ಶಿಕ್ಷಣ ಸಂಸ್ಥೆಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮ ಅವಶ್ಯಕ: ಬೋಡಂಗಡ ಅಯ್ಯಪ್ಪ

| Published : Nov 06 2024, 11:50 PM IST / Updated: Nov 06 2024, 11:51 PM IST

ಶಿಕ್ಷಣ ಸಂಸ್ಥೆಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮ ಅವಶ್ಯಕ: ಬೋಡಂಗಡ ಅಯ್ಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀಮಂಗಲ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಮಾಡುವ ಮೂಲಕ ಕನ್ನಡ ಸಾಹಿತ್ಯದ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದು ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಹೇಳಿದ್ದಾರೆ.

ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀಮಂಗಲ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಸಾಹಿತ್ಯ ಪರಿಷತ್ತು ದತ್ತಿನಿಧಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಮೂಡಬೇಕು. ಕನ್ನಡ ನಾಡು ನುಡಿ, ಆಚಾರ ವಿಚಾರ, ಪರಂಪರೆಗಳ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಎನ್ನುವ ಉದ್ದೇಶವಿದ್ದು ಅದು ಕಾರ್ಯಗತವಾದಾಗ ಮಾತ್ರ ನಾಡು ನುಡಿ ಉಳಿಯಲು ಸಾಧ್ಯ ಎಂದರು.

ದಿ. ಮೊಣ್ಣಂಡ ಕೆ ಚಂಗಪ್ಪ ಜ್ಞಾಪಕ ದತ್ತಿನಿಧಿ ಮತ್ತು ದಿ. ಸಾಹಿತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಸ್ಮಾರಕ ದತ್ತಿನಿಧಿ ಕುರಿತು ಮಾಹಿತಿ ನೀಡಿದರು.

ಮಂಡ್ಯದಲ್ಲಿ ಡಿ. 20, 21, 22 ರಂದು ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರನ್ನು ಆಹ್ವಾನಿಸಲು ಕನ್ನಡ ಜ್ಯೋತಿ ಹೊತ್ತ ರಥ ನ.10,11ರಂದು ಕೊಡಗು ಜಿಲ್ಲೆಯಲ್ಲಿ ಸಂಚರಿಸಲಿದ್ದು ಪೊನ್ನಂಪೇಟೆಯಲ್ಲಿ ನ.10ರಂದು ವಾಸ್ತವ್ಯ ಹೂಡಲಿದೆ. ಅಂದು ಪೊನ್ನಂಪೇಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ಮಾಹಿತಿ ನೀಡಿದರು.

ದಿ. ಮೊಣ್ಣಂಡ ಕೆ ಚಂಗಪ್ಪ ಜ್ಞಾಪಕ ದತ್ತಿ ನಿಧಿಯ ಆಶಯದಂತೆ ಕನ್ನಡ ಕೊಡವ ಭಾಷಾ ಬೆಳವಣಿಗೆ ಕುರಿತು ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಜ್ಜಮಾಡ ರೇಖಾ ಮಾತನಾಡಿ, ಕನ್ನಡ ಮತ್ತು ಕೊಡವ ಎರಡು ಭಾಷೆಗಳು ಒಂದಕ್ಕೊಂದು ಹೊಂದಿಕೊಂಡು ಇರುವಂತಹ ಭಾಷೆಗಳಾಗಿವೆ ಎಂದರು.

