ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶತಮಾನಗಳಿಂದ ಹಿಂಸೆ, ನೋವು, ಅವಮಾನಗಳಿಂದ ಮೌನಕ್ಕೆ ಶರಣಾಗಿದ್ದ ಮಹಿಳೆಯ ಧ್ವನಿಗೆ ಸಾಹಿತ್ಯವು ಅಭಿವ್ಯಕ್ತಿಯ ಅದ್ಭುತ ವೇದಿಕೆಯಾಗಿದೆ ಎಂದು ಲೇಖಕಿ ಡಾ.ಸಬಿತಾ ಬನ್ನಾಡಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಮಲಾ ನೆಹರು ಮಹಿಳಾ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ಶಾಂತವೇರಿ ಗೋಪಾಲಗೌಡರ ಸ್ಮಾರಕ ದತ್ತಿ ಕಾರ್ಯಕ್ರಮಲ್ಲಿ ಕನ್ನಡ ಸಾಹಿತ್ಯದಲ್ಲಿ ದಮನಿತ ಮಹಿಳಾ ಸಂವೇದನೆ ವಿಚಾರ ಕುರಿತು ಮಾತನಾಡಿದ ಅವರು, ಮಹಿಳೆಯರು ನಾವು ನಮ್ಮನ್ನು ಹೇಗೆ ಬಿಂಬಿಸಿಕೊಳ್ಳಬೇಕು ಎನ್ನುವುದರತ್ತ ಯೋಚಿಸಬೇಕಿದೆ. ನಾವು ದಮನಿತರಾದಾಗ ನಮ್ಮ ಪ್ರತಿಕ್ರಿಯೆ ಅಸಹಾಯಕ ರೀತಿಯಲ್ಲಿರುತ್ತದೆ. ಇದನ್ನು ಕಂಡ ವಾಸ್ತವ ಬಲಿಪಶುಮಾಡಲು ಹವಣಿಸುತ್ತದೆ. ಇಂತಹ ಸಂದರ್ಭಗಳಲ್ಲಿ ನಾವೇ ಪರ್ಯಾಯ ದಾರಿ ಹುಡುಕುವತ್ತ ಪರಸ್ಪರ ಸಹಾಯ ಹಸ್ತಚಾಚುವ ಅಗತ್ಯವನ್ನು ಕನ್ನಡ ಸಾಹಿತ್ಯ ಸಾರಿ ಹೇಳಿದೆ ಎಂದು ತಿಳಿಸಿದರು.
ಹೆಣ್ಣಿನ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಹೆಣ್ಣು ಮಗುವಿನ ಜನ್ಮವನ್ನೇ ತಪ್ಪು ಎಂದು ಸಲ್ಲದ ತೊಂದರೆ ನೀಡುವವರು ಇದ್ದಾರೆ. ಇಂತಹ ಸಂದರ್ಭಗಳಲ್ಲಿ ಜೀವನ ಎದುರಿಸಲು, ಸವಾಲು ಸ್ವೀಕರಿಸುವ ಮನೋಸ್ಥೈರ್ಯ ಪಡೆಯಲು ಸಾಹಿತ್ಯದಿಂದ ಸಾಧ್ಯ. ಹೆಣ್ಣು ಬರೆಯಲು ಶುರುಮಾಡಿದರೆ, ಜಗತ್ತಿನ ಅದೆಷ್ಟೋ ಕಟು ವಾಸ್ತವತೆಗಳು ಬಟಾ ಬಯಲಾಗುತ್ತದೆ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸ್ವಾತಂತ್ರ್ಯ ನಂತರವೂ ದೀನದಲಿತರು, ಬಡವರು, ಶ್ರಮಿಕರು, ರೈತಕೂಲಿಗಳನ್ನು ಶೋಷಣೆ ಮಾಡುವ ವ್ಯವಸ್ಥಿತ ಸಂಚಿನ ವಿರುದ್ಧದ ಹೋರಾಟವೇ ಕಾಗೋಡು ಚಳವಳಿ. 1951ರಲ್ಲಿ ನಮ್ಮ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಆ ಹೋರಾಟ ರಾಷ್ಟಮಟ್ಟದ ಗಮನ ಸೆಳೆದಿತ್ತು. ಆ ಹೋರಾಟದ ರೂವಾರಿಯಾಗಿದ್ದವರು ಎಚ್. ಗಣಪತಿಯಪ್ಪ ಅವರು ಎಂದು ವಿವರಿಸಿದರು.
ಅಂದು ಭೂಮಾಲೀಕರು ಶೋಷಣೆ ಮಾಡಿದರೆ, ಇಂದು ನಮ್ಮವರೇ ರೂಪಿಸಿದ ಕಾನೂನುಗಳು ನಮ್ಮ ರೈತರನ್ನು ಬೀದಿಗೆ ತಳ್ಳುವ ಸ್ಥಿತಿ ನೋಡುತ್ತಿದ್ದೇವೆ. ಮುಳುಗಡೆ, ಪುನರ್ ವಸತಿ, ಬಗರ್ ಹುಕುಂ, ಅರಣ್ಯ ಭೂಮಿ ಏನೆಲ್ಲಾ ಹೆಸರಿನಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಆಳುವ ವರ್ಗ ಕನಿಕರತೋರದೆ ಬಡವರ ಬದುಕನ್ನು ಹೊಸುಕಿ ಹಾಕುತ್ತಿರುವುದು ಸರಿಯಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಮತ್ತೊಂದು ಕಾಗೋಡು ಮಾದರಿ ಚಳವಳಿ ಅಗತ್ಯವಿದೆ ಎಂದು ವಿವರಿಸಿದರು.
ಕಾಲೇಜು ಪ್ರಾಂಶುಪಾಲರಾದ ಪ್ರೊ. ಮಮತಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕಿ ಪ್ರೊ. ಆಶಾಲತಾ, ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಅನ್ನಪೂರ್ಣ ಎಚ್. ಆರ್, ಡಾ.ಪಾಲಾಕ್ಷ ಕೆ.ಆರ್, ಡಾ. ಬಸವರಾಜ್ ಟಿ.ಎನ್, ಕಸಾಪ ಕಾರ್ಯದರ್ಶಿ ಡಿ. ಗಣೇಶ್ ಭಾಗವಹಿಸಿದ್ದರು. ವಿದ್ಯಾರ್ಥಿನಿ ಸೌಮ್ಯ ಪ್ರಾರ್ಥಿಸಿ, ಶೃಂಗ ಸ್ವಾಗತಿಸಿದರು.