ದಾಬಸ್‍ಪೇಟೆ: ಸಾಹಿತ್ಯ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಸಮಾಜದ ಕನ್ನಡಿ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಕಾಲದಿಂದಲೂ ಕನ್ನಡ ಸಾಹಿತ್ಯ ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದೆ ಎಂದು ಪವಾಡ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು

ದಾಬಸ್‍ಪೇಟೆ: ಸಾಹಿತ್ಯ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಸಮಾಜದ ಕನ್ನಡಿ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಕಾಲದಿಂದಲೂ ಕನ್ನಡ ಸಾಹಿತ್ಯ ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದೆ ಎಂದು ಪವಾಡ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಪವಾಡ ಬಸವಣ್ಣ ದೇವರಮಠದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನ ಹಾಗೂ ‘ಅಕ್ಷರಯಜ್ಞ ತಪಸ್ವಿಗಳು’ ಕೃತಿನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀಗಳು, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದೆ ಮತ್ತು 8 ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಭಾಷೆಯಾಗಿದೆ. ಇಂದಿನ ತಂತ್ರಜ್ಞಾನ ಮತ್ತು ಜಾಗತೀಕರಣದ ಅಬ್ಬರದಲ್ಲಿ ಕನ್ನಡ ಭಾಷೆ ಕೇವಲ ಮನೆಮಾತಾಗುಳಿಯದೆ, ಆಡಳಿತ, ನ್ಯಾಯಾಂಗ ಮತ್ತು ಆಧುನಿಕ ತಂತ್ರಜ್ಞಾನದ ಭಾಷೆಯಾಗಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಕೃತಿಗಳು ಹೆಚ್ಚು ಲಭ್ಯವಾಗುವಂತೆ ಮಾಡುವಲ್ಲಿ ಯುವ ಸಾಹಿತಿಗಳು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಳೆಗನ್ನಡ, ನಡುಗನ್ನಡದಷ್ಟೇ ಶ್ರೀಮಂತಿಕೆ ಜಾನಪದ ಸಾಹಿತ್ಯದಲ್ಲೂ ಇದೆ. ಕರಾವಳಿ, ಮಲೆನಾಡು, ಬಯಲುಸೀಮೆ ಮತ್ತು ಕಲ್ಯಾಣ ಕರ್ನಾಟಕದ ವಿಶಿಷ್ಟ ಸಾಹಿತ್ಯ ಪ್ರಕಾರಗಳನ್ನು ಮತ್ತು ಅಲ್ಲಿನ ಮೌಖಿಕ ಪರಂಪರೆಯನ್ನು ದಾಖಲಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಆ ಮೂಲಕವೇ ಕನ್ನಡ ಸಾಹಿತ್ಯ ಮತ್ತಷ್ಟು ಪರಿಪೂರ್ಣಗೊಳ್ಳಲು ಸಾಧ್ಯ ಎಂದರು.

ಕನ್ನಡ ಚಳವಳಿ ಹೋರಾಟಗಾರ ಪಾಲನೇತ್ರ ಮಾತನಾಡಿ, ಕನ್ನಡ ಭಾಷೆಯ ಸೊಬಗನ್ನು ಉಳಿಸಿ, ಬೆಳೆಸಿ ಹಾಗೂ ದೈನಂದಿನ ಬದುಕಿನಲ್ಲಿ ಬಳಸುವ ಮೂಲಕ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಬೇಕೆಂದರು.

ಇದೇ ಸಂದರ್ಭದಲ್ಲಿ ‘ನನ್ನವಳಿಗಾಗಿ ನೂರು ಕವನಗಳು’, ‘ವೋಟಿನ ಮಹತ್ವ’ ಹಾಗೂ ಸಣ್ಣ ಕಥೆಗಳ ಕೃತಿಗಳನ್ನೂ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್, ಕರ್ನಾಟಕ ಕನ್ನಡ ಸಾಹಿತ್ಯ ಲೋಕದ ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಕೆ.ಎಸ್.ಹೆಗಡೆ, ಹನುಮಂತರಾಯಪ್ಪ, ಬೈಲಪ್ಪ ದೊಡ್ಡೇರಿ ಹಾಗೂ ಬೋಗಣ್ಣ, ನಾರಾಯಣಗೌಡ, ಅನಂತರಾಮು, ಡಾ. ಕಿರಣ್ ಕುಮಾರ್, ವಲ್ಲೀಶ್ ಬಾಬು, ರವಿಶಂಕರ್ ಗೌಡ, ಬೂದಿಹಾಳ್ ಕಿಟ್ಟಿ, ಕೃಷ್ಣಪ್ಪ, ತಿಮ್ಮರಾಜು, ದ್ವಾರನಕುಂಟೆ ದೇವರಾಜ್, ಶ್ರೇಯಸ್, ಶಿವಪ್ರಸಾದ್ ಆರಾಧ್ಯ, ಸಿದ್ದರಾಜು, ಸದಾನಂದಆರಾಧ್ಯ, ಸಿರಾಜ್ ಅಹಮದ್ ಸೊರಬ, ಗಝಲ್ ಕವಿ ನಾರಾಯಣಸ್ವಾಮಿ ಇತರರು ಭಾಗವಹಿಸಿದ್ದರು.

ಪೋಟೋ 1 :

ನೆಲಮಂಗಲದ ಪವಾಡ ಬಸವಣ್ಣ ದೇವರಮಠದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನ ಹಾಗೂ ‘ಅಕ್ಷರಯಜ್ಞ ತಪಸ್ವಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಗಣ್ಯರು ಭಾಗವಹಿಸಿರುವುದು.