ದಿ. ಸಾಹಿತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಸ್ಮಾರಕ ದತ್ತಿನಿಧಿಯ ಆಶಯದಂತೆ ಕೊಡಗಿನ ಮಹಿಳಾ ಸಾಹಿತಿಗಳ ಕುರಿತು ಶ್ರೀಮಂಗಲ ಜೆ.ಸಿ ಶಾಲೆಯ ಅಧ್ಯಾಪಕಿ ಬಿ.ಯು.ಯಶೋಧ ಮಾತನಾಡಿ ದಿ. ಸಾಹಿತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಕೊಡಗಿನ ಹಿರಿಯ ಸಾಹಿತಿಗಳಾಗಿದ್ದು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಪತಿ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮತ್ತು ಮುಲ್ಲೆಂಗಡ ಮಧೋಶ್ ಪೂವಯ್ಯ ಕೊಡಗಿನ ಮಹಿಳಾ ಸಾಹಿತಿಗಳ ಕುರಿತು ಉಪನ್ಯಾಸ ನೀಡಲು ದತ್ತಿ ಸ್ಥಾಪಿಸಿದ್ದಾಗಿ ತಿಳಿಸಿದರು.ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮುಳ್ಳೆಂಗಡ ಸೋಮಯ್ಯ ಮಾತನಾಡಿ, ವಿದ್ಯಾರ್ಥಿಗಳ ಸಾಹಿತ್ಯಿಕ, ಬೌದ್ಧಿಕ ಬೆಳವಣಿಗೆಗೆ ಈ ರೀತಿಯ ಕಾರ್ಯಕ್ರಮಗಳು ಪೂರಕ ಎಂದರು.

ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡುತ್ತಾ ಪಾಠ ಪಠ್ಯಗಳೊಂದಿಗೆ ಸಾಹಿತ್ಯ ಕವನ ಕಾದಂಬರಿಗಳನ್ನು ಕೂಡ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ದಾನಿ, ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕ್ರತ ಕೈಬಲಿರ ಪಾರ್ವತಿ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು.

ನಾಡತಕ್ಕರು ಮತ್ತು ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದೊಂದಿಗೆ ಸಾಹಿತ್ಯಿಕ ಓದು ಕೂಡಾ ಅವಶ್ಯಕ ಎಂದರು.

ದತ್ತಿದಾನಿ, ತೂಕ್ ಬೊಳಕ್ ಕೊಡವ ಪತ್ರಿಕೆಯ ಸಂಪಾದಕ ಮುಲ್ಲೆಂಗಡ ಮದೋಶ್ ಪೂವಯ್ಯ ಮಾತನಾಡಿದರು.

ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸರ್ವೆ ಇಲಾಖೆ ಅಧಿಕಾರಿ ಬಾನಂಗಡ ಅರುಣ್ ಕುಮಾರ್ ಮಾತನಾಡಿದರು.

ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉಳುವಂಗಡ ಕಾವೇರಿ ಉದಯ ಅಧ್ಯಕ್ಷತೆ ವಹಿಸಿದ್ದರು.

ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ತಾಲೂಕು ಕ.ಸಾ.ಪ ಕಾರ್ಯದರ್ಶಿ ಕೆ.ವಿ ರಾಮಕೃಷ್ಣ, ಶ್ರೀಮಂಗಲ ಹೋಬಳಿ ಗೌರವ ಕೋಶಾಧಿಕಾರಿ ಎಸ್.ಎಂ ರಾಜೇಂದ್ರ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಪಿ.ಎಂ ಪೂಣಚ್ಚ, ನಿರ್ದೇಶಕರಾದ ಅಜ್ಜಮಾಡ ಸಾವಿತ್ರಿ, ಟಿ.ಆರ್ ವಿನೋದ್, ಎಸ್.ಡಿ ಗಿರೀಶ್, ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು,ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳು ಇದ್ದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಸಿದ ಗೀತ ಗಾಯನ ಸ್ಪರ್ಧೆಯಲ್ಲಿ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿನಿ ರೂಪ ಪಿ.ಎ ಪ್ರಥಮ ಬಹುಮಾನ, ಪರ್ಸೀನಾ ಬೀವಿ. ದ್ವಿತೀಯ, ಅನುಷಾ ಪಿ.ಆರ್ ತೃತೀಯ ಬಹುಮಾನ ಪಡೆದರು.

ಪ್ರೌಢಶಾಲಾ ವಿಭಾಗದಲ್ಲಿ ಪ್ರೀನಿತ್ ಎನ್.ಕೆ. ಪ್ರಥಮ, ಅಲನ್ಯ ಸುರೇಶ ದ್ವಿತೀಯ, ಬೋಜಮ್ಮ ತೃತೀಯ ಬಹುಮಾನ ಪಡೆದರು.