ಪುಷ್ಪ ಮಾದರಿಯಲ್ಲಿ ಮದ್ಯ ಸಾಗಾಟ

| Published : Jan 17 2024, 01:47 AM IST

ಸಾರಾಂಶ

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಧಾರವಾಡದ ನರೇಂದ್ರ ಟೋಲ್‌ ಗೇಟ್‌ ಬಳಿ ಕಳೆದ ಗುರುವಾರ ವಾಹನಗಳ ಬಿಲ್‌ ತಪಾಸಣೆ ಮಾಡುತ್ತಿತ್ತು. ಈ ವೇಳೆ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ನಕಲಿ ಮದ್ಯ ಸಾಗಿಸುತ್ತಿದ್ದ ಟ್ಯಾಂಕರ್ ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿ: "ಪುಷ್ಪಾ " ಚಿತ್ರದ ಮಾದರಿಯಲ್ಲಿ ನಕಲಿ ಮದ್ಯ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ, ಬರೋಬ್ಬರಿ ₹ 50 ಲಕ್ಷ ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದೆ.

ಪುಷ್ಪಾ ಚಿತ್ರದಲ್ಲಿ ಹಾಲಿನ ಟ್ಯಾಂಕರ್‌ನಲ್ಲಿ ರಕ್ತಚಂದನ ಸಾಗಿಸುತ್ತಿದ್ದ ದೃಶ್ಯವನ್ನು ಈ ಘಟನೆ ನೆನಪಿಸುತ್ತಿದೆ. ಅಲ್ಲಿ ರಕ್ತಚಂದನ ಸಾಗಿಸಿದರೆ, ಇಲ್ಲಿ ವೆಸ್ಟ್‌ ಆಯಿಲ್‌ ಹೆಸರಲ್ಲಿ ಮದ್ಯ ಸಾಗಿಸುತ್ತಿದ್ದು ಪತ್ತೆಯಾಗಿದೆ. ಬಿಲ್‌, ಟ್ಯಾಂಕರ್‌ನ ನಂಬರ್‌ ಪ್ಲೇಟ್‌, ಮದ್ಯ ಎಲ್ಲವೂ ಇಲ್ಲಿ ನಕಲಿಯೇ ಆಗಿದೆ.

ಆಗಿದ್ದೇನು?

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡವೂ ಧಾರವಾಡದ ನರೇಂದ್ರ ಟೋಲ್‌ ಗೇಟ್‌ ಬಳಿ ಕಳೆದ ಗುರುವಾರ ವಾಹನಗಳ ಬಿಲ್‌ ತಪಾಸಣೆ ಮಾಡುತ್ತಿತ್ತು. ಈ ವೇಳೆ ನಾಗಲ್ಯಾಂಡ್‌ ನೋಂದಣಿ ಸಂಖ್ಯೆ (ಅದೂ ನಕಲಿ) ಹೊಂದಿರುವ ಟ್ಯಾಂಕರ್‌ ಪರಿಶೀಲನೆ ನಡೆಸಲಾಗುತ್ತಿತ್ತು. ವೇಸ್ಟ್‌ ಆಯಿಲ್‌ ಇದೆ ಎಂದು ರಾಜಸ್ಥಾನ ಮೂಲದ ಮೋಹನಲಾಲ್‌ ಎಂಬ ಚಾಲಕ ಬಿಲ್‌ ತೋರಿಸಿದ್ದಾನೆ. 3 ಸಾವಿರ ಲೀಟರ್‌ ಬಿಲ್‌ ತೋರಿಸಿದ್ದಾನೆ. ಆದರೆ ಟ್ಯಾಂಕರ್‌ 20 ಸಾವಿರ ಲೀಟರ್‌ದ್ದು. ಹೀಗಾಗಿ ಸಂಶಯ ಬಂದು ಚಾಲಕನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಆತ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ.

ಬೇರೆ ಚಾಲಕನನ್ನು ಕರೆಯಿಸಿ ಟ್ಯಾಂಕರ್‌ನ್ನು ನವನಗರದಲ್ಲಿರುವ ಕಚೇರಿಗೆ ತೆಗೆದುಕೊಂಡು ಬರಲಾಗಿದೆ. ಮೂರು ದಿನವಾದರೂ ಯಾರೊಬ್ಬರು ವಾರಸುದಾರರು ಬಂದಿಲ್ಲ. ಮಂಗಳವಾರದವರೆಗೂ ಟ್ಯಾಂಕರ್‌ನಲ್ಲಿ ವೇಸ್ಟ್‌ ಆಯಿಲೇ ಇರಬಹುದೆಂದು ಅಧಿಕಾರಿಗಳು ತಿಳಿದಿದ್ದರು.

