ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಸಂಗೀತವು ಮನಸ್ಸಿಗೆ ಸಂತೋಷ ನೀಡಿ ದುಃಖ, ದುಮ್ಮಾನ, ಸಂಕಟ ವೇದನೆ ದೂರ ಮಾಡಿ ಮನಸ್ಸನ್ನು ಮುದಗೊಳಿಸಿ ಬದುಕಿಗೆ ಪ್ರೇರಣೆ ನೀಡುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್ ಅಭಿಪ್ರಾಯಪಟ್ಟರು.ನಗರದ ನೆಹರೂ ಮೈದಾನದಲ್ಲಿರುವ ವಾಣಿವಿಲಾಸ ವಿದ್ಯಾ ಸಂಸ್ಥೆ ಆವರಣದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ ಮತ್ತು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂಗೀತ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ, ಸಂಗೀತ, ರಂಗಕಲೆ ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು ದೇಶದ ಸಾಂಸ್ಕೃತಿಕ ಕಲೆ, ಸಂಸ್ಕೃತಿ ಮತ್ತು ಸಂಸ್ಕಾರ ಅನಾವರಣಕ್ಕೆ ಕಾರಣವಾಗಿವೆ. ಇವುಗಳು ಮನು ಕುಲಕ್ಕೆ ಬೇಕಾದ ಸೌಹಾರ್ದತೆ, ನೆಮ್ಮದಿ, ಸಹಬಾಳ್ವೆ, ಪ್ರೀತಿ, ಕರುಣೆ ಮತ್ತು ಮಮತೆ ತಂದು ಕೊಡುತ್ತವೆ ಎಂದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಲೂರು ಹನುಮಂತರಾಯಪ್ಪ ಮಾತನಾಡಿ, ಸಂಗೀತ ಒಂದು ತಪಸ್ಸು, ಸಂಗೀತವನ್ನು ಹೇಳುವುದರಿಂದ ಮತ್ತು ಕೇಳುವುದರಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ, ಕ್ರೀಯಾಶೀಲತೆ ದೊರೆಯುತ್ತದೆ. ಸಂಗೀತಕ್ಕೆ ರೋಗ-ರುಜಿನ ದೂರ ಮಾಡುವ, ಬಾಡಿಹೋದ ಮನಸ್ಸು ಅರಳಿಸುವ ಶಕ್ತಿಯಿದೆ. ಆದುದರಿಂದ ಸಂಗೀತವನ್ನು ದಿವ್ಯ ಔಷಧಿ ಎನ್ನಲಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ನಾಡಿನ ಸಾಂಸ್ಕೃತಿಕ ಕಲೆಯಾಗಿದ್ದು, ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ಮತ್ತು ನೀವೆಲ್ಲರೂ ಮಾಡಬೇಕಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಯಷ್ಟೇ ಪಠ್ಯೇತರ ಚಟುವಟಿಕೆಗಳು ಹೊರ ಹೊಮ್ಮಿದಾಗ ಮಾತ್ರ ನಮ್ಮ ದೇಶದ ಕಲೆ, ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯ. ಆದ್ದರಿಂದ ರಾಜ್ಯ ಸರ್ಕಾರವು ರಾಜ್ಯದ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ವಸತಿ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮಕ್ಕಳ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಆರ್.ತಿಪ್ಪೇಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಹಾರ‍್ಮೋನಿಯಂ ವಾದಕರಾದ ಜೆ.ನಿಜಲಿಂಗಪ್ಪ, ಎಚ್.ಆರ್.ಮಂಜುನಾಥ್, ತಬಲ ವಾದಕ ಯಶವಂತ್, ಎಂ.ಬಿ.ಲಿಂಗಪ್ಪ, ಮುಖ್ಯಶಿಕ್ಷಕಿ ಸೌಮ್ಯ, ಉಮೇಶ್, ವಸಂತ, ಗಂಗಮ್ಮ ಮುಂತಾದವರು ಇದ್ದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ, ಹಿರಿಯ ರಂಗಭೂಮಿ ಕಲಾವಿದೆ ಬಿ.ಎಸ್.ವಿಜಯಕುಮಾರಿ, ಸಂಗೀತ ವಿದುಷಿ ಟಿ.ಸುಲೋಚನಾ, ಹಿರಿಯ ಹಾರ‍್ಮೋನಿಯಂ ವಾದಕ ಎಚ್.ಆರ್.ಮಂಜುನಾಥ್, ಶಿಲ್ಪಿ ಆಲೂರು ಜೆ.ನರಸಿಂಹರಾಜುರನ್ನು ಸನ್ಮಾನಿಸಲಾಯಿತು.ಹೊಸದುರ್ಗದ ಓ.ಮೂರ್ತಿ ಮತ್ತು ತಂಡದಿಂದ ಸುಗಮ ಸಂಗೀತ, ಎಂ.ಸರಸ್ವತಿ ಮತ್ತು ತಂಡದವರಿಂದ ವಚನ ಗಾಯನ, ಪೀಲಾಪುರದ ಆರ್.ಕಂಠೇಶ್ ಮತ್ತು ತಂಡದವರಿಂದ ತತ್ವಪದ ಗಾಯನ, ಬೋಸೇದೇವರಹಟ್ಟಿ ಎನ್.ಮಂಜಣ್ಣ ಮತ್ತು ತಂಡದವರಿಂದ ಜನಪದ ಸಂಗೀತ, ಕಸಪ್ಪನಹಳ್ಳಿ ಪಿ.ವೆಂಕಟೇಶ್ ಮತ್ತು ತಂಡದವರಿಂದ ರಂಗಗೀತೆ ಗಾಯನ, ಹಿರಿಯೂರಿನ ಟಿ.ಸುಲೋಚನ ಮತ್ತು ತಂಡದವರಿಂದ ಕರ್ನಾಟಕ ಸಂಗೀತ, ಬಿ.ಎಸ್. ವಿಜಯಕುಮಾರಿ ಮತ್ತು ತಂಡದವರಿಂದ ಭಕ್ತಿಗೀತೆ ಗಾಯನ ಇದೇ ವೇಳೆ ಪ್ರಸ್ತುತ ಪಡಿಸಲಾಯಿತು.