ಸಾಹಿತ್ಯ ಜೀವನ, ಸಮಾಜಕ್ಕೆ ಹಿಡಿದ ಕನ್ನಡಿ: ಶಾಸಕ ದಿನಕರ ಶೆಟ್ಟಿ

| Published : Apr 28 2025, 12:47 AM IST

ಸಾರಾಂಶ

ಸಾಹಿತ್ಯ ಜೀವನ, ಸಮಾಜಕ್ಕೆ ಹಿಡಿದ ಕನ್ನಡಿ. ಜೀವನದ ಬಗೆಗಿನ ಲೋಕಾನುಭವ ಹೇಳಲು ಸಾಹಿತಿ ತನ್ನದೇ ಆದ ಶೈಲಿ ಬಳಸುತ್ತಾರೆ

ಕುಮಟಾ: ಸಾಹಿತ್ಯ ಜೀವನ, ಸಮಾಜಕ್ಕೆ ಹಿಡಿದ ಕನ್ನಡಿ. ಜೀವನದ ಬಗೆಗಿನ ಲೋಕಾನುಭವ ಹೇಳಲು ಸಾಹಿತಿ ತನ್ನದೇ ಆದ ಶೈಲಿ ಬಳಸುತ್ತಾರೆ. ಇದು ವ್ಯಕ್ತಿಯ ವಿಶೇಷತೆ ತೋರುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು ಚುಟುಕು ಸಾಹಿತ್ಯ ಪರಿಷತ್ ಕುಮಟಾ ಘಟಕದವರು ಪುರಭವನದಲ್ಲಿ ಹಮ್ಮಿಕೊಂಡಿದ್ದ ಕುಮಟಾ ತಾಲೂಕಾ 4ನೇ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಬ್ದ ವಾಕ್ಯಗಳು ಬರಲು ವ್ಯಕ್ತಿಯಲ್ಲಿ ಸಾಹಿತ್ಯ ಅಡಗಿರಬೇಕು. ಚುಟುಕುಗಳನ್ನು ಬರೆದ ದಿನಕರ ದೇಸಾಯಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದವರು. ಚುಟುಕು ಬ್ರಹ್ಮ ಎಂದೇ ಅವರನ್ನು ಕರೆಯಲಾಗಿತ್ತು. ಇದು ಉತ್ತರಕನ್ನಡದ ಹೆಮ್ಮೆ. ಅದೇ ರೀತಿ ಇಂದಿನ ಸರ್ವಾಧ್ಯಕ್ಷ ತಿಗಣೇಶ ಮಾಗೋಡರವರು ಶಬ್ದದ ಜೊತೆಗೆ ಮಾರ್ಮಿಕ ಅರ್ಥವನ್ನು ನೀಡುವ ವಾಕ್ಯಗಳನ್ನು ರಚಿಸುತ್ತಿದ್ದರು ಎಂದರು.

ತಾಲೂಕಿನ ಸಾಹಿತಿಗಳ ಚುಟುಕು‌ ಹಾಗೂ ಪರಿಚಯ ಒಳಗೊಂಡ ಕುಮಟಾ ಮುಕುಟ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಮಾತನಾಡಿ, ಹೇಳಬೇಕಾದ ಎಲ್ಲ ವಿಚಾರಗಳನ್ನು ನಾಲ್ಕು ಸಾಲುಗಳಲ್ಲಿ ಕಟ್ಟಿಕೊಡುವ ಕಾರ್ಯವನ್ನು ಚುಟುಕುಗಳು ಮಾಡುತ್ತದೆ ಎಂದರು.

ವಿಜಯಲಕ್ಷ್ಮೀ ಹೆಗಡೆಯವರ ''''''''ಗಝಲ್ ನಗರಿಯಲ್ಲಿ ಹೆಜ್ಜೆಗಳ ಗುರುತು'''''''' ಕೃತಿಯನ್ನು ಗಣೇಶ ಪ್ರಸಾದ ಪಾಂಡೇಲು ಲೋಕಾರ್ಪಣಗೊಳಿಸಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ವಿ. ನಾಯ್ಕ, ಕಸಾಪ ರಾಜ್ಯ ಸಲಹಾ ಸಮಿತಿ ಸದಸ್ಯ ಜನಾರ್ಧನ ನಾಯ್ಕ, ಮಾಜಿ ಯೋಧ ಪ್ರಕಾಶ ಎಸ್. ಮಡಿವಾಳ, ಶಿಕ್ಷಕ-ಪತ್ರಕರ್ತ ಗಣೇಶ ಜೋಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸರ್ವಾಧ್ಯಕ್ಷತೆ ವಹಿಸಿದ್ದ ತಿಗಣೇಶ ಮಾಗೋಡ ಮಾತನಾಡಿ, ಬದಲಾವಣೆಯ ವೇಗಕ್ಕೆ, ಸಮಯದ ಕೊರತೆಯಾಗಿ ಎಲ್ಲವೂ ಮೊಟಕಾಗಿಸುವ ಸಂಸ್ಕೃತಿ ಚುಟುಕುಗಳ ಉಗಮಕ್ಕೆ ಕಾರಣವಾಯ್ತು. ಕಡಿಮೆ ಅಕ್ಷರದಲ್ಲಿ ವಿಚಾರಗಳನ್ನು ಬಂಧಿಸಿ, ಹೊಂದಿಸಿ, ಸಂಧಿಸಿ ಕೊಡುವಲ್ಲಿ ಚುಟುಕುಗಳು ಗೆಲ್ಲುತ್ತವೆ. ಮೊನಚಾದ ಪ್ರಸ್ತುತಿ ಎದೆಯಾಳಕ್ಕೆ ಬೇಗ ಇಳಿಯುತ್ತದೆ. ಶತಾಯುಷ್ಯದ ಬದುಕು, ಕ್ಷೀಣಾಯುಷ್ಯಕ್ಕೆ ಹೊಂದಿಕೊಂಡಾಗ, ಕಣದಲ್ಲಿ, ಮಣ್ಣಕಾಣುವ ಜಾಣ್ಮೆ ನಮ್ಮದಾಯಿತೆನಿಸುತ್ತದೆ. ಶಾಲಿಗಾಗಿ ಸಾಲಿಗೆ, ಸಾಲುಗಳ ಸುತ್ತಿ ಓದನ್ನನ್ನು ಸೋಲುವಂತೆ ಮಾಡಿದ ನೀಳಸಾಹಿತ್ಯಗಳು ನಾಳೆಗಳ ಕಾಣದೇ ಪುಸ್ತಕಗಳಲ್ಲಿ ಮಲಗುವಂತಾಗಿ ತುಂಡು ಸಾಲುಗಳು ಪುಂಡುವೇಶದಂತೆ ಪ್ರವೇಶಿಸಿ ಪ್ರದರ್ಶನ ಯೋಗ್ಯವೆನಿಸಿ ಮನಸು ಗೆದ್ದಿವೆ ಎಂದರು.

ಅಕ್ಷರಗಳೊಂದಿಗೆ ಆಡುತ್ತ ಸಾಗಿದಂತೆ ಪಂದ್ಯ ಪದ್ಯಗಳಾಗಿ ನಲಿಯುತ್ತದೆ. ಇರುವಷ್ಟೇ ಅಕ್ಷರಗಳು ಮಹಾಕಾವ್ಯವನ್ನೂ ರಚಿಸಲು ಸರಕಾಗಿವೆ. ನಾನು ನನ್ನನ್ನು ಸಾಹಿತಿ ಎಂದು ಪೂರ್ತಿ ಒಪ್ಪದಿದ್ದರೂ ಅಕ್ಷರಗಳೊಂದಿಗೆ ಆಡುವ ಆಟಗಾರನೆಂದುಕೊಳುವೆ. ಅಕ್ಷರಗಳೊಂದಿಗೆ ಹೋರಾಡುವ ಹೋರಾಟಗಾರನೆಂದುಕೊಳ್ಳುವೆ ಎಂದರು.

ಪುರಸಭೆಯ ಅಧ್ಯಕ್ಷೆ ಸುಮತಿ ಭಟ್ಟ ಅಧ್ಯಕ್ಷತೆ ವಹಿಸಿದ್ದರು.

ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಮಾಗೋಡದ ಗ್ರಾಪಂ ಅಧ್ಯಕ್ಷ ಶಿವರಾಮ ಹೆಗಡೆ, ನ್ಯಾಯವಾದಿ ವಿನಾಯಕ ಪಟಗಾರ, ಚುಟುಕು ಸಾಹಿತ್ಯ ಪರಿಷತ್ ನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಮಹಿಳಾ ಉಪಾಧ್ಯಕ್ಷೆ ಡಾ.ವಂದನಾ ರಮೇಶ ಇದ್ದರು.ಪರಿಷತ್ತಿನ ಮಾರ್ಗದರ್ಶಕ ರವೀಂದ್ರ ಭಟ್ಟ ಸೂರಿ ಸ್ವಾಗತಿಸಿದರು. ಅಧ್ಯಕ್ಷ ಗಣಪತಿ ಅಡಿಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಮಡಿವಾಳ ವಂದಿಸಿದರು. ಶೈಲೇಶ ನಾಯ್ಕ ಸಹಕರಿಸಿದರು.

ಮಕ್ಕಳ ಚುಟುಕು ಗೋಷ್ಠಿ, ಚುಟುಕು ವಾಚನ ಗೋಷ್ಠಿಗಳು ನಡೆದವು. ನಾ ಕಂಡಂತೆ ಸರ್ವಾಧ್ಯಕ್ಷರು ಗೋಷ್ಠಿಯಲ್ಲಿ ಮಂಜುನಾಥ ಗಾಂವ್ಕರ ತಿಗಣೇಶರ ವ್ಯಕ್ತಿತ್ವ ಪರಿಚಯಿಸಿದರು. ಸುಮಾರು 25ಕ್ಕೂ ಹೆಚ್ಚಿನ ಸಾಹಿತಿಗಳು ಚುಟುಕುಗಳನ್ನು ವಾಚಿಸಿದರು. ಉದ್ಯಮಿ ವಸಂತ ರಾವ್, ಕಸಾಪ ತಾಲೂಕಾಧ್ಯಕ್ಷ ಪ್ರಮೋದ ನಾಯ್ಕ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಸಮಾರೋಪ ನುಡಿಗಳನ್ನು ಆಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಗೌಡ ಉಪ್ಪಿನಗಣಪತಿ ಸಭಾಧ್ಯಕ್ಷತೆ ವಹಿಸಿದ್ದರು. ಸರ್ವಾಧ್ಯಕ್ಷ ತಿಗಣೇಶ ಮಾಗೋಡರವರು ಸ್ವರ ರಚಿತ ಕವನವನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಎಂ.ಎನ್ ಭಟ್ಟ ಸ್ವಾಗತಿಸಿದರು. ದೇವಿದಾಸ ಮಡಿವಾಳ ವೇದಿಕೆಯಲ್ಲಿದ್ದರು. ಗಣೇಶ ಜೋಶಿ ನಿರೂಪಿಸಿದರು.