ಜಾಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಭಟ್ಕಳ

ಜಾಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಪ್ರಾಂಶುಪಾಲ ನಾಗೇಶ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಾಹಿತ್ಯ ಅಕ್ಷರಗಳ ಜೋಡಣೆಯಲ್ಲ. ಸಮಾಜ ಸುಧಾರಣೆಗೆ ದಾರಿ ತೋರಿಸುವ ಬೆಳಕಾಗಿದೆ. ಒಂದು ಕಾಲಕ್ಕೆ ಪುಸ್ತಕ ರೂಪದಲ್ಲಿಯೇ ವಿಚಾರಗಳನ್ನು ಅಭಿವ್ಯಕ್ತಿ ಪಡಿಸಬೇಕಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವೈಚಾರಿಕ ಚಿಂತನೆ, ಸೃಜನಶೀಲ ಬರೆವಣಿಗೆಗಳನ್ನು ದಾಟಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಏಕೀಕರಣ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಸಾಹಿತ್ಯ ಪರಿಷತ್ತನ್ನು ಹಾಗೆಯೇ ಅದರ ಸಂಸ್ಥಾಪಕರನ್ನು ಸದಾ ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಸಾಹಿತ್ಯ, ಲೇಖಕರನ್ನು ಉತ್ತೇಜಿಸುವುದು, ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ. ಎಲ್ಲ ವಿದ್ಯಾರ್ಥಿಗಳು ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಕರೆ ನೀಡಿದರಲ್ಲದೇ, ನಮ್ಮ ನಾಡು ನುಡಿಗೆ ನಮ್ಮ ನೆಲೆಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದು ನುಡಿದರು.


ಕಸಾಪ ಗೌರವ ಕೋಶಧ್ಯಕ್ಷ, ಸಾಹಿತಿ ಶ್ರೀಧರ್ ಶೇಟ್ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಹಿನ್ನೆಲೆ, ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಸಾಪ ಆಜೀವ ಸದಸ್ಯ, ವಿಜಯ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಎಂ.ಆರ್. ನಾಯ್ಕ, ಸಾಹಿತಿ ಮಾನಾಸುತ ಶಂಭು ಹೆಗಡೆ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶೆಟ್ಟಿ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.