ಸಾರಾಂಶ
- ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯ, ಫಲಪ್ರದವಾಗದ ಯೋಜನೆ
ಹಮೀದ್ ಕೊಪ್ಪ ಕನ್ನಡಪ್ರಭ ವಾರ್ತೆ, ಕೊಪ್ಪಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಿರುವ ತೊಟ್ಟಿಗಳಲ್ಲಿ ಜಾನುವಾರು ಹಾಗೂ ಪಕ್ಷಿಗಳಿಗಾಗಿ ಅದರ ತುಂಬಾ ನೀರಿರುವಂತೆ ನೋಡಿ ಕೊಳ್ಳಬೇಕಾಗಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ನೀರುಗಂಟಿಗಳ (ವಾಟರ್ ಮ್ಯಾನ್) ನಿರ್ಲಕ್ಷ್ಯದಿಂದಾಗಿ ಅನೇಕ ಗ್ರಾಪಂ ವ್ಯಾಪ್ತಿಗಳಲ್ಲಿ ಜಾನುವಾರುಗಳ ನೀರಿನ ತೊಟ್ಟಿಗಳಲ್ಲಿ ನೀರು ಸಂಗ್ರಹವಾಗುತ್ತಲೇ ಇಲ್ಲ.
ಜಾನುವಾರುಗಳ ನೀರಡಿಕೆ ಹೋಗಲಾಡಿಸಲು ಸರ್ಕಾರ ಪ್ರತಿ ಗ್ರಾಪಂ ವ್ಯಾಪ್ತಿಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸುವ ಯೋಜನೆ ಹಾಗೂ ತಾಪಂ ಉದ್ಯೋಗ ಭದ್ರತೆ ಯೋಜನೆಯಡಿ ಎಲ್ಲಾ ಗ್ರಾಪಂ ವ್ಯಾಪ್ತಿಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿದೆ. ತೊಟ್ಟಿ ನಿರ್ಮಾಣದ ನಂತರ ಆಯಾ ಗ್ರಾಪಂಗಳಿಗೆ ನಿರ್ವಹಣೆ ಹೊಣೆ ನೀಡಲಾಗಿದೆ.ಆದರೆ ಈ ತೊಟ್ಟಿಗಳಲ್ಲಿ ನೀರಿಲ್ಲದೆ ಒಣಗಿ ಬರೀ ಕಸಕಡ್ಡಿಗಳೇ ತುಂಬಿ ಕಸದ ತೊಟ್ಟಿಗಳಾಗಿ ಮಾರ್ಪಾಡಾಗುತ್ತಿದೆ. ತೊಟ್ಟಿ ನಿರ್ಮಾಣಕ್ಕೆ ವ್ಯಯಿಸಿದ ಜನರ ತೆರಿಗೆ ಹಣ ಪಂಚಾಯಿತಿ ಹೊಣೆಗೇಡಿತನದಿಂದಾಗಿ ವ್ಯರ್ಥವಾಗುತ್ತಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು, ನೀರುಗಂಟಿಗಳು, ನಿದ್ದೆಯಿಂದ ಎಚ್ಚೆತ್ತು ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ ದುರಸ್ತಿಗೊಳಿಸಿ ಬಿಸಿಲಿನ ತಾಪಕ್ಕೆ ಬಾಯಾರಿ ನೀರು ಕುಡಿಯಲು ಬರುವ ಜಾನುವಾರು ಹಾಗೂ ಪಕ್ಷಿಗಳಿಗೆ ಅನುಕೂಲ ವಾಗುವಂತೆ ದಿನನಿತ್ಯ ತೊಟ್ಟಿಯಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು.
ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ತಾಲೂಕು ಆಡಳಿತ ಹಾಗೂ ಗ್ರಾಪಂಗಳಿಗೆ ತಮ್ಮ ವ್ಯಾಪ್ತಿಯ ಜಾನುವಾರು ಕುಡಿಯುವ ನೀರಿನ ತೊಟ್ಟಿಗಳನ್ನು ದುರಸ್ತಿಗೊಳಿಸಿ ನೀರು ಸಂಗ್ರಹಿಸುವಂತೆ ಎಚ್ಚರಿಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲುಮಕ್ಕಿಯಲ್ಲಿಯ ನೀರಿನ ತೊಟ್ಟಿ ಮತ್ತು ನೀರು ಸಂಗ್ರಹಣೆಯ ಟ್ಯಾಂಕ್ ಎರಡೂ ದುರಸ್ತಿ ಗೊಳ್ಳದೆ ನಿರುಪಯುಕ್ತವಾಗಿದೆ. ತಾಲೂಕಿನ ವಿವಿಧೆಡೆ ಇಂತಹ ಅನೇಕ ತೊಟ್ಟಿಗಳು ನೀರು ಸಂಗ್ರಹವಾಗದೆ ಕಸದ ತೊಟ್ಟಿ ಗಳಾಗಿ ಮಾರ್ಪಾಡಾಗಿದೆ.