ಸಾರಾಂಶ
2525 ಕೋಟಿ ರು. ಅಧಿಕ ಅಬಕಾರಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ನೆರೆ ರಾಜ್ಯಗಳ ಬೆಲೆ ಆಧರಿಸಿ ಮದ್ಯದ ಬೆಲೆ ಪರಿಷ್ಕರಣೆ ಮಾಡಲಾಗಿದೆ.
ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದ್ದು, ಕಳೆದ ಸಾಲಿಗಿಂತ 2525 ಕೋಟಿ ರುಪಾಯಿ ಅಧಿಕ ರಾಜಸ್ವ ಸಂಗ್ರಹ ಗುರಿ ಹೊಂದಿದೆ.2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ರು. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದ್ದು, ಜನವರಿ ಅಂತ್ಯದವರೆಗೂ 28,181 ಕೋಟಿ ರು. ಸ್ವೀಕೃತವಾಗಿದೆ. ಇದೀಗ ಬೇರೆ ರಾಜ್ಯಗಳ ಬೆಲೆಗಳಿಗೆ ಅನುಗುಣವಾಗಿ ಮದ್ಯದ ಬೆಲೆಗಳನ್ನು ಕರ್ನಾಟಕದಲ್ಲೂ ಪರಿಷ್ಕರಿಸುವುದರಿಂದ 2024-25ನೇ ಸಾಲಿಗೆ 38,525 ಕೋಟಿ ರು. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.ಅಬಕಾರಿ ಇಲಾಖೆಯ ಎಲ್ಲ ಸೇವೆಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಇಲಾಖೆಯು ಒದಗಿಸುವ ಎಲ್ಲ ಸೇವೆಗಳಿಗೆ ಸಮಯದ ಮಿತಿ ನಿಗದಿಪಡಿಸಲಿದ್ದು, ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.