮ್ಮಿಕೊಂಡು 150 ಜನ ಶ್ರವಣ ದೋಷ ಹೊಂದಿದವರಿಗೆ ಉಚಿತವಾಗಿ ಶ್ರವಣ ಯಂತ್ರ ವಿತರಣೆ ಮಾಡಲಾಗಿದೆ ಎಂದರು.ಲಯನ್ಸ್ ಕ್ಲಬ್‌ನ ಜಿಲ್ಲಾ ನಿರ್ದೇಶಕ ಸಿ.ಡಿ.ಕೃಷ್ಣರ ಮನವಿ ಮೇರೆಗೆ ಜಿಲ್ಲಾ ರಾಜ್ಯಪಾಲ ಸುಬ್ರಹ್ಮಣ್ಯ ಅವರು ಮುಂದಿನ ದಿನಗಳಲ್ಲಿ ಇನ್ನೆರಡು ಕಂಪ್ಯೂಟರ್ ಶಾಲೆಗೆ ನೀಡುವುದಾಗಿ ಘೋಷಿಸಿದರು.
ಈ ವೇಳೆ ಗಣ್ಯರಿಗೆ ಎಸ್ ಡಿಎಂಸಿ ಹಾಗೂ ಶಿಕ್ಷಕರ ವತಿಯಿಂದ ಮೈಸೂರು ಪೇಟ ಶಾಲು ಹೊಂದಿಸಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಪುಟ್ಬ ಬಸವಗೌಡ, ಕುರಹಟ್ಟಿ ಸ್ವಾಮಿಗೌಡ, ಸಂತೋಷ್, ರಾಧಾಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪಿ.ಮಂಜುನಾಥ್, ಹಾಲಿ ಅಧ್ಯಕ್ಷ ಎಂ.ಡಿ.ಕುಮಾರ್, ಶಿಕ್ಷಕರಾದ ಎಂ.ಎಚ್.ನಂದೀಶ್ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದದವರು ಇತರರಿದ್ದರು.