ಲಯನ್ಸ್‌ ವತಿಯಿಂದ ಕೃತಕ ಕಾಲು ಜೋಡಣಾ ಶಿಬಿರ

| Published : Apr 17 2025, 12:06 AM IST

ಸಾರಾಂಶ

ಈಗಾಗಲೇ ಸುಮಾರು ೪೦ ಮಂದಿ ಅರ್ಹ ಫಲಾನುಭವಿಗಳ ಕೃತಕ ಕಾಲು ಜೋಡಣೆ ಮಾಡಲಾಗಿದೆ, ಕಾಲಿಲ್ಲದೆ ಬವಣೆ ಪಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಉತ್ತಮ ಗುಣಮಟ್ಟದ ಕೃತಕ ಕಾಲಿನ ಜೋಡಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಪ್ರಸ್ತುತ ವರ್ಷದ ಬಹುಮುಖ್ಯ ಯೋಜನೆ ಇದಾಗಿದ್ದು, ಅಂದಾಜು ಸುಮಾರು ೧೫ ಲಕ್ಷ ರು. ವೆಚ್ಚ ತಗಲುವುದು. ಕೃತಕ ಕಾಲು ಜೋಡಿಸಿದ ವ್ಯಕ್ತಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿದೆ ಎಂಬ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವಿವಿಧ ಘಟನೆ ಹಾಗೂ ಆರೋಗ್ಯ ಕಾರಣಗಳಿಂದ ಕಾಲು ಕಳೆದುಕೊಂಡಿರುವ ೧೦೦ ಮಂದಿಗೆ ಲಯನ್ಸ್‌ ಸೇವಾಸಂಸ್ಥೆ ವತಿಯಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಲ.ಬಿ.ಎಂ. ಭಾರತಿ ಗುತ್ತಿಗಾರು ಹೇಳಿದರು.

ಪಟ್ಟಣದ ಪುಷ್ಪಗಿರಿ ಕನ್ವೆನ್ಷನ್ ಸಭಾಂಗಣದಲ್ಲಿ ಪಟ್ಟಣದ ಲಯನ್ಸ್ ಕ್ಲಬ್ ಸನ್ ರೈಸ್ ಆಯೋಜಿಸಿದ್ದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಸುಮಾರು ೪೦ ಮಂದಿ ಅರ್ಹ ಫಲಾನುಭವಿಗಳ ಕೃತಕ ಕಾಲು ಜೋಡಣೆ ಮಾಡಲಾಗಿದೆ, ಕಾಲಿಲ್ಲದೆ ಬವಣೆ ಪಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಉತ್ತಮ ಗುಣಮಟ್ಟದ ಕೃತಕ ಕಾಲಿನ ಜೋಡಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಪ್ರಸ್ತುತ ವರ್ಷದ ಬಹುಮುಖ್ಯ ಯೋಜನೆ ಇದಾಗಿದ್ದು, ಅಂದಾಜು ಸುಮಾರು ೧೫ ಲಕ್ಷ ರು. ವೆಚ್ಚ ತಗಲುವುದು. ಕೃತಕ ಕಾಲು ಜೋಡಿಸಿದ ವ್ಯಕ್ತಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿದೆ ಎಂಬ ಮಾಹಿತಿ ನೀಡಿದರು.

