ವಸತಿಪ್ರದೇಶದಲ್ಲಿ ಮದ್ಯದಂಗಡಿ: ತೆರವಿಗೆ ಶಾಸಕಿ ಲತಾ ಮಲ್ಲಿಕಾರ್ಜುನ ತಾಕೀತು

| Published : Aug 18 2024, 01:57 AM IST

ವಸತಿಪ್ರದೇಶದಲ್ಲಿ ಮದ್ಯದಂಗಡಿ: ತೆರವಿಗೆ ಶಾಸಕಿ ಲತಾ ಮಲ್ಲಿಕಾರ್ಜುನ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯದಂಗಡಿ ಸುತ್ತಮುತ್ತ ಬಿದ್ದಿರುವ ಮೂರು ಟ್ರಕ್‌ ಮದ್ಯದ ಖಾಲಿ ಬಾಟಲ್‌ಗಳನ್ನು ಹೊರಗಡೆ ಸಾರ್ವಜನಿಕರು ಸಾಗಿಸಿದ್ದಾರೆ.

ಹರಪನಹಳ್ಳಿ: ವಸತಿ ಪ್ರದೇಶದಲ್ಲಿ ಮದ್ಯದಂಗಡಿ ಇರುವ ಬಗ್ಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಇಲ್ಲಿಯ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಅಂತಹ ಮದ್ಯದಂಗಡಿ ಸ್ಥಳಾಂತರಿಸಿ ಅಬಕಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಕೊಟ್ಟೂರು ಸರ್ಕಲ್‌ ನಲ್ಲಿ ವಸತಿ ಪ್ರದೇಶದಲ್ಲಿ ಎಂಎಸ್‌ಐಎಲ್‌ ಮದ್ಯದಂಗಡಿ ಇದೆ. ಜನವಸತಿ ಹಾಗೂ ಹತ್ತಿರದಲ್ಲಿ ದೇವಸ್ಥಾನವಿದೆ. ಇಂತಹ ಸ್ಥ‍ಳದಲ್ಲಿ ಮದ್ಯದಂಗಡಿ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಮದ್ಯದಂಗಡಿ ಸುತ್ತಮುತ್ತ ಬಿದ್ದಿರುವ ಮೂರು ಟ್ರಕ್‌ ಮದ್ಯದ ಖಾಲಿ ಬಾಟಲ್‌ಗಳನ್ನು ಹೊರಗಡೆ ಸಾರ್ವಜನಿಕರು ಸಾಗಿಸಿದ್ದಾರೆ ಎಂದು ಹೇಳಿದರು.

ಚಿಗಟೇರಿ ಗ್ರಾಮದಲ್ಲಿ ಕಾಲೇಜು ಬಳಿ ಮದ್ಯದಂಗಡಿ ಇದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದನ್ನು ಕೂಡಲೇ ಸ್ಥಳಾಂತರಿಸಿ. ನಾನು ಈಚೆಗೆ ಭೇಟಿ ನೀಡಿದಾಗ ಅಬಕಾರಿ ಕಚೇರಿಯಲ್ಲಿ ಯಾರೂ ಇರಲಿಲ್ಲ. ಏನಿದು ಎಂದು ಸಿಡಿಮಿಡಿಗೊಂಡರು. ಅಬಕಾರಿ ಇಲಾಖೆಯಿಂದ ಆಗಮಿಸಿದ ಅಧಿಕಾರಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಉತ್ತರಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಿ:

ಎಸ್ಸೆಸ್ಸೆಲ್ಸಿಯಲ್ಲಿ ಹರಪನಹಳ್ಳಿ ಪಟ್ಟಣದ ಪ್ರೌಢ ಶಾಲೆಗಳಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಬಂದಿದೆ ಎಂದು ಶಾಸಕಿ ಅಸಮಾಧಾನ ವ್ಯಕ್ತಪಡಿಸಿದರು. ಆಗ ಬಿಇಒ ಬಸವರಾಜಪ್ಪ, ತಾಲೂಕಿನ 16 ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿದೆ ಎಂದು ತಿಳಿಸಿದರು. ಆಗ ಶಾಸಕರು ಕಡಿಮೆ ಫಲಿತಾಂಶ ಬಂದಿರುವ 16 ಶಾಲೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಪದೇಪದೇ ಕೆಡುವ ಶುದ್ಧ ನೀರಿನ ಘಟಕ:

ಪಟ್ಟಣದ ಹೊಸಬಸ್‌ ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಪದೇಪದೇ ಕೆಡುತ್ತಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಪತ್ತೆ ಹಚ್ಚಿ ಎಂದು ಶಾಸಕಿ ಎಂ.ಪಿ. ಲತಾ ಸಾರಿಗೆ ಡಿಪೋ ವ್ಯವಸ್ಥಾಪಕಿ ಮಂಜುಳಾ ಅವರಿಗೆ ಸೂಚಿಸಿದರು.

