ಕೊಯ್ಯೂರು ಸರ್ಕಾರಿ ಪ್ರೌಢಶಾಲಾ ವಠಾರದಲ್ಲಿ ಶಿಕ್ಷಣ- ಸಾಹಿತ್ಯ-ಸಂಸ್ಕೃತಿ ಎಂಬ ಆಶಯದೊಂದಿಗೆ ಪ್ರೊ. ಎಸ್. ಪ್ರಭಾಕರ್ ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಸಂಪನ್ನಗೊಂಡಿತು.

ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬೆಳ್ತಂಗಡಿ: ಮನುಷ್ಯನನ್ನು ಶಿಕ್ಷಣ ಬುದ್ದಿವಂತನನ್ನಾಗಿ ಮಾಡಿದರೆ, ಸಾಹಿತ್ಯ ಹೃದಯವಂತನನ್ನಾಗಿ ಮಾಡುತ್ತದೆ ಎಂದು ವಿಶ್ರಾಂತ ಕುಲಪತಿ, ಸಂಶೋಧಕ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.

ಅವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಕೊಯ್ಯೂರು ಸರ್ಕಾರಿ ಪ್ರೌಢಶಾಲಾ ವಠಾರದಲ್ಲಿ ಶಿಕ್ಷಣ- ಸಾಹಿತ್ಯ-ಸಂಸ್ಕೃತಿ ಎಂಬ ಆಶಯದೊಂದಿಗೆ ಪ್ರೊ. ಎಸ್. ಪ್ರಭಾಕರ್ ವೇದಿಕೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಸಾಹಿತ್ಯದ ಮೂಲ ದ್ರವ್ಯ ಭಾಷೆ. ಸಾಹಿತ್ಯ ಭಾಷೆಯ ಅಭಿವ್ಯಕ್ತಿಗೆ ಸಂಬಂಧಪಟ್ಟದ್ದು. ಸಾಹಿತ್ಯವು ಬುದ್ಧಿ ಹಾಗೂ ಹೃದಯಕ್ಕೆ ಸಂಸ್ಕಾರ ಕೊಡುತ್ತದೆ. ಇಂತಹ ವಿಚಾರಗಳ ಬಗ್ಗೆ ಸಾಹಿತ್ಯ ಸಮ್ಮೇಳನಗಳು ಅರಿವು ಹಾಗೂ ತಿಳುವಳಿಕೆಯನ್ನು ನೀಡುವುದರ ಜೊತೆಗೆ ಭಾಷೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಳನ್ನು ಪ್ರೀತಿಸುವ, ವಿಸ್ತರಿಸುವ, ಪೋಷಿಸುವ ಕಾರ್ಯ ಮಾಡುತ್ತವೆ ಎಂದರು. ವೈರುಧ್ಯದ ನಡುವೆ ಶಿಕ್ಷಣ ಇದೆ. ಪೋಷಕರಲ್ಲಿ ಮಾಧ್ಯಮದ ಬಗ್ಗೆ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಸರಕಾರಿ ಶಾಲೆಯಲ್ಲಿರುವ ಸೌಕರ್ಯದಲ್ಲಿ ಖಾಸಗಿ ಶಾಲೆಗಳಿಗೆ ಪೋಷಕರ ಮನಸ್ಸು ಎಳೆಯುತ್ತಿರುವುದು ಅಲ್ಲಿನ ಆಧುನಿಕ ಸೌಕರ್ಯಗಳಿಂದಾಗಿ. ಹೀಗಾಗಿ ನಾವು ಸರಕಾರಿ ಶಾಲೆಗಳನ್ನು ಬಲಿಷ್ಠಗೊಳಿಸಬೇಕು. ಶಿಕ್ಷಣ ಸಚಿವರು ರಾಜ್ಯದಲ್ಲಿ 51,000 ಶಿಕ್ಷಕರ ಹುದ್ದೆ ಖಾಲಿ ಇದೆ ಎನ್ನುತ್ತಾರೆ. ಇದು ಯಾಕೆ ಹೀಗಾಗಿದೆ ಎಂಬುದು ಪ್ರಜ್ಞಾವಂತರೆಲ್ಲರಿಗೂ ಗೊತ್ತು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿ, ತಂತ್ರಜ್ಞಾನ, ಜಾಗತೀಕರಣ, ನಗರೀಕರಣ ಮತ್ತು ಮಾರುಕಟ್ಟೆ ಆಧಾರಿತ ಸಂಸ್ಕೃತಿಯ ಕಾಲದಿಂದಾಗಿ ಹಾಗು ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ನಮ್ಮ ಓದು-ಬರಹದ ಅಭ್ಯಾಸವನ್ನು ಸಂಪೂರ್ಣವಾಗಿ ಬದಲಿಸಿವೆ. ಹೀಗಾಗಿ ಕನ್ನಡ ಸಾಹಿತ್ಯದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಪೋಷಕರು ಇಂಗ್ಲಿಷ್‌ಗೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಕನ್ನಡ ಓದು ಬರಹದ ಅಭ್ಯಾಸ ಶಾಲಾ ಹಂತದಲ್ಲೇ ಕುಂಠಿತವಾಗುತ್ತಿದೆ. ಕನ್ನಡ ಸಾಹಿತ್ಯವನ್ನು ಉತ್ತೇಜಿಸಲು ಸರ್ಕಾರ ಹಾಗೂ ಸಮಾಜದಿಂದ ಯಾವುದೇ ಪ್ರಯತ್ನಗಳು ಆಗುತ್ತಿಲ್ಲ ಎಂದು ವಿಷಾದಿಸಿದರು.ಕನ್ನಡ ಸಾಹಿತ್ಯದ ಭವಿಷ್ಯ ಅಂಧಕಾರದಲ್ಲಿಲ್ಲ. ಆದರೆ ಅದು ಸುರಕ್ಷಿತವಾಗಿಯೂ ಇಲ್ಲ. ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳುವಿಕೆ, ಗುಣಮಟ್ಟದ ಬರವಣಿಗೆ, ಓದುಗರೊಂದಿಗೆ ಸಂವಾದ-ಇವುಗಳ ಮೂಲಕ ಮಾತ್ರ ಸಾಹಿತ್ಯ ಜೀವಂತವಾಗಿರುತ್ತದೆ ಎಂದರು. ಕ.ಸಾ.ಪ. ದ.ಕ.ಜಿ.ಘಟಕ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 450 ಕಾರ್ಯಕ್ರಮಗಳನ್ನು ಸಂಘಟಿಸಿದ್ದೇವೆ. ಮಾತಿನ ವಲಯ, ಒಲವನ್ನು ವಿಸ್ತರಿಸಿದರೆ ಕನ್ನಡ ಮೌನವಾಗಲಾರದು ಎಂಬ ಆಶಯ ವ್ಯಕ್ತಪಡಿಸಿದರು. ಕ.ಸಾ.ಪ. ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ ಪ್ರಾಸ್ತಾವಿಕ ಮಾತನಾಡಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಎ. ಕೃಷ್ಣಪ್ಪ ಪೂಜಾರಿ, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ದಯಾಮಣಿ, ಸಮ್ಮೇಳನ ಸಂಯೋಜನ ಸಮಿತಿ ಗೌರವಾಧ್ಯಕ್ಷ ಧರ್ಣಪ್ಪ ಗೌಡ, ಕಾರ್ಯಾಧ್ಯಕ್ಷರಾದ ಮೋಹನ್ ಗೌಡ, ರಾಧಾಕೃಷ್ಣ ತಚ್ಚಮೆ, ಪ್ರಧಾನ ಸಂಚಾಲಕ ದಾಮೋದರ ಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ, ಸಂಚಾಲಕ ಡಾ. ದಿವ ಕೊಕ್ಕಡ ಇದ್ದರು. ಚಾರುಮುಡಿ ಸಂಚಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯತು. ಪತ್ರಕರ್ತ ಅಚ್ಚು ಮುಂಡಾಜೆ ಸಮ್ಮೇಳನಾಧ್ಯಕ್ಷರ ಪರಿಚಯ ನೀಡಿದರು.

