ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ಲಾಂಭಾಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದವರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಹೆಚ್ಚುವರಿ ಅಬಕಾರಿ ಶುಲ್ಕ ಕಡಿಮೆ ಮಾಡಬೇಕು. ಯಾವುದೇ ಕಾರಣಕ್ಕೂ ಸನ್ನದು ಶುಲ್ಕ ಹೆಚ್ಚಳ ಮಾಡಬಾರದು. ಕೆಲವೊಂದು ಸನ್ನದುಗಳನ್ನು ಯಾವುದೇ ಕಾರಣಕ್ಕೂ ಹರಾಜು ಮಾಡಬಾರದು. ಸಿಎಲ್ 2ಗಳಲ್ಲಿ ಮದ್ಯ ಸೇವಿಸಲು ಅವಕಾಶ ಕೊಡಬೇಕು. ಸನ್ನದು ಆವರಣದಲ್ಲಿ ನಿಗದಿಪಡಿಸಿದ ನಿರ್ಧಿಷ್ಟ ಸ್ಥಳ ಮತ್ತು ಮೊದಲೇ ತಯಾರಿಸಿದ ಆಹಾರಗಳನ್ನು ನೀಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
2005ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29 ಅನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡಬೇಕು. ಎಂಎಸ್‌ಐಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವ ಕುರಿತು ಗ್ರಾಮಾಂತರ ಪ್ರದೇಶಗಳಲ್ಲಿ ಸನ್ನದುಗಳನ್ನು ತೆರೆಯದೇ, ನಗರದ ಮಧ್ಯಭಾಗದಲ್ಲಿ ತೆರೆಯುತ್ತಿದ್ದಾರೆ. ನಿರೀಕ್ಷಿತ ವ್ಯವಹಾರ ಇಲ್ಲದೆ ಇರುವ ಸನ್ನದುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಮಿಲಿಟರಿ ಕ್ಯಾಂಟೀನ್ ಸ್ಟೋರ್ ಗಳ ಡ್ಯೂಟಿ ಫ್ರೀ ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಬರುವ ಮದ್ಯ, ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಪೊಲೀಸ್ ಇಲಾಖೆ ಹಸ್ತಕ್ಷೇಪ ಮಾಡಿ ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿದ್ದು, ಸರ್ಕಾರ ಮಧ್ಯೆ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ, ಲೈಸನ್ಸ್ ರಹಿತವಾಗಿ ಮದ್ಯ ಮಾರಾಟ ಮಾಡುವವರ ದಂಡ ಹೆಚ್ಚಳ ಮಾಡಬೇಕು. ಡಾಬಾ, ಮಾಂಸಾಹಾರಿ ಹೊಟೇಲ್, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಲು ಕಠಿಣ ಕಾನೂನು ರೂಪಿಸಬೇಕು. ಮದ್ಯ ಮಾರಾಟದ ವೇಳೆಯನ್ನು ಬದಲಾಯಿಸಿ ಬೆಳಗ್ಗೆ 9 ರಿಂದ ರಾತ್ರಿ 12 ರವರೆಗೆ ವಿಸ್ತರಿಸಬೇಕು ಎಂಗು ಅವರು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್. ಲಕ್ಷ್ಮಣ್ ಮೊದಲಾದವರು ಇದ್ದರು.