ಸಾರಾಂಶ
‘ಭಾವ ಸಂಗಮ’ ಕವನ ಸಂಕಲನ ಲೋಕಾರ್ಪಣೆ ಕಾರ್‍ಯಕ್ರಮ
ಕನ್ನಡಪ್ರಭ ವಾರ್ತೆ ಹೊಸದುರ್ಗಕವಿಗಳಾದವರು ಸಾಹಿತ್ಯ, ಕವಿತೆ ಮತ್ತು ಕತೆಗಳನ್ನು ಬರೆಯಬಹುದು. ಆದರೆ ಅವುಗಳನ್ನು ಓದುವ ಸಹೃದಯರ ಕೊರತೆಯಾದರೆ ಸಾಹಿತ್ಯ ವ್ಯರ್ಥವಾಗುತ್ತದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸಮೀಪದ ಸಾಣೇಹಳ್ಳಿ ಶ್ರೀಮಠದ ಲತಾ ಮಂಟಪದಲ್ಲಿ ಲತಾ ಧರಣೇಶ್ ಅವರ ‘ಭಾವ ಸಂಗಮ’ ಕವನ ಸಂಕಲನ ಲೋಕಾರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.೧೨ನೆಯ ಶತಮಾನದ ಶರಣರು ಯಾವುದೇ ಪದವಿಯನ್ನು ಪಡೆದವರಲ್ಲ. ಭಾವ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ಹೃದಯ ಶ್ರೀಮಂತಿಕೆಯಿಂದ ಬದುಕನ್ನು ಕಟ್ಟಿಕೊಂಡವರು. ಮನುಷ್ಯ ಮೊದಲು ಅಂತರಂಗ ಬಹಿರಂಗ ಶುದ್ಧಿಯನ್ನು ಮಾಡಿಕೊಳ್ಳಬೇಕು. ಬಸವಣ್ಣನವರ ಸಪ್ತಸೂತ್ರಗಳಿಗನುಗುಣವಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಕವನ ಹೊಸ ಚಿಂತನೆಗೆ ತೊಡಗಿಸಿದರೆ ಶಕ್ತಿಯುತ ಸಾಹಿತ್ಯ ಆಗಲಿಕ್ಕೆ ಸಾಧ್ಯ ಎಂದರು.
ಮನುಷ್ಯನಲ್ಲಿ ಓದುವ, ಬರೆಯುವ ಆಸಕ್ತಿ ಕಡಿಮೆಯಾಗಿ ಆತನ ಅಭಿರುಚಿ ಬೇರೆ ಕಡೆ ಹರಿದಿದೆ. ಮನುಷ್ಯನಿಗೆ ಸಂಸ್ಕಾರ ಇದ್ದರೆ ಸಂಕಲ್ಪ ಶಕ್ತಿ ಹೆಚ್ಚಿಸುತ್ತೆ. ಸಾಹಿತ್ಯ, ಸಂಗೀತದ ಬಗ್ಗೆ ಒಲವನ್ನು ಬೆಳೆಸಿಕೊಂಡರೆ ಭಯ, ಆತಂಕಗಳು, ದುಗುಡ, ದುಮ್ಮಾನಗಳು ದೂರವಾಗುತ್ತವೆ ಎಂದರು.ನಮ್ಮ ಮಕ್ಕಳಿಗೆ ಸ್ಪರ್ಧಾಮನೋಭಾವ ಬೆಳೆಸುತ್ತಿವೆಯೋ ಹೊರತು ನೈತಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ಕೊಡುತ್ತಿಲ್ಲ. ನಮ್ಮ ಕುಟುಂಬಗಳಿಗೆ ಗೋಡೆಗಳನ್ನು ಕಟ್ಟಿಕೊಂಡು ಸ್ವಾರ್ಥಜೀವನ ನಡೆಸುತ್ತಿದ್ದೇವೆ. ಒಂದು ಕವನ ಓದುವುದಕ್ಕಿಂತ ಹಾಡಿದಾಗ ಹೊಸ ಅರ್ಥ ಬಿಚ್ಚಿಕೊಳ್ಳುವುದು ಬುದ್ಧಿವಂತಿಕೆಗಿಂತ ಹೃದಯವಂತಿಕೆಯಿಂದ ಬರೆದ ಕವನ ಮನಸ್ಸನ್ನು ಮುಟ್ಟಿ ತಟ್ಟುವುದು.
ಕೃತಿ ಲೋಕಾರ್ಪಣೆಗೊಳಿಸಿದ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ ಮಾತನಾಡಿ, ೨೦೦೦ರ ನಂತರ ಹುಟ್ಟಿದ ಮಕ್ಕಳಲ್ಲಿ ಓದುವರ ಸಂಖ್ಯೆ ಕಡಿಮೆ. ಇದಕ್ಕೆ ಜವಾಬ್ದಾರರು ಪೋಷಕರು. ನಮ್ಮ ಮಕ್ಕಳು ಕಲ್ಪನೆ ಮಾಡಿಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ. ಹಿಂದೆಲ್ಲಾ ಕತೆ ಹೇಳುತ್ತಿದ್ದರು. ಆಗ ತಮ್ಮದೇ ಆದ ಲೋಕವನ್ನು ಸೃಷ್ಟಿಸಿಕೊಳ್ಳುತ್ತಿದ್ದರು. ಎಲ್ಲ ಪೋಷಕರು ನಮ್ಮ ಮಕ್ಕಳನ್ನು ನಾವೇ ದೂಷಿಸುತ್ತೇವೆ. ಆದರೆ ಓದಿನ ಮಹತ್ವವನ್ನು ಅವರಿಗೆ ತಿಳಿಸದೇ ಇರುವುದು. ನಮ್ಮ ಹೃದಯ ಮತ್ತು ಮನಸ್ಸುಗಳ ಕಡೆ ಗಮನಕೊಡಬೇಕು ಎಂವರು.ಜೀವನದಲ್ಲಿ ಮಾಡುವ ನಾಟಕಗಳು ಅರ್ಥ ಮಾಡಿಕೊಳ್ಳಬೇಕೆಂದರೆ ರಂಗಭೂಮಿಯ ಮೇಲೆ ನಡೆಯುವ ನಾಟಕವನ್ನು ನೋಡಬೇಕು. ನವೋದಯ ಕವಿತೆಗಳು ಹಾಡುವಂಥವು. ಲತಾ ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥೈಸಿಕೊಂಡು ಕವಿತೆಗಳನ್ನು ಬರೆದರೆ ಉತ್ತಮ ಎಂದರು.
ಅನ್ನಪೂರ್ಣ ಪ್ರಕಾಶನದ ಯರ್ರಿಸ್ವಾಮಿ, ಮುಖ್ಯ ಅತಿಥಿ ಸಂಪತ್‌ಕುಮಾರ, ಕೃತಿಯ ಲೇಖಕಿ ಲತಾ ಧರಣೇಶ್ ಮಾತನಾಡಿದರು. ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು.ಅಣ್ಣೀಗೆರೆಯ ವಿರೂಪಾಕ್ಷಪ್ಪ ಸ್ವಾಗತಿಸಿದರೆ ಸುಧಾ ಎಂ ನಿರೂಪಿಸಿ ವಂದಿಸಿದರು.