ಸರ್ವಾಂಗೀಣ ಅಭಿವೃದ್ಧಿ ಚಿಂತನೆಯ ಸಾಹಿತ್ಯ ರಚನೆ ಅಗತ್ಯ: ಅಸದುಲ್ಲಾ ಬೇಗ್

| Published : Feb 27 2024, 01:37 AM IST

ಸರ್ವಾಂಗೀಣ ಅಭಿವೃದ್ಧಿ ಚಿಂತನೆಯ ಸಾಹಿತ್ಯ ರಚನೆ ಅಗತ್ಯ: ಅಸದುಲ್ಲಾ ಬೇಗ್
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ಪಟ್ಟಣದಲ್ಲಿ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನವನ್ನು ಶಾಹರಿ ಕವಿ ಅಸದುಲ್ಲಾ ಬೇಗ್ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಶಂಕರರಾವ್ ಉಭಾಳೆ ಅವರ ಮೆರವಣಿಗೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ

ನಾಗರಿಕ ಸಮಾಜದ ಕಲ್ಯಾಣ, ಅಭಿವೃದ್ಧಿ, ಆಡಳಿತ ಸುಧಾರಣೆ, ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒಳಗೊಂಡಂತೆ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಗಳನ್ನು ಒಳಗೊಂಡ ಸಾಹಿತ್ಯ ರಚನೆ ಅಗತ್ಯತೆ ಇದೆ. ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು, ಶಾಹರಿ ಕಡಿಮೆ ಸಾಲಿನ ಶಬ್ಧಗಳಲ್ಲಿ ಪರಿಣಾಮಕಾರಿ ಹಾಗೂ ಪ್ರಭಾವ ಬೀರುತ್ತವೆ ಎಂದು ಖ್ಯಾತ ಶಾಹರಿ ಕವಿ ಅಸದುಲ್ಲಾ ಬೇಗ್ ಅಭಿಪ್ರಾಯಪಟ್ಟರು.

ಪಟ್ಟಣದ ಖೆಣೇದ್ ಮುರಿಗೆಪ್ಪ ಸಾಹುಕಾರ ಕಲ್ಯಾಣಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಚುಟುಕು, ಶಾಹರಿ ಸಾಹಿತ್ಯದಲ್ಲಿ ವಿಡಂಬನೆ, ಮನವಿ, ವ್ಯಂಗ್ಯ, ಚುರುಕು ಮುಟ್ಟಿಸುವದು ಸೇರಿ ಹಲವಾರು ವಿಷಯ ಒಳಗೊಂಡಿದೆ. ಅದರಲ್ಲೂ ಪ್ರೇಮ, ಪ್ರೀತಿಗೆ ಸಂಬಂಧಿಸಿದ ಸಾಹಿತ್ಯದ ಸಾಲುಗಳು ಜನ ಸೂರೆಗೊಳಿಸುತ್ತವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಶಂಕರರಾವ್ ಉಭಾಳೆ ಮಾತನಾಡಿ, ದೇಶ ವೈಚಾರಿಕ ನೆಲೆಗಟ್ಟಿನ ನೆರಳಲ್ಲಿ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಅಂಬೇಡ್ಕರ್ ನೀಡಿದ ಸಂವಿಧಾನ ಪರಿಣಾಮಕಾರಿ ಅನುಷ್ಠಾನಗೊಳ್ಳಬೇಕಾಗಿದೆ.

