ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ತಾಲೂಕು ಕಚೇರಿಯ ಆವರಣ ಹಾಗೂ ಜಿಲ್ಲಾ ಆಟದ ಮೈದಾನದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವ ದೃಶ್ಯಗಳು ಕಂಡು ಬಂದಿವೆ.

ಹನುಮಂತಪ್ಪ ವೃತ್ತದಲ್ಲಿರುವ ಚಿಕ್ಕಮಗಳೂರು ತಾಲೂಕು ಕಚೇರಿ ಆವರಣದಲ್ಲಿ ನೂರಾರು ಮಧ್ಯದ ಬಾಟಲಿಗಳು ಬಿದ್ದಿರುವುದು ಮಂಗಳವಾರ ಬೆಳಕಿಗೆ ಬಂದಿದೆ. ತಾಲೂಕು ಕಚೇರಿ ಆವರಣದಲ್ಲಿಯೇ ಮಹಿಳಾ ಪೊಲೀಸ್‌ ಠಾಣೆ ಇದೆ. ಆದರೂ ಸಂಜೆಯಾಗುತ್ತಿದಂತೆ ತಾಲೂಕು ಕಚೇರಿ ಆವರಣವು ಕುಡುಕರ ಅಡ್ಡೆ ಆಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

ಮುಖ್ಯವಾಗಿ ತಾಲೂಕು ಕಚೇರಿಗೆ ಆವರಣದಲ್ಲಿ ಮಹಿಳಾ ಪೊಲೀಸ್‌ ಠಾಣೆ ಇರುವುದರಿಂದ ಎರಡು ಗೇಟ್‌ಗಳು ದಿನದ 24 ಗಂಟೆ ತೆರೆದಿರುತ್ತದೆ. ಇದನ್ನು ಬಂಡವಾಳ ಮಾಡಿಕೊಂಡ ಕುಡುಕರು, ಸಂಜೆಯಾಗುತ್ತಿದಂತೆ ತಾಲೂಕು ಕಚೇರಿ ಆವರಣದಲ್ಲಿ ಪಾರ್ಟಿ ಮಾಡುತ್ತಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದ ಮದ್ಯದ ಬಾಟಲಿಗಳು ಬಿದ್ದಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನ ನೀಡದಿರುವುದು, ಚಿಕ್ಕಮಗಳೂರಿನ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಪಕ್ಕದಲ್ಲಿಯೇ ರುಚಿಕರ ತಿಂಡಿ ಅಂಗಡಿ

ತಾಲೂಕು ಕಚೇರಿ ಪಕ್ಕದಲ್ಲಿ ಸಂಜೆ ಆಗುತ್ತಿದಂತೆ ಪುಡ್‌ ಸ್ಟಾಲ್‌ಗಳು ಕಾರ್ಯಾರಂಭಗೊಳ್ಳುತ್ತವೆ. ಈ ಅವಕಾಶ ಬಳಕೆ ಮಾಡಿಕೊಂಡು ಮದ್ಯದೊಂದಿಗೆ ಬರುವ ಕುಡುಕರು ರುಚಿಕರ ತಿಂಡಿಯೊಂದಿಗೆ ತಾಲೂಕು ಕಚೇರಿಯ ಆವರಣವನ್ನು ಬಾರ್‌ ಅಂಡ್‌ ರೆಸ್ಟೋರೆಂಟ್‌ ಆಗಿ ಮಾಡಿಕೊಳ್ಳುತ್ತಿದ್ದಾರೆ.

ರಾತ್ರಿಯಾಗುತ್ತಿದಂತೆ ನಗರದ ಪ್ರಮುಖ ಮೈದಾನದ ಖಾಲಿ ಜಾಗಗಳು ಕುಡುಕರ ಅಡ್ಡೆಗಳಾಗಿ ಪರ್ವತೆಯಾಗಿ ಮಾರ್ಪಾಡುಗೊಳ್ಳುತ್ತಿವೆ.

ಜಿಲ್ಲಾ ಆಟದ ಮೈದಾನದಲ್ಲಿಯೂ ಆದೇ ಕಥೆ

ತಾಲೂಕು ಕಚೇರಿ ಆವರಣದಲ್ಲಿ ಮಾತ್ರವಲ್ಲದೇ, ಜಿಲ್ಲಾ ಆಟದ ಮೈದಾನದವೂ ಕುಡುಕರ ತಾಣವಾಗಿದೆ. ಮೈದಾನದಲ್ಲಿ ರಾಶಿ ರಾಶಿ ಮಧ್ಯದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿದೆ. ಕೆಲವು ಬಾಟಲಿಗಳು ಒಡೆದು ಗಾಜಿನ ಚೂರುಗಳಲ್ಲಿ ಅಲ್ಲಲ್ಲಿ ಬಿದ್ದಿವೆ, ಮಕ್ಕಳು ಆಟವಾಡುವ ಜಾಗವಾಗಿದ್ದರೂ ಆ ಬಗ್ಗೆ ಕುಡುಕರಿಗೆ ಕಾಳಜಿ ಇಲ್ಲವಾಗಿದೆ ಎನ್ನುತ್ತಾರೆ ಕ್ರೀಡಾ ಪ್ರೇಮಿಗಳು.

ಕಸಕ್ಕೆ ಬೆಂಕಿ

ಇನ್ನೂ ಜಿಲ್ಲಾ ಆಟದ ಮೈದಾನದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡದೇ ಸಂಬಂಧಪಟ್ಟ ಸಿಬ್ಬಂದಿ ಕಸ ಬಿದ್ದ ಜಾಗದಲ್ಲಿ ಬೆಂಕಿ ಹಾಕಿ ಹೋಗುತ್ತಿದ್ದಾರೆ. ಬೇಸಿಗೆ ಆಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಒಣಗಿದ ಮರ ಎಲೆ ಬಿದ್ದಿದ್ದು, ದೊಡ್ಡ ಅನಾಹುತಗಳಿಗೆ ಇದು ಎಡೆ ಮಾಡಿಕೊಡಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಸುಸಂಸ್ಕೃತರಿಗೆ ಹೆಸರು ವಾಸಿಯಾದ ಜಿಲ್ಲೆಯಾಗಿದೆ. ಈ ರೀತಿ ಕೆಲವು ಕಿಡಿಗೇಡಿಗಳು ನಡೆದುಕೊಳ್ಳುವುದರಿಂದ ತಪ್ಪು ಭಾವನೆ ಮೂಡಲಿದೆ. ಸ್ವಚ್ಛಗೊಳಿಸಿ, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಜತೆಗೆ, ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಎನ್,ಎಂ.ನಾಗರಾಜ್‌ ಜಿಲ್ಲಾಧಿಕಾರಿ, ಚಿಕ್ಕಮಗಳೂರು.

ತಾಲೂಕು ಕಚೇರಿ ಆವರಣ ಹಾಗೂ ಮಹಿಳಾ ಪೊಲೀಸ್‌ ಠಾಣೆ ಪಕ್ಕದಲ್ಲಿ ಈ ರೀತಿ ಮಧ್ಯದ ಬಾಟಲಿಗಳು ಬಿದ್ದಿವೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಸಚಿನ್‌ ಗೌಡ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ ಘಟಕ.