ಮಹಿಳೆಯರ ಮತ್ತು ಪುರುಷರ ನಡುವಿನ ಸಾಮಾಜಿಕ ಸಂಬಂಧವನ್ನು ರೂಪಿಸುವಲ್ಲಿ ಆರ್ಥಿಕ ಅಂಶಗಳು, ರಾಜಕೀಯ ಅಂಶಗಳು, ಧಾರ್ಮಿಕ ಅಂಶಗಳು, ಯಾವ ರೀತಿಯಾಗಿ ಪ್ರಭಾವಿಸುತ್ತವೆ ಎಂಬುದನ್ನು ನೋಡಬೇಕು ಎಂದು ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ.ಬಿ. ತಾರಕೇಶ್ವರ್ ಹೇಳಿದರು.
ಹೊಸಪೇಟೆ: ಮಹಿಳೆಯರ ಮತ್ತು ಪುರುಷರ ನಡುವಿನ ಸಾಮಾಜಿಕ ಸಂಬಂಧವನ್ನು ರೂಪಿಸುವಲ್ಲಿ ಆರ್ಥಿಕ ಅಂಶಗಳು, ರಾಜಕೀಯ ಅಂಶಗಳು, ಧಾರ್ಮಿಕ ಅಂಶಗಳು, ಯಾವ ರೀತಿಯಾಗಿ ಪ್ರಭಾವಿಸುತ್ತವೆ ಎಂಬುದನ್ನು ನೋಡಬೇಕು ಎಂದು ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ.ಬಿ. ತಾರಕೇಶ್ವರ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಪಂಪ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗವು ಹಮ್ಮಿಕೊಂಡಿದ್ದ ಲಿಂಗದೃಷ್ಟಿಯ ಮೂಲಕ ಪಠ್ಯದ ಓದು ಎಂಬ ಕಮ್ಮಟವನ್ನು ಉದ್ಘಾಟಿಸಿ, ಪುರುಷತ್ವದ ಅಧ್ಯಯನ ಏಕೆ, ಹೇಗೆ? ಎಂಬ ವಿಷಯ ಕುರಿತು ಮಾತನಾಡಿದ ಅವರು, ಮಹಿಳೆಯರನ್ನು ಕನಿಕರದಿಂದ ಹಾಗೂ ಪುರುಷರನ್ನು ಪುರುಷ ಪ್ರಧಾನ ಸಮಾಜದ ನಿಯಂತ್ರಕರಾಗಿ ನೋಡುತ್ತೇವೆ. ಇಬ್ಬರನ್ನು ಜೈವಿಕ ರಚನೆಯ ಆಧಾರದಲ್ಲಿ ಹಾಗೂ ದೈವಿಕ ಸಿದ್ಧಾಂತದ ನೆಲೆಯಲ್ಲಿ ನೋಡಿದಾಗ ಪುರುಷ ಮತ್ತು ಸ್ತ್ರೀ ಇಬ್ಬರೂ ಸಾಮಾಜಿಕವಾಗಿ ನಿರೂಪಣೆಗೊಂಡಿರುವವರು ಎಂದು ಅವರು ಹೇಳಿದರು.ದೈಹಿಕ ಭಿನ್ನತೆಯ ಮೇಲೆ ಒಂದು ಸಾಮಾಜಿಕ ಅಸಮಾನತೆಯನ್ನು ನಿರೂಪಿಸಲ್ಪಟ್ಟಿರುವುದರಿಂದ ಈ ಜೈವಿಕ ಅಸಮಾನತೆಯ ಮೇಲೆ ಸಾಮಾಜಿಕ ಅಸಮಾನತೆಯನ್ನು ಸೃಷ್ಟಿ ಮಾಡಿರುವುದರಿಂದ ಪುರುಷರು ಯಾವ ರೀತಿ ಸೃಷ್ಟಿಯಾಗಿದ್ದಾರೆ, ಪುರುಷನಾಗಿ ರೂಪಿಸಿದ ಅಂಶಗಳು ಯಾವುವು, ಜೆಂಡರ್ ವ್ಯವಸ್ಥೆಯಲ್ಲಿ ಪುರುಷರ ಪಾತ್ರವೇನು, ಸಾಮಾಜಿಕ ನಿರೂಪಣೆಗಳೇನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಅವರು ಲಿಂಗದೃಷ್ಟಿಯ ಮೂಲಕ ಇತಿಹಾಸ ಪಠ್ಯಗಳ ಓದು ಎಂಬ ವಿಷಯ ಕುರಿತು ಮಾತನಾಡಿ, ಹೆಣ್ಣು ಬೌದ್ಧಿಕತೆಯ ಸಂಕೇತ. ಅವಳು ಪ್ರಕೃತಿ. ಈ ಪ್ರಕೃತಿಯ ಸೃಷ್ಟಿಕರ್ತ ನಾನು ಎನ್ನುವ ಪುರುಷ, ಹೆಣ್ಣಿನ ಮೇಲೆ ಮಾಡುವ ಭೌತಿಕ ದಾಳಿಯು ಪುರಾಣ ಕಾಲದಿಂದಲೂ ಇದೆ. ನಮ್ಮಲ್ಲಿ ಎರಡು ತರಹದ ಪಠ್ಯಗಳಿವೆ. ಒಂದು ಪುರಾಣಕೇಂದ್ರಿತ ಮಹಿಳಾ ಪಠ್ಯ. ಇನ್ನೊಂದು ವಾಸ್ತವದ ಮಹಿಳಾ ಕೇಂದ್ರಿತ ಪಠ್ಯ. ನಮ್ಮ ದೇಶದಲ್ಲಿ ಶಾಸನಗಳು, ಹಸ್ತಪ್ರತಿಗಳು, ಶಾಸ್ತ್ರೀಯ ಸಾಹಿತ್ಯ ಬಂದರೂ ಕೂಡ ಇಲ್ಲಿ ಹೆಚ್ಚು ವೈಭವೀಕರಿಸುತ್ತಿರುವುದು ಪುರಾಣದ ಮಹಿಳಾ ಚರಿತ್ರೆ ಮಾತ್ರ. ನಾವು ಶೋಷಣೆಯನ್ನು ಮಹಿಳಾ ಕೇಂದ್ರಿತ ಎಂದು ಹೇಳುತ್ತ ಪುರುಷ ಪ್ರಧಾನ ವ್ಯವಸ್ಥೆಯ ಒಳಗಡೆ ಅದಕ್ಕೆ ಪರಿಹಾರವನ್ನು ಕೊಡುತ್ತೇವೆ ಹೊರತು ಮಹಿಳಾ ಕೇಂದ್ರಿತ ವ್ಯವಸ್ಥೆಯಿಂದಲ್ಲ ಎಂದರು.ಹೈದ್ರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ ಚಲನಚಿತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ. ನಿಖಿಲಾ ಎಸ್ ಮಾತನಾಡಿ, ಸಿನಿಮಾಕ್ಕೂ ಮತ್ತು ಪ್ರಪಂಚಕ್ಕೂ ನೇರವಾದ ಸಂಬಂಧವಿಲ್ಲ. ಅದರಲ್ಲಿ ಒಂದು ನಿರೂಪಣೆಯ ತಂತ್ರಗಳನ್ನು, ಸೂತ್ರಗಳನ್ನು ಹೆಚ್ಚಾಗಿ ನೋಡುತ್ತೇವೆ. ಪಠ್ಯದ ಒಳಗಿನ ಜೆಂಡರ್ (ಲಿಂಗ)ನ್ನು ಕಾಣುವುದು ಹೇಗೆ, ಜೆಂಡರ್ ಹೊರಗಿನ ಪ್ರಪಂಚವನ್ನು ನೋಡುವುದು ಹೇಗೆ ಹಾಗೂ ಈ ನಿರೂಪಣಾ ತಂತ್ರಗಾರಿಕೆ ಒಳಗೂ ಹೊರಗೂ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಬಾಹುಬಲಿ, ಕೆಜಿಎಫ್, ಕಾಶ್ಮೀರಿ ಫೈಲ್ಸ್ ಮುಂತಾದ ಕೆಲವು ಸಿನಿಮಾಗಳ ನಿರೂಪಣೆಗಳ ಮೂಲಕ ಅವರು ವಿವರಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಿಳಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಶೈಲಜಾ ಇಂ. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.