ಸಂಗೀತವು ಪೂರ್ವಜರಿಂದ ಬಂದಿರುವ ಅಮೂಲ್ಯ ಪರಂಪರೆಯಾಗಿದೆ. ಆಧುನಿಕ ಜೀವನದ ಒತ್ತಡದ ನಡುವೆಯೂ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು
ಯಲಬುರ್ಗಾ: ಸಂಗೀತವು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂಗೀತ ಆಲಿಸುವುದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಚೈತನ್ಯ ದೊರೆಯುತ್ತದೆ ಎಂದು ಕುದರಿಮೋತಿಯ ಮೈಸೂರು ಮಠದ ಶ್ರೀವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಯರೇಹಂಚಿನಾಳ ಗಾನಲಹರಿ ಸಂಗೀತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗುರು ಪರಂಪರೆ ಸಂಗೀತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಂಗೀತವು ಪೂರ್ವಜರಿಂದ ಬಂದಿರುವ ಅಮೂಲ್ಯ ಪರಂಪರೆಯಾಗಿದೆ. ಆಧುನಿಕ ಜೀವನದ ಒತ್ತಡದ ನಡುವೆಯೂ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು. ಸಂಗೀತ ಆಲಿಸುವುದರಿಂದ ಮನಸ್ಸಿನ ದುಗುಡ ಹಾಗೂ ಒತ್ತಡ ದೂರವಾಗಿ ಜೀವನದಲ್ಲಿ ಉಲ್ಲಾಸ ಮೂಡುತ್ತದೆ. ಯುವಜನತೆ ಸಂಗೀತದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ನಮ್ಮ ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.
ಮುಖಂಡ ಶರಣಪ್ಪ ಬಸವಂತಪ್ಪ ಗಾಣಗೇರ ಮಾತನಾಡಿ, ಮನುಷ್ಯ ಸಂಗೀತದಿಂದ ದೂರವಾಗುತ್ತಿರುವುದರಿಂದ ಏಕಾಗ್ರತೆಯ ಕೊರತೆ ಹಾಗೂ ಮಾನವ ಸಂಬಂಧಗಳಲ್ಲಿ ಅಂತರ ಹೆಚ್ಚಾಗುತ್ತಿದೆ. ಸಂಗೀತ ಆಲಿಸುವುದರಿಂದ ಮನಸ್ಸಿನ ದುಗುಡ–ದುಮ್ಮಾನ ದೂರವಾಗಿ ನೆಮ್ಮದಿ ದೊರೆಯುತ್ತದೆ ಎಂದರು.ಅಶ್ವಿನಿ ಚಿರತನಾಳ ಪ್ರಾರ್ಥನಾ ಗೀತೆ ಹಾಡಿದರು. ಉಮಾಮಹೇಶ್ವರಿ ಎಸ್. ಹೂಗಾರ ಸಂಗೀತ, ಶರಣಬಸವ ಲಿಂಗನಬಂಡಿ ಭಕ್ತಿಗೀತೆ, ಮಂಜುನಾಥ ಸತ್ಯಪ್ಪ ಸುಣಗಾರ ಸುಗಮ ಸಂಗೀತ, ಹನುಮಂತಕುಮಾರ ಯರೆಹಂಚಿನಾಳ ಹಿಂದೂಸ್ಥಾನಿ ಸಂಗೀತ ಪ್ರಸ್ತುತಪಡಿಸಿದರು. ಪ್ರತಾಪಕುಮಾರ ಹಿರೇಮಠ ತಬಲಾ ವಾದನ, ಬಸವರಾಜ ಇಲಾಲಪುರ ಸಹಕರಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ಗಾಣಿಗೇರ, ಪದ್ಮನಾರಾಯಣ ಭೂತಡಾ, ಗುರಪ್ಪ ಸಾನಿಂಗಪ್ಪ ಗುರಿಕಾರ, ಹಸನಸಾಬ ನದಾಫ್, ನಿಂಗಪ್ಪ ಅಂಗಡಿ, ಮುದುಕನಗೌಡ ಪೊಲೀಸ್ ಪಾಟೀಲ್, ನಾಗರಾಜ ನಾಯಕ, ಕಳಕಪ್ಪ, ಕಳಕಪ್ಪ ಸಿದ್ದಪ್ಪ ಹೂಗಾರ ಸೇರಿದಂತೆ ಮತ್ತಿತರರು ಇದ್ದರು.