ಸಾಹಿತ್ಯ, ಸಾಂಸ್ಕೃತಿಕ ಒಡನಾಟ ಬದುಕಿಗೆ ಉತ್ತಮ ಮಾರ್ಗದರ್ಶನ: ಸಿ.ಎಸ್.ಚಂದ್ರಭೂಪಾಲ

| Published : Sep 20 2024, 01:33 AM IST

ಸಾಹಿತ್ಯ, ಸಾಂಸ್ಕೃತಿಕ ಒಡನಾಟ ಬದುಕಿಗೆ ಉತ್ತಮ ಮಾರ್ಗದರ್ಶನ: ಸಿ.ಎಸ್.ಚಂದ್ರಭೂಪಾಲ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮದ ಸಭಾಂಗಣದಲ್ಲಿ 229ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿಶಾಲವಾದ ಸಾಹಿತ್ಯವನ್ನು ಅಧ್ಯಯನ ಮತ್ತು ಸಾಂಸ್ಕೃತಿಕ ಒಡನಾಟ ಶಿಸ್ತುಬದ್ಧ ಜೀವನಕ್ಕೆ ಸದಾ ಮಾದರಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮದ ಸಭಾಂಗಣದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ 229 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರ ವಿಶಾಲವಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಒಡನಾಟ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ಸಾಹಿತ್ಯ ಬಲ್ಲವರಲ್ಲಿ ಸಂಸ್ಕೃತಿ ಕಾಣಬಹುದು. ಶಿಸ್ತುಬದ್ಧ ಜೀವನ ಕಲಿಸುತ್ತದೆ. ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಇಪ್ಪತ್ತು ವರ್ಷಗಳಿಂದ ನಮ್ಮ ಜಿಲ್ಲೆಯಲ್ಲಿ ನಿರಂತರವಾಗಿ ನಡೆದು ಬಂದಿದ್ದು, ಸಂತೋಷ ತಂದಿದೆ. ನಾಡಿನ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ ಮಾತನಾಡಿ, ಡಿ.ಮಂಜುನಾಥ ಅವರು ನಿರಂತರವಾಗಿ ಕನ್ನಡ ಕೆಲಸ ಮಾಡುತ್ತಾ ಬಂದಿದ್ದಾರೆ. ಅಧಿಕಾರಕ್ಕೆ ಸೀಮಿತವಾಗಿಲ್ಲದ ಕ್ರಿಯಾಶೀಲತೆ ಮಹತ್ತರವಾಗಿದೆ. ಅವರೊಂದಿಗೆ ಉತ್ತಮ ತಂಡವೂಇದೆ. ಇಪ್ಪತ್ತು ವರ್ಷ ನಿರಂತರ ಹುಣ್ಣಿಮೆ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ಹೆಮ್ಮೆ ತಂದಿದೆ ಎಂದರು.

ಖಗೋಳ ವಿಸ್ಮಯ ಮತ್ತು ಮೂಡ ನಂಬಿಕೆಗಳು ವಿಚಾರವಾಗಿ ಡಾ.ಶೇಖರ್ ಗೌಳೇರ್ ಮಾತನಾಡಿ, ಹುಣ್ಣಿಮೆ, ಅಮಾವಾಸ್ಯೆ ದಿನಗಳಲ್ಲಿ ಗ್ರಹಣ ಬರುವುದು. ಸೂರ್ಯ, ಚಂದ್ರ ಎರಡೂ ಗ್ರಹಣಗಳು ಹೇಗಾಗುತ್ತೆ. ಈ ಬಗ್ಗೆ ನಮಗಿರುವ ತಪ್ಪು ಕಲ್ಪನೆ ದೂರವಾಗಬೇಕು. ಜ್ಯೋತಿಷ್ಯ, ಶಾಸ್ತ್ರ ದೂರವಿಟ್ಟು ವೈಜ್ಞಾನಿಕ ಅರಿವು ಅಗತ್ಯವಿದೆ ಎಂದು ವಿವರಿಸಿದರು.

ಇದೇ ವೇಳೆ ಸಂಪಾದಕರಾದ ಎನ್.ಮಂಜುನಾಥ, ಸಿ.ಎಸ್. ಚಂದ್ರಭೂಪಾಲ ಅವರನ್ನು ಅಭಿನಂದಿಸಲಾಯಿತು.

ಆತಿಥ್ಯ ನೀಡಿದ್ದ ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷರಾದ ಹಾಲಪ್ಪ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ. ಮಂಜು ನಾಥ ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಆತಿಥ್ಯ ವಹಿಸಿದ್ದ ಎಸ್.ನಾರಾಯಣ, ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಡಿ.ಗಣೇಶ್, ನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭೈರಾಪುರ ಶಿವಪ್ಪ ಮೇಷ್ಟ್ರು ಸ್ವಾಗತಿಸಿ, ಕೆ.ಎಸ್. ಮಂಜಪ್ಪ ನಿರೂಪಿಸಿ, ಕುಬೇರಪ್ಪ ವಂದಿಸಿದರು. ಎಸ್. ಭಾರತಿ, ಬಾಲರಾಜ್ ಚುರ್ಚುಗುಂಡಿ ಕವನ ವಾಚಿಸಿದರು. ಸರ್ವಮಂಗಳಾ, ಜಯಮಾಲ ಮತ್ತು ತಂಡದವರು ಹಾಡು ಹೇಳಿದರು. ಅಬ್ಬಿ ನಾಡಿಗ್ ಒಗಟು, ಗಾದೆಗಳನ್ನು ಹೇಳಿದರು. ರಾಜೇಶ್ವರಿ ಮತ್ತು ಸಂಗಡಿಗರು ಯೋಗನೃತ್ಯ ಪ್ರದರ್ಶಿಸಿದರು. ಶ್ರೀನಿವಾಸ, ಉಷಾ, ಪ್ರೀತಿ ಅಪೂರ್ವ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು.