ಜನವರಿ ಮೊದಲ ವಾರದಲ್ಲಿ ಅರ್ಹ ಆಶ್ರಯ ಫಲಾನುಭವಿಗಳ ಪಟ್ಟಿಸಿದ್ಧ

| Published : Dec 23 2024, 01:01 AM IST

ಜನವರಿ ಮೊದಲ ವಾರದಲ್ಲಿ ಅರ್ಹ ಆಶ್ರಯ ಫಲಾನುಭವಿಗಳ ಪಟ್ಟಿಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

660ರಲ್ಲಿ ಇನ್ನೂ 370 ಅನರ್ಹ ಫಲಾನುಭವಿಗಳಿದ್ದು, ಸದ್ಯಕ್ಕೆ 290 ಫಲಾನುಭವಿಗಳ ಪಟ್ಟಿ ನಿಗಮಕ್ಕೆ ಕಳುಹಿಸಿ ಕೊಡಲಾಗುವುದು.

ಮುಂಡರಗಿ: ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಹತ್ತಿರ ಆಶ್ರಯ ನಿವೇಶನಕ್ಕಾಗಿ ಖರೀದಿಸಿದ್ದ 25 ಎಕರೆ ಜಮೀನಿನಲ್ಲಿ ನಿವೇಶನ ಹಂಚುವ ಕಾರ್ಯ ಬಹು ವರ್ಷಗಳಿಂದ ವಿಳಂಬವಾಗುತ್ತಿದ್ದು, ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಜನವರಿ ಮೊದಲ ವಾರದಲ್ಲಿ ಅರ್ಹ ಆಶ್ರಯ ಫಲಾನುಭವಿಗಳ ಪಟ್ಟಿಯನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದು ಶಾಸಕ ಹಾಗೂ ಆಶ್ರಯ ಕಮಿಟಿ ಅಧ್ಯಕ್ಷ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶನಿವಾರ ಪುರಸಭೆ ಸಭಾಭವನದಲ್ಲಿ ಜರುಗಿದ ಆಶ್ರಯ ಕಮಿಟಿ ಕುರಿತ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಆಶ್ರಯ ನಿವೇಶನಗಳ ಹಂಚಿಕೆಗಾಗಿ 900 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 660 ನಿವೇಶನ ಫಲಾನುಭವಿಗಳ ಪಟ್ಟಿ ಸಿದ್ಧವಾಗಿತ್ತು. ಅದರಲ್ಲಿ ಅನರ್ಹರು ಸೇರಿದ್ದಾರೆಂದು ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತಕರಾರು ಅರ್ಜಿ ಹೋಗಿದ್ದ ಹಿನ್ನೆಲೆಯಲ್ಲಿ ತಡೆಹಿಡಿದು ಪರಿಶೀಲಿಸಿ ಅದರಲ್ಲಿ 290 ಜನ ಅರ್ಹರನ್ನು ಗುರುತಿಸಲಾಯಿತು.

660ರಲ್ಲಿ ಇನ್ನೂ 370 ಅನರ್ಹ ಫಲಾನುಭವಿಗಳಿದ್ದು, ಸದ್ಯಕ್ಕೆ 290 ಫಲಾನುಭವಿಗಳ ಪಟ್ಟಿ ನಿಗಮಕ್ಕೆ ಕಳುಹಿಸಿ ಕೊಡಲಾಗುವುದು. ಈಗಾಗಲೇ ಅರ್ಹ ಫಲಾನುಭವಿಗಳೆಂದು ಗುರುತಿಸಿದ 290ರಲ್ಲಿಯೂ ಸಹ 3- 4 ಫಲಾನುಭವಿಗಳು ಮನೆ ಹಾಗೂ ಇತರ ಆಸ್ತಿ ಹೊಂದಿದ್ದಾರೆಂದು ತಿಳಿದು ಬಂದಿದೆ. ನಿಗಮಕ್ಕೆ ಕಳುಹಿಸುವ ಪೂರ್ವದಲ್ಲಿ ಇನ್ನೊಮ್ಮೆ ಪರಿಶೀಲಿಸಿ ನಂತರ ಅರ್ಹರ ಪಟ್ಟಿಯನ್ನು ಪುರಸಭೆ ಸಾರ್ವಜನಿಕ ನೋಟಿಸ್ ಫಲಕದಲ್ಲಿ ಪ್ರಕಟಿಸಲಾಗುವುದು. ಅಲ್ಲಿಯೂ ಸಾರ್ವಜನಿಕರಿಂದ ಸಾಕ್ಷಿ ಸಹಿತವಾಗಿ ಅನರ್ಹರು ಇರುವ ಕುರಿತು ತಕರಾರು ಬಂದರೆ ಪುನಃ ಪರಿಶೀಲಿಸಿ ಅಂತಿಮ ಪಟ್ಟಿ ನಿಗಮಕ್ಕೆ ಕಳುಹಿಸಲಾಗುವುದು. ಯಾವುದೇ ಅರ್ಹ ಫಲಾನುಭವಿಗೆ ಅನ್ಯಾಯವಾಗಬಾರದೆನ್ನುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ರೋಸ್ಟರ್ ನಿಯಮದಂತೆ ಹಂಚಿಕೆ ಮಾಡಲು ಯೋಚಿಸಲಾಗಿದೆ. ಆಯ್ಕೆ ನಂತರ ದೋಷವಾಗಿದೆ ಎಂದು ಅಪಸ್ವರ ಬರದಂತೆ ಅರ್ಹರಿಗೆ ಮಾತ್ರ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಆಶ್ರಯ ಕಮಿಟಿ ಸದಸ್ಯ ನಿರ್ಮಲಾ ಕೊರ್ಲಹಳ್ಳಿ ಮಾತನಾಡಿ, 23 ವಾರ್ಡ್‌ಗಳಲ್ಲಿಯೂ ಅಲ್ಲಿನ ಸದಸ್ಯರು ಅರ್ಹ ಫಲಾನುಭವಿಗಳನ್ನು ಗುರುತಿಸಿದ್ದಾರೆ. ಅವರಿಗೂ 290ರಲ್ಲಿ ಪ್ರಾತಿನಿಧ್ಯ ಸಿಗಲಿ ಎಂದು ತಿಳಿಸಿದರು.

ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಈಗಾಗಲೇ ಗುರುತಿಸಿರುವ 290 ಆಶ್ರಯ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡುವಲ್ಲಿ ಯಾವುದೇ ತಕರಾರು ಬಂದಲ್ಲಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕೊಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.