(ರಾಜ್ಯಸುದ್ದಿ) ಮಂಗಳೂರಿನಲ್ಲಿ ಲೀಥಿಯಂ ನಿಕ್ಷೇಪ ಪತ್ತೆ

| Published : Jul 27 2024, 12:45 AM IST

(ರಾಜ್ಯಸುದ್ದಿ) ಮಂಗಳೂರಿನಲ್ಲಿ ಲೀಥಿಯಂ ನಿಕ್ಷೇಪ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರದ ಗೋಗಿಯಲ್ಲಿ ಯುರೇನಿಯಂ ಪತ್ತೆಯಾಗಿತ್ತು ಈಗ, ಸುರಪುರದ ಮಂಗಳೂರಿನಲ್ಲಿ ಲೀಥಿಯಂ ನಿಕ್ಷೇಪ

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಮಂಗಳೂರಿನಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಕೇಂದ್ರದ ಸಂಬಂಧಿತ ಇಲಾಖೆಯ ಅಧಿಕಾರಿಗಳು ಈ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆಯಿದೆ ಎಂದು ಡಿಸಿ ಡಾ.ಬಿ.ಸುಶೀಲಾ, ತಮ್ಮನ್ನು ಸಂಪರ್ಕಿಸಿದ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಕರ್ನಾಟಕದ ಮಂಡ್ಯ ಜಿಲ್ಲೆಯ ಮರಳಗಳ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ಪರಮಾಣು ಶಕ್ತಿ ಇಲಾಖೆಯ ಘಟಕವಾದ, ಆಟೋಮಿಕ್‌ ಮಿನರಲ್ಸ್‌ ಡೈರೆಕ್ಟೋರೇಟ್‌ ಫಾರ್‌ ಎಕ್ಸಪ್ಲೋರೇಶನ್‌ ಆ್ಯಂಡ್‌ ರೀಸರ್ಚ್‌ ತಂಡ ಪತ್ತೆ ಮಾಡಿರುವುದಾಗಿ ಭೂವಿಜ್ಞಾನ ರಾಜ್ಯ ಸಚಿವ(ಸ್ವತಂತ್ರ) ಜಿತೇಂದ್ರ ಸಿಂಗ್‌ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ, ಈ ಕುರಿತು ಕುತೂಹಲ ಕೆರಳಿಸಿದೆ.

ಕಡಿಮೆ ಸಾಂದ್ರತೆಯ ಲೀಥಿಯಂ ಲೋಹ ವಿಷಕಾರಿ ಹಾಗೂ ನೀರಿನೊಂದಿಗೆ ಸಹಜವಾಗಿ ಬೆರೆಯುತ್ತದೆ. ಜಾಗತಿಕ ಮಟ್ಟದಲ್ಲಿ ಇದಕ್ಕೆ ಭಾರಿ ಬೇಡಿಕೆಯಿದ್ದು, ಪರಮಾಣು ಕಾರ್ಯಗಳಲ್ಲಿ ಬಳಕೆಯಾಗುತ್ತದೆ ಎನ್ನಲಾಗಿದೆ.

ಈ ಹಿಂದೆ, ಯುರೇನಿಯಂ ನಿಕ್ಷೇಪದಿಂದಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ(ಕೆ) ಪ್ರದೇಶ ದೇಶವ್ಯಾಪಿ ಗಮನ ಸೆಳೆದಿತ್ತು. ಆ ಪ್ರದೇಶದ ಜನರ ಆರೋಗ್ಯದ ಮೇಲಾಗುತ್ತಿದ್ದ ವ್ಯತಿರಿಕ್ತ ಪರಿಣಾಮಗಳಿಂದಾಗಿ ಪ್ರತಿರೋಧದ ಕಾರಣಗಳಿಂದ ಯುರೇನಿಯಂ ಉತ್ಖನನ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಮಂಗಳೂರು ಇದೀಗ ಜಾಗತಿಕ ಮಟ್ಟದಲ್ಲಿ ಗಮನಕ್ಕೆ ಕಾರಣವಾಗಿರುವುದು ಮಹತ್ವದವೆನಿಸಿದೆ.