ಬದುಕನ್ನು ನೋಡುವ ಕಿಂಡಿ ಸಾಹಿತ್ಯವಾಗಿದೆ-ಸಾಹಿತಿ ಸತೀಶ ಕುಲಕರ್ಣಿ

| Published : May 31 2024, 02:26 AM IST

ಬದುಕನ್ನು ನೋಡುವ ಕಿಂಡಿ ಸಾಹಿತ್ಯವಾಗಿದೆ-ಸಾಹಿತಿ ಸತೀಶ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಬದುಕನ್ನು ನೋಡುವ ಕಿಂಡಿ ಸಾಹಿತ್ಯವಾಗಿದೆಯಲ್ಲದೆ ಅದು ಕಾಲದ ಅನುಭವದಲ್ಲಿ ಅರಳಿದ ಸಹೃದಯಿ ಸಾಹಿತಿಗಳ ಸೃಜನಶೀಲ ಬರವಣಿಗೆಯ ಅಕ್ಷರ ರೂಪ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಹಾನಗಲ್ಲ: ಬದುಕನ್ನು ನೋಡುವ ಕಿಂಡಿ ಸಾಹಿತ್ಯವಾಗಿದೆಯಲ್ಲದೆ ಅದು ಕಾಲದ ಅನುಭವದಲ್ಲಿ ಅರಳಿದ ಸಹೃದಯಿ ಸಾಹಿತಿಗಳ ಸೃಜನಶೀಲ ಬರವಣಿಗೆಯ ಅಕ್ಷರ ರೂಪ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಹಾನಗಲ್ಲ ತಾಲೂಕಿನ ಹಾವಣಗಿ ಗ್ರಾಮದಲ್ಲಿ ನಡೆದ ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಸಾಹಿತ್ಯ ಮತ್ತು ಬದುಕು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬದುಕೇ ಸಾಹಿತ್ಯವಾಗಲು ಸಾಧ್ಯ. ಅದು ವೈವಿಧ್ಯಮಯ ಅಭಿವ್ಯಕ್ತಿ. ಕಾಲಕಾಲಕ್ಕೆ ಸಾಹಿತ್ಯದ ರೂಪವೂ ಬದಲಾಗುತ್ತದೆ. ಸಾಹಿತ್ಯ ಕಟ್ಟಳೆಗಳನ್ನು ಒಡೆದು ಬೀದಿಗೆ ಬರಬೇಕು. ಎಲ್ಲರ ಒಳಗೆ ಅನುಭವವನ್ನು ಬಿತ್ತುವ ಸಾಮಾಜಿಕ ಸಂದೇಶ ಬಿತ್ತುವ ವಾಹಕ ಶಕ್ತಿಯಾಗಬೇಕು ಎಂದರು.

ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ನಮ್ಮ ಜನಪದ ಕಥೆಗಳು, ಹಾಡುಗಳು ಶಾಲೆ ಓದದ, ಬದುಕನ್ನು ನಿಜವಾಗಿ ಓದಿದ, ಅನುಭವದ ಸತ್ಯ ಸಾಹಿತ್ಯ. ಇದು ಎಲ್ಲ ಕಾಲಕ್ಕೂ ಸಲ್ಲುವಂತಹದ್ದು. ಪ್ರಾಣಿ, ಪಕ್ಷಿ, ಗಿಡ-ಮರಗಳು ಮನುಷ್ಯನಿಗೆ ಬುದ್ಧಿ ಹೇಳುವ ಪಾತ್ರಗಳಾದವು. ಬದಲಾದ ಕಾಲದಲ್ಲಿಯೂ ಅಪ್ಪಟ ಸತ್ಯವನ್ನು ಯಥಾವತ್ತಾಗಿ ನಿರೂಪಿಸುವ ಜನಪದ ಕಥೆ, ಗೀತೆ ಮತ್ತೆ ಮುನ್ನೆಲೆಗೆ ಬರಬೇಕು. ಶಾಲೆಗಳು ಕಥಾ ರೂಪದ ಬೋಧನೆಗೆ ಆದ್ಯತೆ ನೀಡಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಧ್ಯಾಪಕ ಡಾ. ಬಿ.ಎಸ್. ರುದ್ರೇಶ, ಕಾಲ ಬದಲಾಗಿರಬಹುದು, ಮೌಲ್ಯ ಬದಲಾಗಿಲ್ಲ. ಎಲ್ಲ ಕಾಲಕ್ಕೂ ಸಲ್ಲುವ ನೀತಿಯ ಪುನರುತ್ಥಾನವಾಗಬೇಕು. ಕಥೆಗಳು ಸತ್ಯ ಸಂಗತಿಯ ನಿರೂಪಣೆಯನ್ನು ಹೊಂದಿವೆ. ಆಧುನಿಕ ಕಥೆಗಳಲ್ಲಿನ ಪ್ರಸ್ತುತ ವಾಸ್ತವಗಳನ್ನು ಅರಿತು ಅನುಸರಿಸುವ ಅಗತ್ಯವಿದೆ ಎಂದರು.

ಪ್ರಶಿಕ್ಷಣಾರ್ಥಿ ಸಂಗೀತಾ ಬೆಳವತ್ತಿ ಸಾಹಿತ್ಯ ಮನೋಲ್ಲಾಸದ ಮೂಲಕ ಮಾನವೀಯತೆ, ಮೌಲ್ಯಗಳನ್ನು ಸಹೃದಯರ ಮನಕ್ಕೆ ತಲುಪಿಸುವ ಸಂವೇದನೆ ಹೊಂದಿದೆ. ಎಲ್ಲ ಕಾಲದ ಸಾಹಿತ್ಯವೂ ಆಯಾ ಕಾಲದ ಸಂವೇದನೆಗಳನ್ನು ನಿರೂಪಿಸಿದೆ ಎಂದರು.

ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್‌ ಸಲಹಾ ಸಮಿತಿ ಸದಸ್ಯ ಬಸವರಾಜ ಯಲಿ, ಡಾ. ಜಿ.ವಿ. ಪ್ರಕಾಶ, ಕಾರ್ಯಕ್ರಮಾಧಿಕಾರಿ ಡಾ. ವಿಶ್ವನಾಥ ಬೋಂದಾಡೆ, ಡಾ. ಪ್ರಕಾಶ ಹುಲ್ಲೂರ, ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗರಾಜ ಬೆಳವತ್ತಿ, ವಿಶಾಲಾಕ್ಷಿ ಕೋಡಿಹಳ್ಳಿ, ಲೀಲಾವತಿ ಸಂಗೂರ ಇದ್ದರು.

ಶಿಲ್ಪಾ ಗೊಂದಿ ಪ್ರಾರ್ಥನೆ ಹಾಡಿದರು. ಪೂಜಾ ಪೂಜಾರ ಸ್ವಾಗತಿಸಿದರು. ಸೌಮ್ಯಾ ಹಿರಗಣ್ಣನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.