ಸಾರಾಂಶ
ಬ್ಯಾಡಗಿ: ಪಾಲಕರ ಋಣ ತೀರಿಸುವ ಮಾದರಿಯಲ್ಲಿಯೇ ಅಕ್ಷರ ಕಲಿಸಿದ ಶಾಲೆಗೆ ತಮ್ಮ ಶಕ್ತಾನುಸಾರ ಸಹಾಯ ಸಹಕಾರ ಸಲ್ಲಿಸುವ ಮೂಲಕ ಅಕ್ಷರದ ಋಣವನ್ನು ತೀರಿಸುವ ಸಂಕಲ್ಪವನ್ನು ಮಾಡಿಕೊಳ್ಳುವಂತೆ ಹಳೆಯ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಕರೆ ನೀಡಿದರು.
ತಾಲೂಕಿನ ಮಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ವಿದ್ಯಾರ್ಥಿ ವನರಾಜ ಅಕ್ಕಿ ತಮ್ಮ ತಂದೆಯವರ ಹೆಸರಿನಲ್ಲಿ ರು.30 ಸಾವಿರ ವೆಚ್ಚದ ಗ್ರೀನ್ ಬೋರ್ಡ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ನನ್ನಲ್ಲಿ ನಾನು ಪರಿವರ್ತನೆ ಕಂಡರೆ ವಿಶ್ವದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂಬ ಮಾತೊಂದಿದೆ. ಹೀಗಾಗಿ ಹಳೆಯ ವಿದ್ಯಾರ್ಥಿಗಳ ತಮಗೆ ಶಿಕ್ಷಣ ನೀಡಿದ ಶಾಲೆಯ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು, ಶಾಲೆ ಅಭಿವೃದ್ಧಿಯನ್ನು ಡುಗೆಗಳಲ್ಲಿ ಕಾಣಬೇಕಾಗಿದೆ. ತಂದೆಯ ಹೆಸರಿನಲ್ಲಿ ವನರಾಜ ಅಕ್ಕಿ ನೀಡಿದ್ದು ಅತ್ಯಂತ ಶ್ಲಾಘನೀಯ ಎಂದರು.
ಬ್ಯಾಡಗಿ ತಾಲೂಕು ಮಾದರಿಯಾಗಿದೆ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ನನ್ನ ಶಾಲೆ ನನ್ನ ಕೊಡುಗೆ ಎಂಬ ಕಾರ್ಯಕ್ರಮ ಆರಂಭಿಸಿತ್ತು. ತಾಲೂಕಿನ ಕದರಮಂಡಲಗಿ ಗ್ರಾಮದ ಹಳೆಯ ವಿದ್ಯಾರ್ಥಿಗಳು ರು.80 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡವನ್ನೇ ನಿರ್ಮಿಸಿದ್ದಾರೆ. ಇದರಿಂದ ಪ್ರೇರಣೆಗೊಂಡ ರಾಜ್ಯ ಶಿಕ್ಷಣ ಇಲಾಖೆ "ನನ್ನ ಶಾಲೆ ನನ್ನ ಜವಾಬ್ದಾರಿ " ಎಂಬ ಅಭಿಯಾನವನ್ನು ಆರಂಭಿಸಿದ್ದು ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ತಾಲೂಕಿನ ವಿವಿಧ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದರು.ಶರಣರೂ ಸಂತರು ಉತ್ತಮ ಕೆಲಸ ಮಾಡಿದ್ದಾರೆ
ವನರಾಜ ಅಕ್ಕಿ ಮಾತನಾಡಿ, ತುಮಕೂರಿನ ಸಿದ್ಧಗಂಗಾ, ಬೆಳಗಾವಿಯ ಕೆಎಲ್‌ಈ, ಸುತ್ತೂರಿನ ಜೆಎಸ್ಎಸ್, ಧರ್ಮಸ್ಥಳದ ಎಸ್‌ಡಿಎಂ, ಚಿತ್ರದುರ್ಗದ ಎಸ್‌ಜೆಎಂ, ಸಿರಿಗೆರೆ ತರಳಬಾಳು, ಆದಿಚುಂಚನಗಿರಿಯ ಬಿಜಿಎಸ್ ನಂತಹ ಹೆಸರಾಂತ ಶಿಕ್ಷಣ ಸಂಸ್ಥೆಗಳು ಬಹು ಹಿಂದಿನಿಂದಲೂ ಶರಣರು, ಸಂತರು, ದಾನಿಗಳು ಶಿಕ್ಷಣಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದು ಇದರಿಂದಲೇ ರಾಜ್ಯದಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳು ದೊರೆಯುತ್ತಿವೆ. ಹಳೆಯ ವಿದ್ಯಾರ್ಥಿಗಳಲ್ಲಿ ಕೊಡುಗೈ ದಾನಿಗಳು ಬಹಳಷ್ಟಿದ್ದು ಅವರನ್ನು ಒಗ್ಗೂಡಿಸುವ ಕೆಲಸ ಶಾಲೆಗಳ ಮುಖ್ಯಸ್ಥರಿಂದಾಗಬೇಕಾಗಿದೆ ಎಂದರು.ಎಸ್ .ಡಿ.ಎಮ್ .ಸಿ. ಅಧ್ಯಕ್ಷ ವಿ.ಎಸ್.ಬಣಕಾರ ಅಧ್ಯಕ್ಷತೆ ವಹಿಸಿದ್ದರು. ದಾನಿ ಸುಭಾಸ ನೂರಂದನವರ ಸೇರಿದಂತೆ ಪ್ರಭಣ್ಣ ಜಾಧವ, ಪಾರ್ವತಿ ಸೊಲಬಗೌಡ್ರ, ದ್ಯಾಮವ್ವ ಶಿಡ್ಲಣ್ಣನವರ, ಎ.ಎಚ್. ನದಾಫ್ , ಮಾಸಣಗಿ ಸಿಆರ್‌ಪಿ ಜಿ.ಎನ್. ಬಡ್ಡಿಯವರ, ಕಾಗಿನೆಲೆ ಸಿಆರ್‌ಪಿ ಪ್ರಕಾಶ ಕೋರಿ, ಮುಖ್ಯ ಶಿಕ್ಷಕಿ ಮಂಜುಳ ಹೊಟ್ಟಿಗೌಡ್ರ, ಗಾಯತ್ರಿ ಹೆದ್ದೇರಿ, ಉಮಾ ಬೀಸೂರ, ಆರ್.ಆರ್. ಬೇವಿನಹಳ್ಳಿ, ಸೀಮಾ ಬೇಗಂ ಸ್ವಾಗತಿಸಿದರು. ಸವಿತಾ ಪಾಟೀಲ ನಿರೂಪಿಸಿದರು. ಮಾಲತಿ ಭಂಡಾರಿ ವಂದಿಸಿದರು.