ಸಮಿತಿ ಅಧ್ಯಕ್ಷ ಅಶೋಕ್ ಭಟ್ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ರಾಮಕೃಷ್ಣ ಭಟ್ ವಂದಿಸಿದರು. ಶಿಕ್ಷಕರಾದ ರಾಮಚಂದ್ರ ದೊಡ್ಡಮನಿ ಮತ್ತು ದೀಪ್ತಿ ಹೆಗ್ಡೆ ನಿರ್ವಹಿಸಿದರು.

ಕೊಯ್ಯೂರು ಹಿ.ಪ್ರಾ.ಶಾಲೆಯಿಂದ ಅಮೃತಕೊಯ್ಲು ಸಭಾಂಗಣದವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ಉದ್ಯಮಿ ಮೋಹನ್ ಕುಮಾರ್ ಚಾಲನೆ ನೀಡಿದರು. ರಾಷ್ಟ್ರ, ಪರಿಷತ್ ಹಾಗೂ ಸಮ್ಮೇಳನ ಧ್ವಜಗಳ ಆರೋಹಣ ನೆರವೇರಿತು. ಕಥಾ ಗೋಷ್ಠಿ, ಕವಿ ಗೋಷ್ಠಿ, ಚಾವಡಿ ಚಿಂತನೆ, ಸಾಧಕರಿಗೆ ಸಮ್ಮಾನಗಳು ನಡೆದವು.