ದೇಶಾದ್ಯಂತ ಲಕ್ಷಾಂತರ ಸದಸ್ಯತ್ವ ಹೊಂದಿರುವ ಲಯನ್ಸ್ ಕ್ಲಬ್ ನಿಸ್ವಾರ್ಥದಿಂದ ವಿವಿಧ ಸಾಮಾಜಿಕ ಸೇವೆ ಸಲ್ಲಿಸಲು ಪ್ರೇರಣೆ ನೀಡುವಂತಹ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಲಯನ್ಸ್ ಕ್ಲಬ್‌ಗಳಿಗೆ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಮಾಡುವುದರ ಜೊತೆಗೆ ಲಯನ್ಸ್ ಸದಸ್ಯರು ಹಾಗೂ ಪದಾಧಿಕಾರಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಶಕ್ತರಿಗೆ ಹಾಗೂ ಅಗತ್ಯ ಉಳ್ಳವರಿಗೆ ಸಹಾಯ ಮಾಡಬೇಕು. ಸೇವಾ ಸಾಧನೆ, ಸಮಾಜ ಸೇವೆ ಮಾಡಲು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಲಯನ್ಸ್ ಕ್ಲಬ್ ಉತ್ತಮ ಅವಕಾಶವನ್ನು ಒದಗಿಸಿಕೊಡುತ್ತದೆ. ಅಂಗವಿಕಲರಿಗೆ, ದುರ್ಬಲರಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ವಿವಿಧರೀತಿಯಲ್ಲಿ ಕ್ಲಬ್ ನೆರವಾಗುತ್ತಿದೆ. ಅದು ಯುವಜನರಿಗೆ ಹಾಗೂ ಇತರರಿಗೆ ಪ್ರೇರಣೆ ನೀಡುವಂತದ್ದಾಗಿದೆ. ನೀವು ಸಮಾಜಕ್ಕೆ ಮಾಡುತ್ತಿರುವ ಸಹಾಯವನ್ನು ಹೆಚ್ಚಿನ ರೀತಿಯಲ್ಲಿ ತಿಳಿಸುವ ಕೆಲಸವಾಗಬೇಕು. ಆಗ, ಮತ್ತಷ್ಟು ಮಂದಿ ಉತ್ತೇಜನಗೊಂಡು ಸೇವಾ ಕಾರ್ಯದಲ್ಲಿ ತೊಡಗುತ್ತಾರೆ ಎಂದು ಸಲಹೆ ನೀಡಿದರು. ಜಿಲ್ಲಾ ಶ್ರೇಯಾಂಕದಲ್ಲಿ ಕ್ಲಬ್ ೫ನೇ ಸ್ಥಾನಕ್ಕೆ ಏರಿದ್ದು, ಇದಕ್ಕೆ ಚಾರ್ಟರ್ ಅಧ್ಯಕ್ಷ ಡಾ.ವಿ. ಮಹೇಶ್ ಹಾಗೂ ಅಧ್ಯಕ್ಷ ವಿ. ಗಿರೀಶ್ ನೇತೃತ್ವದ ಸದಸ್ಯರ ಸಾಮೂಹಿಕ ಪ್ರಯತ್ನವೇ ಕಾರಣ. ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಕ್ಲಬ್ ಬದ್ಧತೆಗೆ ಸಾಕ್ಷಿಯಾಗಿದೆ. ಜಿಲ್ಲಾ ಗವರ್ನರ್ ಆಗಿ ನನ್ನ ಅವಧಿಯಲ್ಲಿ ನಾನು ಕಂಡ ಅತ್ಯುತ್ತಮ ಚಾರ್ಟರ್ ಅಧ್ಯಕ್ಷರಲ್ಲಿ ಒಬ್ಬರು ಲ.ಡಾ. ವಿ.ಮಹೇಶ್, ಇವರು ಸಮಗ್ರತೆಯ ವ್ಯಕ್ತಿ, ಹೆಚ್ಚು ಬದ್ಧತೆ ಹೊಂದಿದ್ದಾರೆ ಮತ್ತು ತಮ್ಮ ಕ್ಲಬ್ ಅನ್ನು ನಿರ್ಮಿಸುವ ಮತ್ತು ಸಮುದಾಯಕ್ಕೆ ಸಹಾಯ ಮಾಡುವಲ್ಲಿ ಬಹಳ ಆಕರ್ಷಕರಾಗಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾ ಗವರ್ನರ್ ಅವರು ಕ್ಲಬ್‌ನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಸಮುದಾಯ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಗಳನ್ನು ಶ್ಲಾಘಿಸಿದರು. ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಸನ್ ರೈಸ್ ನ ಚಾರ್ಟರ್ ಅಧ್ಯಕ್ಷ ಲ.ಡಾ.ವಿ. ಮಹೇಶ್ ಉಪಸ್ಥಿತಿಯಲ್ಲಿ ಕ್ಲಬ್‌ನ ಅಧ್ಯಕ್ಷ ಲ.ಎ.ಗಿರೀಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಲ.ಜೆ.ಸಿ.ಗೋವಿಂದರಾಜು ಕ್ಲಬ್‌ನ ವಾರ್ಷಿಕ ವರದಿ ವಾಚಿಸಿದರು.

ಇದೇ ಸಂದರ್ಭದಲ್ಲಿ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪಿ.ಬಿ. ಧನ್ಯಶ್ರೀ ಮತ್ತು ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹಾಯಕ ಕ್ಯಾಬಿನೆಟ್ ಕಾರ್ಯದರ್ಶಿ ಲ.ಚಂದ್ರೇಗೌಡ ಪ್ರಾಂತೀಯ ಅಧ್ಯಕ್ಷ ಲ.ನಾಗರಾಜ್, ಲ.ಡಿ.ಕೆ. ಮಂಜುನಾಥ್, ವಲಯ ಅಧ್ಯಕ್ಷೆ ಲ.ರೂಪ, ಲ.ಶ್ವೇತಾ ಆನಂದ್, ಲ.ಆಣತಿ ಆನಂದ್, ಲ.ವೆಂಕಟೇಶ್ ಹೆಬ್ಬಾರ್, ಲ.ತಿಮ್ಮ ಶೆಟ್ರು, ಲ.ಡಾ.ಯುವರಾಜ್, ಲ.ಕೆ.ಆರ್.ಉಮೇಶ್ ಲ.ನಂಜುಂಡೇಗೌಡ, ಲ.ರಂಗಸ್ವಾಮಿ, ಬಾಬು, ಲ.ಪರಮೇಶ್, ಲ.ಅಶೋಕ್, ಗುರುಮೂರ್ತಿ, ತೊಪೇಗೌಡ, ಜಗದೀಶ್, ಚಂದ್ರು, ಕಾಂತರಾಜು, ಕೆಇಬಿ ಗಿರೀಶ್, ಕುಮಾರ್, ತಿಮ್ಮಪ್ಪಯ್ಯ, ಕ್ಲಬ್‌ನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.