ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಪಟ್ಟಣದ ಬೆಲ್ಲದ ಓಣಿಯಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಸ್ಥಳಾಂತರಿಸುವಂತೆ ಮಹಿಳೆಯರು ಕೈಗೊಂಡಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಭಾನುವಾರ ಶಾಸಕ ಬಾಬಾಸಾಹೇಬ ಪಾಟೀಲ ಭೇಟಿ ನೀಡಿ ಧರಣಿ ನಿರತರ ಮನವೊಲಿಸಲು ಯಶಸ್ವಿಯಾಗಿದ್ದು, ಈ ಮದ್ಯದಂಗಡಿಯನ್ನು ಸ್ಥಳಾಂತರಿಸುವವರೆಗೂ ಆರಂಭಿಸಿದಂತೆ ಸೂಕ್ತಕ್ರಮ ಕೈಗೊಳ್ಳಲು ಎಂಎಸ್ಐಎಲ್ ಜಿಲ್ಲಾ ಸಂಪರ್ಕ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದರು.ಪಟ್ಟಣದ ಬೆಲ್ಲದ ಓಣಿಯಲ್ಲಿ ಈ ಮದ್ಯದಂಗಡಿಯಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಪರದಾಡುವ ಪರಿಸ್ಥಿತಿ ಬಂದೂದಗಿತ್ತು. ಅಲ್ಲದೆ ಮದ್ಯ ವ್ಯಸನಿಗಳಿಂದಾಗಿ ಓಣಿಯಲ್ಲಿ ಕಿರಿಕಿರಿ ಉಂಟಾಗಿ ನೆಮ್ಮದಿ ಹಾಳಾಗಿತ್ತು. ಇದರಿಂದ ರೋಷಿಹೊಗಿದ್ದ ಮಹಿಳೆಯರು ಮದ್ಯದಂಗಡಿ ಬಂದ್ ಮಾಡಿಸಿ ಮದ್ಯದಂಗಡಿಯ ಮುಂಭಾಗದಲ್ಲಿಯೇ ಶಾಮೀಯಾನ ಹಾಕಿಸಿ ಮದ್ಯದಂಗಡಿ ಸ್ಥಳಾಂತರಿಸುವಂತೆ ಧರಣಿ ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಅಲ್ಲದೆ ಧರಣಿಯೂ ಎರಡನೇ ದಿನಕ್ಕೆ ಕಾಲಿಟ್ಟಿದ್ದರೂ ಸಹ ಯಾವೊಬ್ಬ ಅಧಿಕಾರಿಯೂ ಹಾಗೂ ಜನಪ್ರತಿನಿಧಿಗಳು ಇತ್ತ ಸುಳಿಯದೆ ಇರುವ ಪರಿಣಾಮ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿ ತಡೆಗೂ ಯೋಜನೆ ರೂಪಿಸಿ ಉಗ್ರ ಹೋರಾಟಕ್ಕೆ ಅಣಿಯಾಗುವ ಎಚ್ಚರಿಕೆ ನೀಡಿದ್ದರು. ಪರಿಣಾಮ ಭಾನುವಾರ ಶಾಸಕ ಬಾಬಾಸಾಹೇಬ ಪಾಟೀಲ ಈ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಸಮಸ್ಯೆ ಆಲಿಸಿ ಕೂಡಲೇ ಅಧಿಕಾರಿಗಳಿಗೆ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ಧರಣಿ ನಿರತರು ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದರು.ಜನರಿಗಾಗುವ ಸಮಸ್ಯೆಯ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು ಈ ಮದ್ಯದಂಗಡಿ ಸ್ಥಳಾಂತರವಾಗುವವರೆಗೂ ಇಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯದಂತೆ ಅದನ್ನೂ ಈ ಕೂಡಲೇ ಬಂದ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದರಿಂದ ಸಂತಸಗೊಂಡ ಧರಣಿ ನಿರತರು ಶಾಸಕ ಬಾಬಾಸಾಹೇಬ ಪಾಟೀಲ ನಿರ್ಣಯವನ್ನು ಸ್ವಾಗತಿಸಿ ಧರಣಿಯನ್ನು ಹಿಂಪಡೆದರು.ಧರಣಿ ನಿರತ ಸ್ಥಳದಲ್ಲಿ ಅಬಕಾರಿ ಸಿಪಿಐ ಶ್ರೀಶೈಲ್ ಅಕ್ಕಿ, ಸಿಪಿಐ ಶಿವಾನಂದ ಗುಡಗನಟ್ಟಿ, ಪಪಂ ಸದಸ್ಯರು ಸೇರಿದಂತೆ ಇತರರು ಇದ್ದರು.ಸ್ಥಳೀಯ ನಿವಾಸಿಗಳಾದ ಪ್ರವೀಣ ಸರದಾರ, ಚನ್ನಯ್ಯ ಹಾಲಮಠ, ಜಾವಿದ್ ಅತ್ತಾರ, ರಾಜುಗೌಡ ಪಾಟೀಲ, ರುದ್ರಪ್ಪ ಸರದಾರ. ಮಲ್ಲನಗೌಡ ಪಾಟೀಲ, ಅನೀಲ ಹೊಸೂರ, ಉಮೇಶ ಕೊಟಗಿ, ಸುನೀಲ ಹೊಸೂರ, ಈಶ್ವರ ಹಾಲಮಠ, ಅಜ್ಜಯ್ಯ ಹಿರೇಮಠ, ಮಹಾದೇವಿ ಹಿರೇಮಠ, ಶಾಂತವ್ವ ಪಾಟೀಲ, ಇಂದುಮತಿ ಸಂಪಗಾವಿ, ಭಾಗ್ಯಶ್ರಿ ತಿಮ್ಮಾಪೂರ ಇತರರು ಉಪಸ್ಥಿತರಿದ್ದರು.