ಈ ದೇವರಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಪ್ರಸಾದ

| Published : Mar 23 2025, 01:32 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಸಮೀಪದ ಕೆಲವಡಿ-ಲಿಂಗಾಪುರ ಗ್ರಾಮದಲ್ಲಿ ಶನಿವಾರ ನಡೆದ ಲಕ್ಷ್ಮೀ ರಂಗನಾಥ ಜಾತ್ರೆಯಲ್ಲಿ ಭಕ್ತರು ನೆಚ್ಚಿನ ಕನಕರಾಯ ದೇವರಿಗೆ ಮದ್ಯ ನೈವೇದ್ಯ ಮಾಡಿದರು. ಜಾತ್ರೆಯಲ್ಲಿ ಭಕ್ತರಿಗೆ ಅರ್ಚಕರು ನೀಡಿದ ಮದ್ಯದ ಪ್ರಸಾದ ಪಡೆದು ಪುಣಿತರಾದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಸಮೀಪದ ಕೆಲವಡಿ-ಲಿಂಗಾಪುರ ಗ್ರಾಮದಲ್ಲಿ ಶನಿವಾರ ನಡೆದ ಲಕ್ಷ್ಮೀ ರಂಗನಾಥ ಜಾತ್ರೆಯಲ್ಲಿ ಭಕ್ತರು ನೆಚ್ಚಿನ ಕನಕರಾಯ ದೇವರಿಗೆ ಮದ್ಯ ನೈವೈದ್ಯ ಮಾಡಿದರು. ಜಾತ್ರೆಯಲ್ಲಿ ಭಕ್ತರಿಗೆ ಅರ್ಚಕರು ನೀಡಿದ ಮದ್ಯದ ಪ್ರಸಾದ ಪಡೆದು ಪುಣಿತರಾದರು.

ಈ ಜಾತ್ರೆಯಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿ ಭಕ್ತರಿಗೆಲ್ಲ ಮದ್ಯವನ್ನೇ ಪ್ರಸಾದವನ್ನಾಗಿ ನೀಡಿದ ವಿಶೇಷ ಜಾತ್ರೆ ಇದಾಗಿದೆ. ಭಕ್ತರು ಬೆಳಗ್ಗೆಯಿಂದಲೇ ತಮಗಿಷ್ಟವಾದ ಮದ್ಯ ತೆಗೆದುಕೊಂಡು ದೇವಸ್ಥಾನಕ್ಕೆ ಆಗಮಿಸಿ, ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಲು ಕನಕರಾಯನಿಗೆ ಭಕ್ತಿಯಿಂದ ಬೇಡಿಕೊಂಡು ಮದ್ಯ ಸಮರ್ಪಿಸಿದರು.

ಕೆಲವಡಿ, ಲಿಂಗಾಪುರ ಗ್ರಾಮಗಳಿಂದ ಬೆಂಗಳೂರು, ಮಂಗಳೂರು, ಗೋವಾ ಮುಂತಾದ ಮುಂತಾದೆಡೆ ಕೆಲಸ ಅರಸಿ ಗುಳೆ ಹೋದ ಸ್ಥಳೀಯರು ಆರಾದ್ಯ ದೇವರ ಜಾತ್ರೆಗೆ ಆಗಮಿಸಿದ್ದರು. ಕೆಲವಡಿ ರಂಗನಾಥ ಹಾಗೂ ಕನಕರಾಯರ ದೇವಸ್ಥಾನಗಳಿಗೆ ಬರುವ ಭಕ್ತರು, ತಮ್ಮ ಕಷ್ಟಗಳ ನಿವಾರಣೆಗೆ ಅಥವಾ ಬೇಡಿಕೆ ಪೂರೈಸುವಂತೆ ಪ್ರಾರ್ಥಿಸಿ ಮಧ್ಯದ ಬಾಟಲಿಗಳು ಸಮರ್ಪಿಸುವುದಾಗಿ ಬೇಡಿಕೊಳ್ಳುತ್ತಾರೆ. ಅದರಂತೆ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಿದಾಗ ಇಲ್ಲಿಗೆ ಬಂದು ಮದ್ಯದ ಬಾಟಲಿಗಳನ್ನು ತಂದು ದೇವರಿಗೆ ನೈವೇದ್ಯ ಅರ್ಪಿಸಿ, ಹರಕೆ ತೀರಿಸಿಕೊಳ್ಳುತ್ತಾರೆ.

ಬೇರೆ ಊರಿನಿಂದ ಬರುವ ಭಕ್ತರು ಕ್ವಾಲಿಟಿ ಮದ್ಯದಿಂದ ಹಿಡಿದು ಬಿಯರ್, ವಿಸ್ಕಿ, ರಮ್ ಹೀಗೆ ತಮ್ಮ ಭಕ್ತಿ ಹಾಗೂ ತಾವು ಸೇವಿಸುವ ಇಷ್ಟದ ಮದ್ಯವನ್ನು ತೆಗೆದುಕೊಂಡು ದೇವಸ್ಥಾನಕ್ಕೆ ತೆರಳಿ ದೇವರಿಗೆ ಶನಿವಾರ ನೈವೇದ್ಯ ಅರ್ಪಿಸಿದರು.