ಮಕ್ಕಳು ತಿನ್ನದ ಆಹಾರ:

ತಾಲೂಕಿನ ಅಂಗನವಾಡಿಗಳಲ್ಲಿ ಕಿಚಡಿ ಸೇರಿದಂತೆ ನೀಡುವ ಇತರ ಆಹಾರವನ್ನು ಅಲ್ಲಿಯ ಮಕ್ಕಳು ತಿನ್ನುತ್ತಿಲ್ಲ. ತಟ್ಟೆಯಲ್ಲಿ ಹಾಗೆ ಬಿಡುತ್ತಾರೆ ಎಂಬ ದೂರುಗಳಿವೆ. ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಶಾಸಕರು ಸಿಡಿಪಿಒ ಅಶೋಕ ಅವರಿಗೆ ಸೂಚಿಸಿದರು.

ಇಲ್ಲಿಯ ಪಶು ಇಲಾಖೆಗೆ 2 ಮೊಬೈಲ್‌ ಆ್ಯಂಬೆಲೆನ್ಸ್‌ ಬಂದಿದ್ದು, ಚಿಕಿತ್ಸೆಗಾಗಿ ರೈತರು 1972 ನಂಬರಿಗೆ ಕರೆ ಮಾಡಿದರೆ ಇರುವ ಸ್ಥಳಕ್ಕೆ ಆಗಮಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಪಶು ಇಲಾಖೆಯ ಸಹಾಯಕ ನಿರ್ದೆಶಕ ಶಿವಕುಮಾರ ತಿಳಿಸಿದರು.

ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡುವವರಿಗೆ ಆದ್ಯತೆ ಕೊಟ್ಟು ಗ್ರಾಪಂನವರು ಹೇಳಿದವರಿಗೆ ನೀಡದೇ ಟೆಂಡರ್‌ ಮೂಲಕ ಗುತ್ತಿಗೆ ಕೊಡಿ ಎಂದು ಶಾಸಕರು ಮೀನುಗಾರಿಕೆ ಇಲಾಖೆಯವರಿಗೆ ತಿಳಿಸಿದರು.

40 ಡೆಂಘೀ ಪ್ರಕರಣ:

ಜುಲೈ ನಲ್ಲಿ 23, ಆಗಸ್ಟ್‌ ನಲ್ಲಿ 5 ಸೇರಿದಂತೆ ಜನವರಿಯಿಂದ ಈವರೆಗೂ ತಾಲೂಕಿನಲ್ಲಿ 40 ಡೆಂಘೀ ಪ್ರಕರಣ ಪತ್ತೆಯಾಗಿವೆ ಎಂದು ಆರೋಗ್ಯಾಧಿಕಾರಿ ಹಾಲಸ್ವಾಮಿ ತಿಳಿಸಿದರು.

ಹಲುವಾಗಲು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಇರುವುದಿಲ್ಲ ಎಂಬ ದೂರಿದೆ. ಸಿಬ್ಬಂದಿಗೆ ಕ್ವಾಟರ್ಸ್‌ ನಲ್ಲಿ ವಾಸ್ಯವ್ಯ ಹೂಡಲು ಆದೇಶ ಮಾಡಿ ಎಂದು ಶಾಸಕರು ಆರೋಗ್ಯಾಧಿಕಾರಿಗೆ ಸೂಚಿಸಿದರು.

ತಾಪಂ ಇಒ ಚಂದ್ರಶೇಖರ, ತಹಶೀಲ್ದಾರ ಬಿ.ವಿ.ಗಿರೀಶಬಾಬು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆಗಳ ಪ್ರಗತಿ ವರದಿ ಒಪ್ಪಿಸಿದರು.