ಸಾರಾಂಶ
ಹರಪನಹಳ್ಳಿ ಪಟ್ಟಣದ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ಣ ಪ್ರಕಾಶನ ಹಾಗೂ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುಬಸವರಾಜ ಶಿವನಗೌಡ್ರು ರಚಿತ 'ಮನದ ಕಲ್ಪನೆ ಕರದ ಕಾರ್ಯ' ಪುಸ್ತಕ ಬಿಡುಗಡೆಗೊಳಿಸಲಾಯಿತು.
ಹರಪನಹಳ್ಳಿ: ಸಾಹಿತ್ಯ ಮನುಷ್ಯನ ಭಾವನೆಗಳಿಗೆ ಜೀವ ತುಂಬುವ ಸರ್ವಕಾಲಿಕ ಸಂಜೀವಿನಿ ಎಂದು ಟಿಎಂಎಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಡೀನ್ ಟಿ.ಎಂ. ರಾಜಶೇಖರ ಹೇಳಿದರು.
ಅವರು ಪಟ್ಟಣದ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ಣ ಪ್ರಕಾಶನ ಹಾಗೂ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುಬಸವರಾಜ ಶಿವನಗೌಡ್ರು ರಚಿತ ''''ಮನದ ಕಲ್ಪನೆ ಕರದ ಕಾರ್ಯ'''' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ಎರಡು ವರ್ಷದ ಬಿಇಡಿ ವ್ಯಾಸಂಗದಲ್ಲಿ ಬಿಡುವಿಲ್ಲದ ತುಂಬ ಹೊರೆಯಾದ ಕೆಲಸಗಳ ನಡುವೆ ತನ್ನ ಅನುಭವಗಳನ್ನು ಅನುಭಾವಗಳಾಗಿ ಪರಿವರ್ತಿಸಿ, ಮನದ ಕಲ್ಪನೆ ಕರದ ಕಾರ್ಯ ಕವನ ಸಂಕಲನವನ್ನು ರಚಿಸಿದ ಕೀರ್ತಿ ಗುರುಬಸವರಾಜ ಅವರದ್ದು ಎಂದರು.
ಈ ಕವನ ಸಂಕಲನದಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಋಣಾತ್ಮಕ ಪರಿಣಾಮವನ್ನು ಬಹು ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರೊಂದಿಗೆ ಬೆರೆಯುವ ಸಹಜ ಗುಣ. ಅವರ ಮುಂದಿನ ಸಾಹಿತ್ಯ ಅಭಿರುಚಿ ಹೀಗೆ ಮುಂದುವರಿಯಲಿ ಎಂದರು.ಕಸಾಪ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ವಿದ್ಯಾರ್ಥಿಗಳು ಟಿವಿ, ಮೊಬೈಲ್‌ಗಳಲ್ಲಿ ತಲ್ಲಿನರಾಗಿ, ಓದುವ ಬರೆಯುವ ಅಭ್ಯಾಸ ಕಡಿಮೆ ಮಾಡಿರುವ ಇಂದಿನ ದಿನಮಾನಗಳಲ್ಲಿ ಸಾಹಿತ್ಯದ ಕಡೆ ತಮ್ಮ ಒಲವನ್ನು ತೋರಿಸುವ ಮೂಲಕ ಉತ್ತಮ ಕವನ ಸಂಕಲನ ನೀಡಿದ್ದಾರೆ ಎಂದರು.
ಸಾಹಿತಿ ಬಸವರಾಜ ಕರುವಿನ ಪುಸ್ತಕ ಕುರಿತು ಮಾತನಾಡಿ, ಸೃಷ್ಟಿಯ ಸೌಂದರ್ಯವನ್ನು ಹೊಗಳಿದ ರೀತಿ, ಅನಾಥರ ಬಗ್ಗೆ ಇರುವ ಕಳಕಳಿ, ಅಮ್ಮನು ತೋರಿಸುವ ಮಕ್ಕಳ ಮೇಲಿನ ವ್ಯಾಮೋಹ, ಅಕ್ಕರೆ, ಕಾಳಜಿ ಇವುಗಳ ಬಗ್ಗೆ ಬರೆದ ರೀತಿ ಎಂಥವರ ಮನಸ್ಸನ್ನು ಮುಟ್ಟುತ್ತದೆ ಎಂದು ಹೇಳಿದರು.ಲೇಖಕ ಗುರುಬಸವರಾಜ ಶಿವನಗೌಡ್ರು ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ರೀತಿಯ ವಿಶಿಷ್ಟತೆಗಳನ್ನು ನಾವು ಕಾಣಬಹುದು. ಕೆಲವೂಮ್ಮೆ ಹೊಸ ಪ್ರತಿಭೆಗಳಿಗೆ ಸಾಹಿತ್ಯದ ಜಾಡು, ಅಭಿರುಚಿ ಪರಿಚಯಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಜಿ.ಎಂ. ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಸಿ.ಎಂ. ವೀರೇಶ್, ಡಾ. ಎನ್.ಟಿ. ಮರುಳಸಿದ್ದಪ್ಪ, ಕೆ.ಪಿ. ಮೀನಾಕ್ಷಿ, ಮತ್ತಿಹಳ್ಳಿಯ ನಿಂಗನಗೌಡ್ರು ಶಿವನಗೌಡ್ರು, ಭರತ್ ಭೂಷಣ್, ಕರಿಬಸಪ್ಪಮತ್ತಿಹಳ್ಳಿ ಇದ್ದರು.