ಜನರ ಕುಂದುಕೊರತೆ ಆಲಿಸಿ, ಸ್ಥಳದಲ್ಲೇ ಪರಿಹರಿಸಿ

| Published : Oct 26 2023, 01:01 AM IST

ಜನರ ಕುಂದುಕೊರತೆ ಆಲಿಸಿ, ಸ್ಥಳದಲ್ಲೇ ಪರಿಹರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಕುಂದುಕೊರತೆ ಆಲಿಸಿ, ಸ್ಥಳದಲ್ಲೇ ಪರಿಹರಿಸಿಬೆಳವನೂರು ಗ್ರಾಮದಲ್ಲಿ ಜನತಾ ದರ್ಶನ । ಸರ್ಕಾರಿ ಸೌಲಭ್ಯ ಕಲ್ಪಿಸಲು ಜನತಾ ದರ್ಶನ ಉಪಯುಕ್ತ: ಡಾ.ಶಾಮನೂರು
ಬೆಳವನೂರು ಗ್ರಾಮದಲ್ಲಿ ಜನತಾ ದರ್ಶನ । ಸರ್ಕಾರಿ ಸೌಲಭ್ಯ ಕಲ್ಪಿಸಲು ಜನತಾ ದರ್ಶನ ಉಪಯುಕ್ತ: ಡಾ.ಶಾಮನೂರು ಕನ್ನಡಪ್ರಭ ವಾರ್ತೆ ದಾವಣಗೆರೆ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು ಅಧಿಕಾರಿಗಳೇ ಮನೆ ಬಾಗಿಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೆ ಪರಿಹರಿಸಿ, ಸೌಲಭ್ಯ ಕಲ್ಪಿಸಲು ಜನತಾ ದರ್ಶನ ಸಹಕಾರಿಯಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬುಧವಾರ ದಾವಣಗೆರೆ ತಾಲೂಕಿನ ಬೆಳವನೂರು ಗ್ರಾಮದಲ್ಲಿ ಏರ್ಪಡಿಸಲಾದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರು ಸರ್ಕಾರದ ಸೌಲಭ್ಯಗಳಿಗಾಗಿ ಕಚೇರಿ ಅಲೆಯುವುದನ್ನು ತಪ್ಪಿಸಬೇಕೆಂದು ಮತ್ತು ಸಣ್ಣ, ಸಣ್ಣ ಸಮಸ್ಯೆಗೂ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ಅಲೆಯಬೇಕಾದ ಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಬಗೆಹರಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದರಿಂದ ಜನರ ಸಮಯ, ಖರ್ಚು-ವೆಚ್ಚ ಉಳಿತಾಯವಾಗಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡುತ್ತದೆ ಎಂದರು. ಬೆಳವನೂರು ಗ್ರಾಮದಲ್ಲಿ ನಡೆದ ಜನತಾ ದರ್ಶನಕ್ಕೂ ಮುಂಚಿತವಾಗಿ ಪ್ರತಿ ಮನೆಗೂ ಭೇಟಿ ನೀಡಿ ಎಲ್ಲರ ಕುಂದುಕೊರತೆಗಳನ್ನು ಆಲಿಸಿ ಇ-ಸ್ವತ್ತಿನ ಸಮಸ್ಯೆ, ಶೌಚಾಲಯ, ಪಿಂಚಣಿ, ಗೃಹಲಕ್ಷ್ಮಿ ಸಮಸ್ಯೆ ಸೇರಿದಂತೆ 442 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಶೀಘ್ರವೇ ಪರಿಹರಿಸಲಾಗುತ್ತದೆ. ನಮ್ಮ ಸರ್ಕಾರ ಮಹಿಳಾ ಸಬಲೀಕರಣದ ಉದ್ದೇಶದಿಂದ ಮನೆ ಯಜಮಾನಿಗೆ ಮಾಸಿಕ ರು. 2000 ನೀಡುತ್ತಿದ್ದು, ಹಣ ಬಾರದಿರುವ ಫಲಾನುಭವಿಗಳನ್ನು ಗುರುತಿಸಿ ಶೀಘ್ರವೇ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಜನರಿಂದ, ಜನರಿಗೋಸ್ಕರ, ಜನರಿಗಾಗಿ ಮಾಡುತ್ತಿರುವ ಈ ಜನತಾ ದರ್ಶನ ಕಾರ್ಯಕ್ರಮದ ಮೂಲ ಉದ್ದೇಶ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ನೀಡುವುದಾಗಿದೆ ಎಂದರು. ಈ ಬಾರಿಯ ಜನತಾ ದರ್ಶನ ಅತ್ಯಂತ ವಿನೂತನವಾದದ್ದು ಹಾಗೂ ವಿಶೇಷತೆಯನ್ನು ಹೊಂದಿದೆ. ಕೇವಲ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿರುವುದಲ್ಲದೇ, ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿನ ಮನೆಗಳಿಗೆ ಭೇಟಿ ನೀಡಿ, ಜನರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಕಂದಾಯ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಅರ್ಜಿಗಳು ಸ್ವೀಕಾರಗೊಂಡಿದ್ದು, ಈಗಾಗಲೇ ಗ್ರಾಮದ ಶೇ. 50ರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಗ್ರಾಮದ ಪ್ರಮುಖ ಬೇಡಿಕೆಯಾದ ಗ್ರಾಮ ಠಾಣಾಕ್ಕೆ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಗ್ರಾಮಕ್ಕೆ ಸ್ಮಶಾನ ಬೇಕು ಎಂಬ ಬೇಡಿಕೆಗೆ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ದನದ ಕೊಟ್ಟಿಗೆ, ಶೌಚಾಲಯ ವ್ಯವಸ್ಥೆ, ಚರಂಡಿ ಸ್ವಚ್ಛಗೊಳಿಸುವಿಕೆ, ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದು, ಜನರ ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲೇ ಪರಿಹರಿಸುವ ಮೂಲಕ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ಸಹಕಾರಿಯಾಗಲಿದೆ. ಬೆಳವನೂರು ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿ ವ್ಯವಸ್ಥೆ ಸೇರಿದಂತೆ 120 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಶೀಘ್ರವೇ ಪರಿಹರಿಸಲಾಗುತ್ತದೆ ಎಂದು ನುಡಿದರು. ವಸ್ತು ಪ್ರದರ್ಶನ ಮತ್ತು ಆರೋಗ್ಯ ಮೇಳ: ಜನತಾ ದರ್ಶನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಣ್ ಅಭಿಯಾನ, ಎನ್.ಆರ್.ಎಲ್.ಎಂ. ಸ್ವಸಹಾಯ ಗುಂಪುಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ, ತೋಟಗಾರಿಕೆ, ಕೃಷಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೂವಮ್ಮ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ದಾವಣಗೆರೆ ತಾಲೂಕು ತಹಸೀಲ್ದಾರ್ ಡಾ. ಎಂ.ಬಿ.ಅಶ್ವತ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಕುಮಾರ್, ಉದ್ಯಮಿ ಎಸ್.ಎಸ್.ಗಣೇಶ್, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. - - - 25ಕೆಡಿವಿಜಿ36ಃ ದಾವಣಗೆರೆ ತಾಲೂಕು ಬೆಳವನೂರಿನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಇತರರು ಇದ್ದರು.