ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕಾದಂಬರಿ ಎಂಬುದು ಸಾವಿರಾರು ವರ್ಷಗಳ ಕಾಲ ಅಕ್ಷರ ರೂಪದಲ್ಲಿ ಉಳಿಯುವ ಜ್ಞಾನ ಭಂಡಾರ ಎಂದು ವಿಶ್ವ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಹೇಳಿದರು.ತಾಲೂಕಿನ ಸಂತೆಶಿವರ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಸಾಹಿತ್ಯಾಭಿಮಾನಿಗಳು ಹಮ್ಮಿಕೊಂಡಿದ್ದ ಕೃತಜ್ಞತಾರ್ಪಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಹಾಗೂ ಬರವಣಿಗೆಗೆ ಎಂದಿಗೂ ಕೊನೆ ಇಲ್ಲ ಎಂದರು.
ನಾನು ಉತ್ತರದಿಂದ ದಕ್ಷಿಣ ಧೃವದವರೆಗೂ ಓದಿದ್ದೇನೆ. ಸಾಕಷ್ಟು ದೇಶಗಳನ್ನು ಸುತ್ತಿದ್ದೇನೆ. ಎಲ್ಲ ಭಾಷೆಗಳಲ್ಲಿಯೂ ಸಾಹಿತ್ಯ ಇದೆ. ಆದರೆ ನಮ್ಮ ಕನ್ನಡ ಭಾಷೆಯಷ್ಟು ಸುಂದರ ಹಾಗೂ ಸುಲಲಿತ ಭಾಷೆ ಮತ್ತೊಂದಿಲ್ಲ ಎಂದು ಬಣ್ಣಿಸಿದರು. ಗ್ರಾಮದ ದೇಗುಲ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದೇನೆ. ಯಾವುದೇ ಗ್ರಾಮವಾಗಲಿ ದೇಗುಲ ನಿರ್ಮಾಣ ಇಲ್ಲವೇ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಬೇಕು ಎಂದು ಕೋರಿದರು. ನನ್ನ ಈ ಎಲ್ಲ ಸಾಧನೆಗೆ ನನ್ನ ತಾಯಿಯೇ ಸ್ಫೂರ್ತಿ. ಇಂದು ನನಗೆ ಹುಟ್ಟೂರಿನಲ್ಲಿ ಪುರಸ್ಕಾರ ಸಿಗುತ್ತಿದ್ದು, ಇದನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ ಎಂದರು.ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸರಸ್ವತಿ ಯಾರಿಗೂ ಸುಲಭವಾಗಿ ಒಲಿಯುವುದಿಲ್ಲ. ಶ್ರದ್ಧೆ, ಶಿಸ್ತು ಹಾಗೂ ಸೌಮ್ಯತೆ ಇರಬೇಕು. ಅದು ಎಸ್.ಎಲ್.ಭೈರಪ್ಪ ಅವರಲ್ಲಿದೆ. ಭೈರಪ್ಪನವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದು, ವಿಶ್ವವನ್ನೇ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸತ್ಯವನ್ನು ಇದ್ದಂತೆಯೇ ಯಥಾವತ್ತಾಗಿ ಸಾಹಿತ್ಯ ರೂಪದಲ್ಲಿ ಮಂಡಿಸುವ ಮೂಲಕ ಸಾಹಿತ್ಯಾಭಿಮಾನಿಗಳಿಗೆ ರುಚಿಕರವಾದ ಸಾಹಿತ್ಯದೌತಣವನ್ನು ಉಣ ಬಡಿಸಿರುವ ಎಸ್.ಎಲ್.ಭೈರಪ್ಪ ಅವರ ಸಾಧನೆ ಉತ್ತುಂಗ ಶಿಖರವಾಗಿದೆ ಎಂದರು.ಹಾಸನ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ವೃತ್ತಿಯ ಜತೆಗೆ ಊರಿನ ಅಭಿವೃದ್ಧಿಯ ಬಗ್ಗೆ ಚಿಂತನೆವುಳ್ಳ ಭೈರಪ್ಪನವರು ಹುಟ್ಟೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಈ ಭಾಗದ ಭಗೀರಥ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಸಂಪಾದಕ ವಿಶ್ವೇಶ್ವರ ಭಟ್ ಅವರು ಭೈರಪ್ಪನವರ ಕುರಿತು ಮಾತನಾಡಿದರು.
