ದೇವಸ್ಥಾನಗಳ ನಿರ್ಮಾಣಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಎಲ್.ಹನುಮಂತಯ್ಯ ಅಭಿಮತ
ಕನ್ನಡಪ್ರಭ ವಾರ್ತೆ ಚಿಂತಾಮಣಿಸಾಹಿತ್ಯವೆಂದರೆ ಕೇವಲ ಕಲ್ಪನಾ ಲೋಕವಲ್ಲ; ಅದು ಸಮಾಜದ ಬದುಕಿನ ಕನ್ನಡಿಯಾಗಿದ್ದು, ಜಾತಿ-ಧರ್ಮಗಳ ಗೋಡೆಗಳನ್ನು ಕೆಡವಿ ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಸೆಯುವ ಶಕ್ತಿಯಾಗಿದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಮಾಜದಲ್ಲಿ ದೇವಸ್ಥಾನಗಳನ್ನು ನಿರ್ಮಿಸುವ ಉತ್ಸಾಹ ಮತ್ತು ಆಸಕ್ತಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿಯೂ ತೋರಿದ್ದರೆ ಇಂದು ಎಲ್ಲ ಸರ್ಕಾರಿ ಶಾಲೆಗಳು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ವಿದ್ಯಾಕೇಂದ್ರಗಳಾಗಿರುತ್ತಿದ್ದವು. ದೇವಸ್ಥಾನಗಳ ನಿರ್ಮಾಣಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಸಾಹಿತ್ಯವು ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು. ಮನುಷ್ಯರ ನಡುವಿನ ಭೇದಭಾವ ಮತ್ತು ಅಸಮಾನತೆಯನ್ನು ಹೋಗಲಾಡಿಸಿ, ಓದುಗರ ಮನಸ್ಸನ್ನು ಚಿಂತನೆಗೆ ಹಚ್ಚುವ ಸಾಹಿತ್ಯ ಇಂದಿನ ಅಗತ್ಯವಾಗಿದೆ. ಪಂಪನ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಆಶಯ, ಬಸವಣ್ಣನವರ ವಚನಗಳು ಹಾಗೂ ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಸಮಾಜಕ್ಕೆ ಸದಾ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಕೆರೆಗಳು ಬತ್ತಿದರೆ ಬದುಕು ಮತ್ತು ಸಂಸ್ಕೃತಿಯೂ ಬತ್ತುತ್ತದೆ, ಆಶಯ ನುಡಿಗಳನ್ನಾಡಿ, ಕೆರೆಗಳು ಬತ್ತಿದಾಗ ಕೇವಲ ನೀರು ಮಾತ್ರವಲ್ಲ, ಅದರೊಂದಿಗೆ ರೈತರ ಬದುಕು, ಸಾಮಾಜಿಕ ಸಂಬಂಧಗಳು ಮತ್ತು ಗ್ರಾಮೀಣ ಸಂಸ್ಕೃತಿಯೂ ಬತ್ತಿಹೋಗುತ್ತವೆಯೆಂದು ಆತಂಕ ವ್ಯಕ್ತಪಡಿಸಿದರು.ಕೆರೆಗಳ ಪುನರುಜ್ಜೀವನಕ್ಕೆ ಹೂಳು ತೆಗೆಯುವುದು, ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವುದು, ಒತ್ತುವರಿ ತೆರವುಗೊಳಿಸುವುದು ಮತ್ತು ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಕೆರೆಗಳನ್ನು ಉಳಿಸುವುದು ಎಂದರೆ ಕೃಷಿ, ರೈತ, ಹಳ್ಳಿ, ಭಾಷೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿದಂತೆ. ಸಾಹಿತ್ಯವು ಕೇವಲ ಕವಿತೆ, ಕಥೆಗಳಿಗೆ ಸೀಮಿತವಾಗದೆ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಧ್ವನಿಯಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ ಕನ್ನಡ ಭಾಷೆ ನಮ್ಮ ಬದುಕು ಮತ್ತು ಅಸ್ಮಿತೆಯ ಪ್ರತೀಕ: ಕನ್ನಡ ಭಾಷೆಯು ನಮ್ಮ ಇತಿಹಾಸ, ಪರಂಪರೆ, ಆಹಾರ ಪದ್ಧತಿ, ಹಬ್ಬ-ಜಾತ್ರೆ ಸೇರಿದಂತೆ ನಮ್ಮ ಇಡೀ ಜೀವನ ಮತ್ತು ಅಸ್ಮಿತೆಯನ್ನು ರೂಪಿಸಿದೆ. ಪರಿಸರ, ವಾಸ್ತುಶಿಲ್ಪ, ಶಾಸನಗಳು, ಜನಪದ ಹಾಗೂ ಲಲಿತಕಲೆಗಳ ಮೂಲಕ ಕನ್ನಡ ಭಾಷೆ ವಿಶ್ವಕ್ಕೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದೆ.ಕಾರ್ಯಕ್ರಮದಲ್ಲಿ ಶಾಸಕ ಡಾ.ಎಂ.ಸಿ.ಸುಧಾಕರ್, ಉಪವಿಭಾಗಾಧಿಕಾರಿ ಶೋಭಿತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ರಮೇಶ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ತಹಶೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ನಗರಸಭೆ ಪೌರಾಯುಕ್ತ ಚಲಪತಿ, ಬಿಇಒ ನಾರಾಯಣಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡುತ್ತಿರುವ ಚಿತ್ರ.