ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಬಗ್ಗೆ ನಿರೀಕ್ಷೆಗಳ ಮಹಾಪೂರವನ್ನು ಈಗಾಗಲೇ ''''ಕನ್ನಡಪ್ರಭ'''' ಬಜೆಟ್ ನಿರೀಕ್ಷೆ ಸರಣಿಯಲ್ಲಿ ಪ್ರಸ್ತಾಪಿಸಿದೆ.ಸಾರ್ವಜನಿಕರ ಅಭಿಪ್ರಾಯಗಳ, ನಿರೀಕ್ಷೆಗಳ ಆಧಾರದ ಮೇಲೆ ಜಿಲ್ಲಾಡಳಿತ ಜಿಲ್ಲೆಗೆ ಪ್ರಮುಖವಾಗಿ ಬೇಕಾದ ಏಳು ಬೇಡಿಕೆಗಳ ಪಟ್ಟಿಯನ್ನು ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಅಂಗಳಕ್ಕೆ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾ. 7ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಏನೆಲ್ಲ ದೊರಕಬಹುದು ಎಂಬ ಕುತೂಹಲ ಜಾಸ್ತಿಯಾಗಿದೆ.
ಜಿಲ್ಲಾಸ್ಪತ್ರೆಗೆ ಸ್ಥಳಾವಕಾಶ: ಹುಬ್ಬಳ್ಳಿಯ ಕೆಎಂಸಿಆರ್‌ಐ ಹೊರತು ಪಡಿಸಿದರೆ ಜಿಲ್ಲಾಸ್ಪತ್ರೆಯು ಜಿಲ್ಲೆಯ ಪ್ರಮುಖ ಆಸ್ಪತ್ರೆ. ಹೆರಿಗೆ, ಅಪಘಾತ ಮತ್ತು ಇತರ ಪ್ರಕರಣಗಳನ್ನು ಇಲ್ಲಿ ನಿಭಾಯಿಸಲಾಗುತ್ತಿದೆ. ಉತ್ತಮ ಚಿಕಿತ್ಸೆ ಒದಗಿಸಲು ಈ ಆಸ್ಪತ್ರೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅವಶ್ಯವಿದೆ. ಜಿಲ್ಲಾಸ್ಪತ್ರೆ ಕಟ್ಟಡವು ತುಂಬಾ ಹಳೆಯದಾಗಿದ್ದು, ಕಟ್ಟಡ ಅಭಿವೃದ್ಧಿ ಪಡಿಸಲು ಸೂಕ್ತ ಸ್ಥಳಾವಕಾಶದ ಕೊರತೆಯಿದೆ. ಹೊಸ ಕಟ್ಟಡ ನಿರ್ಮಾಣ ಮಾಡಲು ₹35 ಕೋಟಿಗಳ ಅನುದಾನ, ಜತೆಗೆ ಹಾಲಿ ಜಿಲ್ಲಾಸ್ಪತ್ರೆಗೆ ರೋಗಿಗಳ ಚಿಕಿತ್ಸೆಗಾಗಿ ವಿವಿಧ ಸಲಕರಣೆಗಳ ಅವಶ್ಯಕತೆಯಿರುವುದರಿಂದ ₹65.20 ಕೋಟಿಗಳ ಅನುದಾನದ ಬೇಡಿಕೆ ಇಡಲಾಗಿದೆ.44 ವಿದ್ಯಾರ್ಥಿಗಳ ನಿಲಯಗಳು: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಧಾರವಾಡಕ್ಕೆ ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆರ್ಥಿಕ ಸೌಲಭ್ಯವಿಲ್ಲದವರು. ಅಂತಹ ವಿದ್ಯಾರ್ಥಿಗಳಿಗೆ ಅವಶ್ಯಕತೆಗೆ ತಕ್ಕಂತೆ ಹಾಸ್ಟೆಲ್‌ಗಳಲ್ಲಿ ಸ್ಥಳಾವಕಾಶ ಸಿಗದೆ ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಿಂದ 2022ರಲ್ಲಿ 21,050, 2023ರಲ್ಲಿ 27,446 ಹಾಗೂ 2024ರಲ್ಲಿ 18,910 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಸಿಗದೇ ಪ್ರವೇಶ ವಂಚಿತರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಒಟ್ಟು 44 ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡಿದಲ್ಲಿ, ಉತ್ತಮ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ತೊಂದರೆಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗುತ್ತದೆ ಎಂಬುದು ಜಿಲ್ಲೆಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.
ಹೊಸ ಪಿಯುಸಿ ಕಾಲೇಜು: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಸಾವಿರಾರು ಬಡ ವಿದ್ಯಾರ್ಥಿಗಳು ಜಿಲ್ಲೆಗೆ ಬರುತ್ತಿದ್ದು, 19 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿದಲ್ಲಿ ಈ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅನುಕೂಲವಾಗುತ್ತದೆ.ಉನ್ನತ ಶಿಕ್ಷಣ: ಜತೆಗೆ ಉನ್ನತ ವ್ಯಾಸಂಗಕ್ಕೆ ಹಾಗೂ ಉತ್ತಮ ವಿದ್ಯಾಭ್ಯಾಸ ಪಡೆಯಲು ಪ್ರಸ್ತುತ ಲಭ್ಯವಿರುವ ಕಾಲೇಜುಗಳಲ್ಲಿ ದಾಖಲಾತಿಗೆ ಸ್ಥಳಾವಕಾಶದ ಕೊರತೆ ಇದೆ. ಹೊಸದಾಗಿ ಕಾಲೇಜುಗಳನ್ನು ಸ್ಥಾಪಿಸಿದಲ್ಲಿ ಉತ್ತಮ ಶಿಕ್ಷಣ ಪಡೆಯಲು ಇಚ್ಛಿಸುವಂತಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಿಬಹುದು.
ಕ್ರಿಕೆಟ್ ಕ್ರೀಡಾಂಗಣ: ಜಿಲ್ಲೆಯಲ್ಲಿ ಕೆಎಸ್‌ಸಿಎ ಮಾದರಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ₹10 ಕೋಟಿ ಅನುದಾನದ ಅವಶ್ಯಕತೆ ಇದೆ. ಇದರಿಂದ ಉತ್ತರ ಕರ್ನಾಟಕ ಕ್ರಿಕೆಟ್ ಆಸಕ್ತರಿಗೆ ತುಂಬ ಅನುಕೂಲ ಎಂಬುದನ್ನು ಸಹ ಜಿಲ್ಲಾಡಳಿತ ಸರ್ಕಾರಕ್ಕೆ ಮನದಟ್ಟು ಮಾಡಿದೆ.ಡಿಮ್ಹಾನ್ಸ್‌ಗೆ ಅನುದಾನ: ಜಿಲ್ಲೆಯಲ್ಲಿ ಡಿಮ್ಹಾನ್ಸ್ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿಯೇ ಹೆಸರುಳ್ಳ ಮಾನಸಿಕ ಆಸ್ಪತ್ರೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವರು. ಡಿಮ್ಹಾನ್ಸ್ ಆಸ್ಪತ್ರೆಯನ್ನು ನಿಮ್ಹಾನ್ಸ್ ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕಿದೆ. ಸಿವಿಲ್ ಕಾಮಗಾರಿ ಹಾಗೂ ಸಾಧನಾ ಸಲಕರಣೆಗಳನ್ನು ಖರೀದಿ ಮಾಡಲು ₹50.92 ಕೋಟಿ ಅನುದಾನ ಬಿಡುಗಡೆ ಮಾಡಿದಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂಬುದು ಸಹ ಜಿಲ್ಲಾಡಳಿತದ ಬೇಡಿಕೆ.
