ವಚನ ಶ್ರವಣದಿಂದ ಮನಸ್ಸು ಪರಿಶುದ್ಧ

| Published : Feb 06 2025, 12:19 AM IST

ಸಾರಾಂಶ

ಬಸವಣ್ಣನವರ ಆದರ್ಶ ತತ್ವಗಳಿಗೆ ಮಾರುಹೋಗಿ ರಾಜಸ್ಥಾನವನ್ನು ಬಿಟ್ಟು ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಉತ್ತಮ ಶರಣನಾಗಿ ಕಾಯಕ ಮತ್ತು ದಾಸೋಹ ನಿರಂತರ ನಡೆಸಿದವರು ಶರಣ ಮೋಳಿಗೆ ಮಾರಯ್ಯನವರು

ಮುಂಡರಗಿ: ನಡೆ, ನುಡಿ, ಆಚಾರ-ವಿಚಾರಗಳನ್ನು ಚೆನ್ನಾಗಿರಿಸುವುದಕ್ಕೆ ನಮ್ಮ ಬದುಕಿಗೆ ವಚನ ಸಾಹಿತ್ಯ ಅತ್ಯಗತ್ಯ. ವಚನಗಳನ್ನು ಹೇಳುವುದರಿಂದ, ಕೇಳುವುದರಿಂದ, ಆಚರಣೆ ಮಾಡುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.

ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಸಾಪ, ಶಸಾಪ, ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಶರಣ ಚಿಂತನ ಮಾಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶರಣರು ಸಾಮಾಜಿಕ ಕಳಕಳಿ, ಅನುಭಾವ, ಆಧ್ಯಾತ್ಮಿಕ ಚಿಂತನೆ ಹೊಂದಿದ್ದರು. ಅವರು ಬದುಕು ನಮಗೆ ಸನ್ಮಾರ್ಗ ಕಲ್ಪಿಸಿಕೊಡುತ್ತದೆ. ಶರಣ ಸಾಹಿತ್ಯವನ್ನು ನಿರಂತರ ಅಧ್ಯಯನ ಮಾಡಬೇಕು. ಆ ಮೂಲಕ ಉತ್ತಮ ಜೀವನ ನಮ್ಮದಾಗಿಸಿಕೊಳ್ಳಬೇಕು. ಶರಣರ ಜೀವನ ಚರಿತ್ರೆ, ತತ್ತ್ವ, ವಿಚಾರ ಚಿಂತನೆಗಳನ್ನು ಅರಿತು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಕ್ಷಕಿ ದೀಪಶ್ರೀ ಕಣವಿ ಮೋಳಿಗೆ ಮಾರಯ್ಯನವರ ಕುರಿತು ಮಾತನಾಡಿ, ಬಸವಣ್ಣನವರ ಆದರ್ಶ ತತ್ವಗಳಿಗೆ ಮಾರುಹೋಗಿ ರಾಜಸ್ಥಾನವನ್ನು ಬಿಟ್ಟು ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಉತ್ತಮ ಶರಣನಾಗಿ ಕಾಯಕ ಮತ್ತು ದಾಸೋಹ ನಿರಂತರ ನಡೆಸಿದವರು ಶರಣ ಮೋಳಿಗೆ ಮಾರಯ್ಯನವರು. ಇಂತಹ ಶರಣರ ಜೀವನದ ಉತ್ತಮ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶರಣರನ್ನು ಕೇವಲ ಪೂಜೆಗೆ ಸೀಮಿತ ಮಾಡದೇ, ಜ್ಞಾನ ಮೂರ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದರು.

ತಾಲೂಕು ಶಸಾಪ ಅಧ್ಯಕ್ಷ ಡಾ. ಸಂತೋಷ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಲ್. ಪೊಲೀಸ್‌ಪಾಟೀಲ್‌, ಎಂ.ಜಿ. ಗಚ್ಚಣ್ಣವರ, ವೀರನಗೌಡ ಗುಡದಪ್ಪನವರ, ಶಂಕರ ಕುಕನೂರ, ಎ.ವೈ. ನವಲಗುಂದ, ವೀಣಾ ಪಾಟೀಲ, ಶಶಿಕಲಾ ಕುಕನೂರ, ಪ್ರೊ. ಕಾವೇರಿ ಭೋಲಾ, ಮಂಜುನಾಥ ಮುಧೋಳ, ಎಂ.ಎಸ್. ಹೊಟ್ಟಿನ, ಮಹೇಶ ಮೇಟಿ, ಯುವರಾಜ ಮುಂಡರಗಿ, ಕೃಷ್ಣ ಸಾಹುಕಾರ ಉಪಸ್ಥಿತರಿದ್ದರು.