ಸಾಹಿತ್ಯ ನಾಗರಿಕ ಸಮಾಜದ ಕಲ್ಯಾಣ, ತಳ ಸಮುದಾಯದ ಚಿಂತನೆಗಳು, ಸ್ತ್ರೀ ಪ್ರಧಾನ ದೇಶದಲ್ಲಿ ಮಹಿಳೆಯರ ರಕ್ಷಣೆ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ, ಮಾಧ್ಯಮ ಹೋಗುತ್ತಿರುವ ಮಾರ್ಗ, ಮಾನವೀಯ ಮೌಲ್ಯಗಳ ಅವಲೋಕನದಂತಹ ವಿಷಯಗಳ ಆಧರಿಸಿ ಸಾಹಿತ್ಯ ರಚನೆಯಾಗಬೇಕಾಗಿದೆ. ಸಮ್ಮೇಳನಗಳು ಸಾಹಿತ್ಯದ ವಿಕಾಸ ಹಾಗೂ ಸಾಹಿತಿಗಳ ಸೃಷ್ಠಿಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಆಯುಷ್ಮಾನ ಬುದ್ಧಘೋಷ ದೇವೆಂದ್ರ ಹೆಗಡೆ, ನಿವೃತ್ತ ಪ್ರಾಧ್ಯಪಕ ದೇವರೆಡ್ಡಿ ಪಾಟೀಲ್ ಗೌರಂಪೇಟ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಪ್ಪ ಶಂಬೋಜಿ ಮಾತನಾಡಿದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ್ ಎನ್.ಗಣೇಕಲ್ ಚುಟುಕು ಗುಟುಕು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಶಂಕರರಾವ್ ಉಭಾಳೆ ರಚಿಸಿರುವ ಹನಿಯಾದ ಮುತ್ತು ಚುಟುಕು ಸಂಕಲನ ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡಿತು. ಅಪೇಕ್ಷಾ ಎಸ್.ಎನ್.ಸರಕೀಲ್ರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಚುಟುಕು ಸಾಹಿತ್ಯ ಗೋಷ್ಠಿಯಲ್ಲಿ ರಾಯಚೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಪ್ರಸಾರಂಗ ವಿಭಾಗದ ಸಂಯೋಜಕ ಡಾ.ಶರಣಪ್ಪ ಚಲುವಾದಿ ಆಶಯ ನುಡಿಗಳನ್ನಾಡಿದರು.

ಚುಟುಕು ಸಾಹಿತ್ಯ ಬೆಳೆದು ಬಂದ ದಾರಿ ಕುರಿತು ಸಾಹಿತಿ ಮುನಿಯಪ್ಪ ನಾಗೋಲಿ, ಪ್ರಸ್ತುತ ಕಾಲಘಟ್ಟದಲ್ಲಿ ಚುಟುಕು ಸಾಹಿತ್ಯದ ಔಚಿತ್ಯತೆ, ಚುಟುಕು ಸಾಹಿತ್ಯದ ಪರಂಪರೆ ಕೊಡುಗೆ ಕುರಿತು ಯುವ ಕವಿ ಅಭಿಷೇಕ ಬಳೆ ವಿಷಯ ಮಂಡಿಸಿದರು.

ಈ ವೇಳೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ನರಸಿಂಗರಾವ್ ಸರಕೀಲ್, ಟಿಎಪಿಸಿಎಂಸ್ ಅಧ್ಯಕ್ಷ ಶರಣಗೌಡ ಕಮತಗಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬುಡ್ಡನಗೌಡ ಜಾಗಟಕಲ್, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ, ತಹಸೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ.ಉದ್ಯಮಿ ಭಾನುಪ್ರಕಾಶ ಖೆಣೇದ್, ವಕೀಲ ಹನುಮಂತ್ರಾಯ ನಾಯಕ ಚಿಂತಲಕುಂಟಿ, ತಾಲೂಕು ನೌಕರರ ಸಂಘ ಅಧ್ಯಕ್ಷ ಹನುಮಂತ್ರಾಯ ಶಾಖೆ, ಫಜದುಲ್ಲಾ ಸಾಜೀದ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಶಿವರಾಜ, ಪ್ರಾ.ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ವಿರುಪನಗೌಡ, ಮಾನ್ವಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ತಾಜುದ್ದೀನ್ ಹಾಗೂ ಇತರರು ಉಪಸ್ಥಿತರಿದ್ದರು.

ಬಸವರಾಜ ಬ್ಯಾಗವಾಟ, ಷಣ್ಮುಖ ಹೂಗಾರ, ಹನುಮಂತ ಅಂಚೆಸೂಗೂರ ನಿರೂಪಿಸಿದರು. ಇದಕ್ಕೂ ಮುಂಚೆ ಡಾ.ಅಂಬೇಡ್ಕರ್ ವೃತ್ತದಿಂದ ಖೆಣೇದ್ ಕಲ್ಯಾಣ ಮಂಟಪದವರೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.