ಸಾರಾಂಶ
ನರೇಗಲ್ಲ: ಚರಿತ್ರೆಯಲ್ಲಿನ ಶಿವಭಕ್ತ ಕತೆಗಳನ್ನು ಮೇಲಿಂದ ಮೇಲೆ ಕೇಳುವುದರಿಂದ ಮನಪರಿವರ್ತನೆಗೊಂಡು ಮನಶಾಂತಿ ದೊರಕುತ್ತದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಅವರು ಸಮೀಪದ ನಿಡಗುಂದಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ೯ ದಿನಗಳ ಪರ್ಯಂತರ ನಡೆಯುವ ವೀರಭದ್ರೇಶ್ವರ ಪುರಾಣ ಪ್ರವಚನ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಪುರಾಣ, ಪ್ರವಚನ, ಕಥಾ ಶ್ರವಣದಿಂದ ನಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗಿ ಮನದಲ್ಲಿನ ಕಲ್ಮಶಗಳನ್ನು ಹೋಗಲಾಡಿಸು ಸಾಮರ್ಥ್ಯವನ್ನು ಹೊಂದಿದ್ದು, ಮತ್ತೊಂದೆಡೆ ಇಂತಹ ಪುರಾಣ, ಪ್ರವಚನ ಆಲಿಸುವುದರಿಂದ ದೇವರ ದರ್ಶನ ದೇವರ ಸಾಮಿಪ್ಯತೆ ಪಡೆಯಲು ಸಾದ್ಯ ಎಂದು ತಿಳಿಸಿದರು. ಸಾನಿಧ್ಯ ವಹಿಸಿದ್ದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮಿಗಳು ಮಾತನಾಡಿ, ನಿಡಗುಂದಿ ಗ್ರಾಮದ ಭಕ್ತರು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಊರಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ಕೆ ಸದಾಸನ್ನದ್ದರಾಗಿರುತ್ತಾರೆ. ಮಠ, ಮಂದಿರಗಳಲ್ಲಿನ ಜಾತ್ರೆ, ಉತ್ಸವ ನಡೆಸುವುದರಿಂದ ದೇವರ ಪೂಜೆ ವಿಧಿ ವಿಧಾನಗಳ ಮೂಲಕ ಊರಿನಲ್ಲಿ ಭಕ್ತರಲ್ಲಿ ಮನೋಕಾಮನೆಗಳು ಈಡೇರುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಸಂಸ್ಕಾರಯುತ ಜೀವನಕ್ಕೆ ನಾಂದಿಯಾಗಲಿದೆ ಎಂದು ತಿಳಿಸಿದರು. ಸಮಾರಂಭದ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಪಿ.ಕೆ. ಕರಡಿ, ಪರಪ್ಪ ಅಣಗೌಡ್ರ, ಎಚ್. ಎಸ್. ಕೊಪ್ಪದ ಹಾಗೂ ಬಿ.ಕೆ ಹೊಟ್ಟಿನ ಉಪಸ್ತಿತರಿದ್ದರು. ಮಹೇಶ ಕಮ್ಮಾರ, ಎಸ್.ಎ. ಅರಮನಿ ಸಂಗೀತ ಸೇವೆ ನೀಡಿದರು. ರಮೇಶ ಉಳ್ಳಾಗಡ್ಡಿ ಸ್ವಾಗತಿಸಿದರು. ಶರಣಯ್ಯ ಹಿರೇಮಠ ನಿರೂಪಿಸಿ, ವಂದಿಸಿದರು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.