ಅದರಂತೆ ಮಂಗಳವಾರ ಮಧ್ಯಾಹ್ನ ಟ್ಯಾಂಕರ್‌ನ ನಂಬರ್‌ ಪ್ಲೇಟ್‌ನ್ನು ಪರಿಶೀಲನೆ ನಡೆಸಲಾಗಿದೆ. NL 01 L 6136 ಎಂಬ ನಂಬರ್‌ ಪ್ಲೇಟ್‌ ಇತ್ತು. ಈ ನಂಬರ್‌ ಪ್ಲೇಟ್‌ ಮೂಲಕ ಮಾಲೀಕರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಆ ನಂಬರ್‌ನ ಟ್ಯಾಂಕರ್‌ ಬೇರೆಡೆ ಸಂಚರಿಸುತ್ತಿತ್ತು. ಹೀಗಾಗಿ, ನಂಬರ್‌ ಪ್ಲೇಟ್‌ ಕೂಡ ನಕಲಿ ಎಂಬುದು ಪತ್ತೆಯಾಗಿದೆ.

ನಕಲಿ ಮದ್ಯ

ಟ್ಯಾಂಕರ್‌ನ ನಂಬರ್‌ ಪ್ಲೇಟ್‌ ಕೂಡ ನಕಲಿಯಾಗಿದ್ದರಿಂದ ಟ್ಯಾಂಕರ್‌ನಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಲಾಗಿದೆ. ಟ್ಯಾಂಕರ್‌ ತುಂಬ ಮದ್ಯದ ಬಾಟಲ್‌ಗಳ ಬಾಕ್ಸ್‌ ಕಂಡು ಬಂದಿವೆ. ರಾಯಲ್‌ ಬ್ಲೂ ಹೆಸರಿನ ವಿಸ್ಕಿಯ ಬಾಟಲ್‌ಗಳು ಪತ್ತೆಯಾಗಿವೆ. ಬರೋಬ್ಬರಿ ₹50 ಲಕ್ಷದ ಮದ್ಯ ಪತ್ತೆಯಾಗಿದೆ.

ಈ ಮದ್ಯ ಗೋವಾ ಮೂಲದ್ದು ಎಂದು ಲೇಬಲ್‌ ಇದೆ. ಆದರೆ ಲೇಬಲ್‌ ಕೂಡ ನಕಲಿಯೇ ಆಗಿದೆ. ಹೀಗಾಗಿ ಕರ್ನಾಟಕದಲ್ಲೇ ಮದ್ಯ ತಯಾರಿಸಿ ಅದಕ್ಕೆ ನಕಲಿ ಲೇಬಲ್‌ ಅಂಟಿಸಿ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ವಾಹನದ ನಂಬರ್‌ ಪ್ಲೇಟ್‌, ಬಿಲ್‌, ಮದ್ಯ ಎಲ್ಲವೂ ನಕಲಿ ಆಗಿದೆ. ಬೆಂಗಳೂರಿನ ಸೋಮಾನಿ ಟ್ರೇಡರ್ಸ್ ಹೆಸರಲ್ಲಿ ನಕಲಿ ಬಿಲ್. ರಾಜಸ್ಥಾನದ ನಿಶಾಂತ ಲುಬ್ರಿಕೆಂಟ್ಸ್‌ಗೆ ಸಾಗಾಟ ಹೆಸರಲ್ಲಿ ಬಿಲ್ ಇರುವುದು ಪತ್ತೆಯಾಗಿದೆ. ಈ ಬಗ್ಗೆಯೂ ಇದೀಗ ತನಿಖೆ ನಡೆದಿದೆ.

ಈ ಟ್ಯಾಂಕರ್‌ ಬೆಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ. ಬೆಳಗಾವಿಗೆ ತೆರಳುತ್ತಿತ್ತೋ ಅಥವಾ ಅಲ್ಲಿಂದ ಮುಂದೆ ಎಲ್ಲಿಗಾದರೂ ಹೋಗುತ್ತಿತ್ತು ಎಂಬುದು ಇದೀಗ ತನಿಖೆಯಿಂದ ಹೊರಬೀಳಬೇಕಿದೆ.

ಹಸ್ತಾಂತರ

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಟ್ಯಾಂಕರ್‌ನ್ನು ವಶಪಡಿಸಿಕೊಂಡಿದ್ದು, ಅಬಕಾರಿ ಇಲಾಖೆಗೆ ಮಂಗಳವಾರ ಸಂಜೆ ಹಸ್ತಾಂತರಿಸಿದರು. ಇದೀಗ ಚೆಸ್ಸಿ ನಂಬರ್‌ ಮೇಲೆ ಮಾಲೀಕರ ಪತ್ತೆ ಕಾರ್ಯ ನಡೆದಿದೆ.

ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಸಹಾಯಕ ಆಯುಕ್ತ ವಿಜಯಕುಮಾರ ಸನದಿ, ಇನ್ಸಪೆಕ್ಟರ್‌ ವಿಜಯಕುಮಾರ ತಿರುಮಲೆ ಸೇರಿದಂತೆ ಹಲವರು ಈ ಟ್ಯಾಂಕರ್‌ನ್ನು ಪತ್ತೆ ಹಚ್ಚಿದ್ದರು. ವಾಣಿಜ್ಯ ತೆರಿಗೆ ಇಲಾಖೆ (ಜಾರಿ) ಜಂಟಿ ಆಯಕ್ತ ರವಿಕುಮಾರ, ಉಪ ಆಯುಕ್ತ ಬಾಳಪ್ಪ ಸಂಪಗಾಂವ ಸೇರಿದಂತೆ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.