ಬದುಕಿನ ಬದಲಾವಣೆಗೆ ಶರಣರ ಸಂದೇಶ ಆಲಿಸಿ: ದಿಂಗಾಲೇಶ್ವರ ಶ್ರೀ

| Published : Jan 14 2025, 01:01 AM IST

ಸಾರಾಂಶ

ಶರಣ ಆದರ್ಶಗಳನ್ನು ಪಾಲಿಸುವ ಜತೆಗೆ ಅವರ ಹಿತ ನುಡಿಗಳನ್ನು ಆಲಿಸಬೇಕಿದೆ.

ಹೂವಿನಹಡಗಲಿ: ಮನುಷ್ಯ ಹೊರಗಿನ ಸಂಪತ್ತಿನಲ್ಲಿ ನೆಮ್ಮದಿ ಹುಡುಕಿದರೆ ಸಿಗುವುದಿಲ್ಲ. ಬದುಕಿನ ಬದಲಾವಣೆಗೆ ಶರಣ, ಸಂತರ ಪ್ರವಚನಗಳನ್ನು ಆಲಿಸುವುದರಿಂದ ನೆಮ್ಮದಿ ಶಾಂತಿ ಸಿಗಲು ಸಾಧ್ಯವಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಯುವ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ಸ್ನೇಹ ಸಮ್ಮಿಲನದ ಅಂಗವಾಗಿ ಆಯೋಜಿಸಿದ್ದ ಆಧ್ಯಾತ್ಮ ಆಶೀರ್ವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣ ಆದರ್ಶಗಳನ್ನು ಪಾಲಿಸುವ ಜತೆಗೆ ಅವರ ಹಿತ ನುಡಿಗಳನ್ನು ಆಲಿಸಬೇಕಿದೆ. ಆದರೆ ಮನುಷ್ಯ ಯಾಂತ್ರಿಕ ಜೀವನದ ಜಂಜಾಟದಲ್ಲಿ ಸಿಲುಕಿ ಪರಿಸ್ಥಿತಿಯ ಕೈಗೊಂಬೆಯಾಗಿದ್ದಾನೆ. ಅತಿಯಾದ ದುರಾಸೆಯಿಂದ ಸಂಪತ್ತಿನ ಬೆನ್ನು ಬಿದ್ದು ನೆಮ್ಮದಿಯ ಬದುಕನ್ನೇ ಹಾಳು ಮಾಡಿಕೊಂಡಿದ್ದಾನೆ ಎಂದರು.

ಜೀವನದಲ್ಲಿ ಸಜ್ಜನರ ಸಂಘ ಮಾಡುವ ಜತೆಗೆ ಗುರುವಿನ ಮಾರ್ಗದರ್ಶನ ಬೇಕು. ಅಜ್ಞಾನವನ್ನು ಕಳೆದು ಸುಜ್ಞಾನದ ಬೆಳಕನ್ನು ಚೆಲ್ಲುವ ಶಕ್ತಿ ಪ್ರವಚನಕ್ಕೆ ಇದೆ ಎಂದರು.

ಸಾಮಾಜಿಕ ಜಾಲತಾಣ ಹಾಗೂ ಆಧುನಿಕ ಜೀವನ ಶೈಲಿ ಬೆನ್ನು ಹತ್ತಿ, ಬಹಳಷ್ಟು ಯುವಕರು ಸಾಮಾಜಿಕ ಚಿಂತನೆಗಳಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮುಂದಿಟ್ಟುಕೊಂಡು ಯುವಕರು ಮುನ್ನಡೆಯಬೇಕು ಎಂದರು.

ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಂಸ್ಕಾರವಂತರನ್ನಾಗಿ ಮಾಡಿದಾಗ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಆ ವ್ಯಕ್ತಿ ಬದುಕುತ್ತಾನೆ ಎಂದರು.

ಹೊಳಲು ಮಲ್ಲಿಕಾರ್ಜುನ ವಿರಕ್ತ ಮಠದ ಚನ್ನಬಸವ ದೇವರು ಹಾಗೂ ಶಿರಹಟ್ಟಿ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ಸಂಗನ ಬಸಪ್ಪ ದೇವರು ಆಶೀರ್ವಚನ ನೀಡಿದರು.

ಇದಕ್ಕೂ ಮುನ್ನ ಸಕಲ ಮಂಗಳ ವಾದ್ಯಗಳೊಂದಿಗೆ ಶ್ರೀಗಳ ಮೆರವಣಿಗೆ ಜರುಗಿತು. ಮಲ್ಲಿಕಾರ್ಜುನ ವಿರಕ್ತ ಮಠದ ಅಕ್ಕನ ಬಳಗ ಮಹಿಳೆಯರು ಆರುತಿ ಹಿಡಿದು ಮೆರವಣಿಗೆಗೆ ಮೆರಗು ತಂದರು.

ಟ್ರಸ್ಟ್‌ ಅಧ್ಯಕ್ಷ ಅಜಯ್‌ ಪೂಜಾರ್‌ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.