ಬಳ್ಳಾರಿ ವಿಜ್ಞಾನಿಗಳ ಸಾಧನೆ: ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟ್ಯಾನ್‌ಫೋರ್ಡ್ ಪಟ್ಟಿಯಲ್ಲಿ ಮೂವರು ಸ್ಥಾನ

| Published : Sep 21 2024, 02:05 AM IST / Updated: Sep 21 2024, 12:41 PM IST

ಬಳ್ಳಾರಿ ವಿಜ್ಞಾನಿಗಳ ಸಾಧನೆ: ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟ್ಯಾನ್‌ಫೋರ್ಡ್ ಪಟ್ಟಿಯಲ್ಲಿ ಮೂವರು ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದ ಜಗತ್ತಿನ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  

ಬಳ್ಳಾರಿ: ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ವಾರ್ಷಿಕವಾಗಿ ಪ್ರಕಟಿಸುವ ಜಗತ್ತಿನ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.

ವಿವಿಯ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ವಿ. ಪ್ರಸಾದ್, ಗಣಿತಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಹನುಮೇಶ್ ವೈದ್ಯ ಸತತ ಎರಡನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಶ್ವಿನ್ ಪಿ. ಇದೇ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.

ವಿಶ್ವದರ್ಜೆಯ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ವೆಬ್ ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಎಚ್.ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್, ಸೈಟೇಷನ್ ಹೀಗೆ ಹಲವಾರು ಸಂಯೋಜಿತ ಮಾನದಂಡಗಳನ್ನು ಆಧರಿಸಿ ವಿಶ್ವದ ಉತ್ತಮ ಸಂಶೋಧಕರನ್ನು ಗುರುತಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಹೆಸರುವಾಸಿಯಾಗಿರುವ ಎಲ್ಸ್ವೀಯರ್ ಸಂಸ್ಥೆ ಸಹಭಾಗಿತ್ವದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಕಳೆದ ವಾರ ಪಟ್ಟಿ ಬಿಡುಗಡೆ ಮಾಡಿದೆ. ಪ್ರಪಂಚದ ಒಟ್ಟು ಸಂಶೋಧನಕಾರರಲ್ಲಿ ಶೇ.2 ರಷ್ಟು ಖ್ಯಾತನಾಮ ವಿಜ್ಞಾನಿಗಳನ್ನು ಸಂಶೋಧನೆಗೆ ಸಂಬಂಧಿಸಿದ ವಿವಿಧ ವರ್ಗಗಳಲ್ಲಿ ವಿಂಗಡಿಸಿ ಪಟ್ಟಿ ಅಂತಿಮಗೊಳಿಸಿದೆ.

ಮೂವರು ಪ್ರಾಧ್ಯಾಪಕರ ಸಾಧನೆಗೆ ಬಳ್ಳಾರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ಶ್ರೀಕೃವಿವಿ ಕುಲಸಚಿವ ರುದ್ರೇಶ್ ಎಸ್.ಎನ್., ಪ್ರಾಧ್ಯಾಪಕರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.