ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯ, ಸಂಸ್ಕೃತಿ ಅಗತ್ಯ: ವೀರಭದ್ರ ಶಿವಾಚಾರ್ಯರು

| Published : Jun 01 2025, 04:12 AM IST

ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯ, ಸಂಸ್ಕೃತಿ ಅಗತ್ಯ: ವೀರಭದ್ರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ನಗರದ ಹುಣಸಿಕಟ್ಟಿ ರಸ್ತೆಯ ಜೇಸಿವಾಣಿ ಅರಮನೆಯಲ್ಲಿ ಶನಿವಾರ ಕುರುಹಿನಶೆಟ್ಟಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ದೇಹದಾನ ಅರಿವು ಕಾರ್ಯಕ್ರಮ ಹಾಗೂ ಕಾಕಿ ಶ್ರೀನಿವಾಸ ಲೇಔಟ್ ಸದಸ್ಯರಿಗೆ ಸೈಟು ವಿತರಣೆ ಕಾರ್ಯಕ್ರಮ ನಡೆಯಿತು.

ರಾಣಿಬೆನ್ನೂರು: ಪ್ರತಿಯೊಂದು ಮಗುವಿನಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಸಂಘ, ಸಂಸ್ಥೆಗಳು ಗುರುತಿಸಬೇಕು ಎಂದು ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ನುಡಿದರು.

ನಗರದ ಹುಣಸಿಕಟ್ಟಿ ರಸ್ತೆಯ ಜೇಸಿವಾಣಿ ಅರಮನೆಯಲ್ಲಿ ಶನಿವಾರ ಕುರುಹಿನಶೆಟ್ಟಿ ಸೇವಾ ಸಮಾಜ ಹಾಗೂ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ದೇಹದಾನ ಅರಿವು ಕಾರ್ಯಕ್ರಮ ಹಾಗೂ ಕಾಕಿ ಶ್ರೀನಿವಾಸ ಲೇಔಟ್ ಸದಸ್ಯರಿಗೆ ಸೈಟು ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆ ಶಿಕ್ಷಣದೊಂದಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಅಗತ್ಯ ಬೆಂಬಲವನ್ನು ಪಾಲಕರು, ಶಿಕ್ಷಕರು ಜತೆಗೆ ಸಮಾಜದ ಸಂಘಟನೆಗಳು ವೇದಿಕೆ ಕಲ್ಪಿಸಿಕೊಡಬೇಕು. ಮಕ್ಕಳ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಮಾತನಾಡಿ, ದುಡ್ಡು ಸಂಪಾದಿಸುವವರನ್ನು ಶ್ರೀಮಂತರೆನ್ನಲು ಸಾಧ್ಯವಿಲ್ಲ. ವಿದ್ಯೆ ಸಂಪಾದನೆಯೇ ಬಹುದೊಡ್ಡ ಶ್ರೀಮಂತಿಕೆಯಾಗಿದೆ. ಜ್ಞಾನವುಳ್ಳವನಿಗೆ ಯಾವತ್ತೂ ಬಡತನ ಬರುವುದೇ ಇಲ್ಲ. ಸಾಧನೆ ಹಾದಿಯಲ್ಲಿ ಸಾಗುವುದರಿಂದ ಮನುಷ್ಯನ ಬದುಕು ಶ್ರೇಷ್ಠ ಎನಿಸಿಕೊಳ್ಳುತ್ತದೆ. ಐಎಎಸ್, ಐಪಿಎಸ್, ಸಾಹಿತಿ ಏನಾದರೂ ಆಗಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರ ಮಕ್ಕಳಲ್ಲಿ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಹನುಮಂತಪ್ಪ ಕಾಕಿ, ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ಎಂ.ಎಸ್. ಅರಕೇರಿ, ಪ್ರಕಾಶ ಗಚ್ಚಿನಮಠ, ನಿತ್ಯಾನಂದ ಕುಂದಾಪುರ, ಕೆ.ಎಸ್. ನಾಗರಾಜ, ಶಿವಾನಂದ ಬಗಾದಿ, ಕೊಟ್ರೇಶಪ್ಪ ಎಮ್ಮಿ, ಮಲ್ಲಿಕಾರ್ಜುನ ಸಾವಕ್ಕಳವರ ಮತ್ತಿತರರಿದ್ದರು.