ರಿಂಗ್ ರೋಡ್: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ವಹಿವಾಟಿಗಾಗಿ ಬೇರೆ ಬೇರೆ ಸ್ಥಳಗಳಿಂದ ಸಾರ್ವಜನಿಕರು ಹಾಗೂ ವಾಹನಗಳು ಆಗಮಿಸುತ್ತಿವೆ. ವಾಹನ ದಟ್ಟಣೆಯಿಂದ ಮಹಾನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ದಟ್ಟಣೆಯುಂಟಾಗುತ್ತಿದೆ. ಸಂಚಾರ ದಟ್ಟಣೆ ನಿರ್ವಹಿಸಲು ಹಾಗೂ ವಾಹನ ಸಂಚಾರ ನಗರ ವ್ಯಾಪ್ತಿಯಲ್ಲಿ ಕಡಿಮೆಗೊಳಿಸಿ ಹೊರವಲಯದಿಂದ ಸುಗಮ ಸಂಚಾರ ವ್ಯವಸ್ಥೆಗೊಳಿಸಲು ರಿಂಗ್ ರೋಡ್ ಅಭಿವೃದ್ಧಿ ಪಡಿಸುವುದು ಅವಶ್ಯವಿದೆ. ಈ ಕಾಮಗಾರಿಗೆ ₹1241.39 ಕೋಟಿಗಳ ಅನುದಾನದ ಬೇಡಿಕೆಯನ್ನು ಸಹ ಇಡಲಾಗಿದೆ.ಧಾರವಾಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರ, ಶಾಸಕರ, ಅಧಿಕಾರಿಗಳ ಅಭಿಪ್ರಾಯದ ಮೇಲೆ ಬೇಡಿಕೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದು, ಆರ್ಥಿಕ ಸ್ಥಿತಿ-ಗತಿ ಆಧಾರದ ಮೇಲೆ ಯಾವ್ಯಾವ ಬೇಡಿಕೆಗೆ ಬಜೆಟ್‌ನಲ್ಲಿ ಸಮ್ಮತಿ ಸಿಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕೆಎಂಸಿಆರ್‌ಐಗೆ 515 ಕೋಟಿ ಕೊಡಿ:ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕಾಮಧೇನುವಿನಂತಿರುವ ಕೆಎಂಸಿಆರ್‌ಐಗೆ ಈ ಬಜೆಟ್‌ನಲ್ಲಿ ₹515 ಕೋಟಿ ಕೊಡಿ ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ. ಕೆಎಂಸಿಆರ್‌ಐಯಲ್ಲಿ ಇನ್ನಷ್ಟು ಯಂತ್ರಗಳನ್ನು ಅಳವಡಿಸಬಹುದಾಗಿದೆ. ಇದರೊಂದಿಗೆ ಉತ್ತರ ಕರ್ನಾಟಕದ ಬಡ ರೋಗಿಗಳಿಗೆ ಇನ್ನಷ್ಟು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಕಲ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ₹515 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ.
ವಾಯವ್ಯ ಸಾರಿಗೆ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ₹1000 ಕೋಟಿ ವಿಶೇಷ ಅನುದಾನ ನೀಡಬೇಕು. ಜತೆಗೆ ಶಕ್ತಿ ಯೋಜನೆಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ನೌಕರರ ಸಂಘ ಒತ್ತಾಯಿಸಿದೆ.ಚಿಗರಿಗೆ ಪರ್ಯಾಯ ಯೋಜನೆ?: ಹುಬ್ಬಳ್ಳಿ-ಧಾರವಾಡ ಮಧ್ಯೆ ತ್ವರಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬಿಆರ್‌ಟಿಎಸ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ಕಳೆದ 6 ವರ್ಷಗಳಲ್ಲೇ ಅದು ಬೇಸರವಾಗಿದ್ದು, ಯಾವಾಗ ಇದನ್ನು ತೆಗೆಯುತ್ತಾರೋ ಎಂದು ಕಾಯುವಂತಾಗಿದೆ. ಇದಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಎಲ್‌ಆರ್‌ಟಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ ಸಮೀಕ್ಷೆಯನ್ನೂ ನಡೆಸಿರುವುದುಂಟು. ಹಾಗಾದರೆ ಈ ಬಜೆಟ್‌ನಲ್ಲಿ ಏನಾದರೂ ಆ ಬಗ್ಗೆ ವಿಷಯ ಪ್ರಸ್ತಾಪಿಸುತ್ತಾರೆಯೇ ಎಂಬುದು ಜನರ ನಿರೀಕ್ಷೆ. ಆದರೆ ಇದನ್ನು ಕಾಯ್ದು ನೋಡಬೇಕಷ್ಟೇ!