ಸುತ್ತಮುತ್ತಲ ಗ್ರಾಮಸ್ಥರು ಸರದಿ ಸಾಲಿನಲ್ಲಿ ಎಸ್.ಎಲ್.ಭೈರಪ್ಪ ಅವರನ್ನು ಅಭಿನಂದಿಸಿದರು. ತಿಪಟೂರು ಶಾಸಕ ಷಡಕ್ಷರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸೋಮಶೇಖರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎ.ರಂಗಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ, ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಶ್ರೀ ಗೌರಮ್ಮ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಪ್ರಸಾದ್, ಪ್ರಮುಖರಾದ ರಾಜಣ್ಣ, ಬಸವರಾಜ್ ಹಾಗೂ ಗ್ರಾಮಸ್ಥರು ಮತ್ತು ಸಾಹಿತ್ಯಾಭಿಮಾನಿಗಳು ಹಾಜರಿದ್ದರು.ಬೆಳ್ಳಿ ರಥದಲ್ಲಿ ಮೆರವಣಿಗೆ:
ಸಮಾರಂಭದ ಅಂಗವಾಗಿ ಎಸ್.ಎಲ್.ಭೈರಪ್ಪ ಅವರನ್ನು ಬೆಳಗ್ಗೆ ಚಿಕ್ಕೋನಹಳ್ಳಿ ಗೇಟ್ ಬಳಿಯಿಂದ ಸಂತೆಶಿವರದವರೆಗೆ ಬೆಳ್ಳಿ ಸಾರೋಟಿನಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಇದಕ್ಕೂ ಮೊದಲು ಪೂರ್ಣಕುಂಭ ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು ಊರ ಕೆರೆಯಿಂದ ಗಂಗೆಯನ್ನು ಹೊತ್ತು ತಂದರು. ಹಳ್ಳಿಕಾರ್ ಎತ್ತುಗಳು ಮೆರವಣಿಗೆಗೆ ಸಾಥ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.ಭೈರಪ್ಪ ವಿರಚಿತ ೨೭ ಕಾದಂಬರಿಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಚಿಕ್ಕೋನಹಳ್ಳಿ ಗೇಟ್‌ನಲ್ಲಿ ಟ್ಯಾಬ್ಲೊಗಳನ್ನು ವೀಕ್ಷಿಸಿದ ಭೈರಪ್ಪನವರು ಹರ್ಷ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಕಂಸಾಳೆ, ಕೋಲಾಟ, ಜಾನಪದ ಹಾಗೂ ವೀರಗಾಸೆ ಕುಣಿತ ಮೇಳೈಸಿದವು.
ಸಿಂಗಾರಗೊಂಡ ಊರು:ಭೈರಪ್ಪನವರ ಅಭಿನಂದನಾ ಸಮಾರಂಭ ಅಂಗವಾಗಿ ಸಂತೆಶಿವರ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಪ್ರತಿ ಮನೆ ಮುಂದೆ ರಂಗೋಲಿ ಬಿಡಿಸಿ ಅಲಂಕಾರ ಮಾಡಲಾಗಿತ್ತು. ಪ್ರತಿ ಮನೆಯನ್ನೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೆರವಣಿಗೆಯಲ್ಲಿ ಬಂದ ಭೈರಪ್ಪನವರಿಗೆ ಹಾರ, ಶಾಲು, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ತವರೂರ ಪ್ರೀತಿಗೆ ಭೈರಪ್ಪ ಮನಸೋತರು.
ಸಾಹಿತ್ಯ ರಸದೌತಣ:ಭೈರಪ್ಪನವರ ಹುಟ್ಟೂರು ಸಂತೆಶಿವರದಲ್ಲಿ ಭಾನುವಾರ ಸಾಹಿತ್ಯದ ರಸದೌತಣ ಉಣಬಡಿಸಲಾಯಿತು. ವೇದಿಕೆ ಮುಂಭಾಗ ಅಳವಡಿಸಿದ್ದ ಪುಸ್ತಕ ಭಂಡಾರಕ್ಕೆ ನೂರಾರು ಸಾಹಿತ್ಯ ಪ್ರೇಮಿಗಳು ಲಗ್ಗೆಯಿಟ್ಟು ನೆಚ್ಚಿನ ಸಾಹಿತಿಯ ಪುಸ್ತಕಗಳನ್ನು ಖರೀದಿಸಿದರು.
ವಸ್ತು ಪ್ರದರ್ಶನಕ್ಕೆ ಮೆಚ್ಚುಗೆ:ನವೀಕೃತ ಗೌರಮ್ಮ ಸ್ಮಾರಕ ಟ್ರಸ್ಟ್‌ನಲ್ಲಿ ಪ್ರದರ್ಶನಕ್ಕಿಟ್ಟಿದ್ದ ಭೈರಪ್ಪನವರ ಪುಸ್ತಕ, ಫೋಟೋ, ಬಾಲ್ಯದಲ್ಲಿ ಬಳಸುತ್ತಿದ್ದ ಟ್ರಂಕ್, ಕೈ ಬರಹ, ದೇಶದ ಮಹನೀಯರ ಜೊತೆಗಿನ ಭಾವಚಿತ್ರಗಳು ಭೈರಪ್ಪ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿತು.