ಸಾರಾಂಶ
ವ್ಯಕ್ತಿಯ ವ್ಯಕ್ತಿತ್ವ ಕಲೆ ಪ್ರೋತ್ಸಾಹಿಸುವ ಜತೆಗೆ ದೇಶ ಭಕ್ತಿ, ಚಿತ್ರ ಕಲೆ ಹಾಗೂ ವಿವಿಧ ಸಂಗೀತ ಹಾಗೂ ಸಾಹಿತ್ತಿಕ ಚಟುವಟಿಕೆಗಳು ದೇಶದ ಸಂಪತ್ತುಗಳಾಗಿವೆ. ಅವುಗಳತ್ತ ಗಮನಹರಿಸಬೇಕು.
ಕಲಘಟಗಿ:
ಇಂದು ಭಾರತೀಯ ಸಂಸ್ಕೃತಿ ಶೈಲಿಯ ಚಟುವಟಿಕೆಗಳು ಮರೆಮಾಚುತ್ತಿವೆ. ಯುವಕ-ಯುವತಿಯರು ಭಾವಗೀತೆ, ಯಕ್ಷಗಾನ, ಜಾನಪದ ಕಲೆಯಂತಹ ಚಟುವಟಿಕೆ ಉಳಿಸಿ-ಬೆಳೆಸುವ ಕೆಲಸ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕರೆ ನೀಡಿದರು.ಪಟ್ಟಣದ ಗುಡ್‌ನ್ಯೂಸ್ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಅಂತರ ಕಾಲೇಜು ಧಾರವಾಡ ವಲಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ವ್ಯಕ್ತಿತ್ವ ಕಲೆ ಪ್ರೋತ್ಸಾಹಿಸುವ ಜತೆಗೆ ದೇಶ ಭಕ್ತಿ, ಚಿತ್ರ ಕಲೆ ಹಾಗೂ ವಿವಿಧ ಸಂಗೀತ ಹಾಗೂ ಸಾಹಿತ್ತಿಕ ಚಟುವಟಿಕೆಗಳು ದೇಶದ ಸಂಪತ್ತುಗಳಾಗಿವೆ. ಅವುಗಳತ್ತ ಗಮನಹರಿಸಬೇಕು ಎಂದರು. ಸೋಲು-ಗೆಲುವಿನ ಲೆಕ್ಕಾಚಾರ ಮಾಡದೇ ಎಲ್ಲ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಎಂದು ತಿಳಿಸಿದರು.ಜಾನಪದ ವಿದ್ವಾಂಸ ಡಾ. ಶಂಭು ಬಳಿಗೇರ ಮಾತನಾಡಿ, ಯುವ ಜನೋತ್ಸವದಲ್ಲಿ ವಿದ್ಯಾರ್ಥಿಗಳ ಅಂತರಾಳದಲ್ಲಿ ಅಡಗಿರುವ ಕೌಶಲ್ಯ ಅರಳಿಸಬೇಕು. ಕೇವಲ ಮನರಂಜನೆಗಾಗಿ ಸ್ಪರ್ಧೆ ಮಾಡದೇ ನಮ್ಮ ದೈಹಿಕ, ಮಾನಸಿಕ, ಆರೋಗ್ಯದ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವ ಗುರಿಯತ್ತ ಸಾಗಬೇಕು ಎಂದರು.
ಸಚಿವ ಸಂತೋಷ ಲಾಡ್ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಪ್ರಾಚಾರ್ಯ ಮಹೇಶ ಹೊರಕೇರಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಕಾಲೇಜಿನ ಕಾರ್ಯದರ್ಶಿ ವರ್ಗಿಸ್ ಕೆ.ಜೆ. ಹಾಗೂ ಸಿರಿಲ್ ಪ್ರಧಾನ ಹಾಗೂ ವಿದ್ಯಾರ್ಥಿಗಳು ಇದ್ದರು.