ಸಾರಾಂಶ
ವಿಶ್ವ ಬಂಧುತ್ವದ ಆದರ್ಶ ಮಾನವೀಯ ಮೌಲ್ಯ ತೋರಿಸಿದ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ.
ಕುಷ್ಟಗಿ:
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಜಗದ್ಗುರು ರೇಣುಕಾಚಾರ್ಯರ ಸಂದೇಶದಂತೆ ಎಲ್ಲರು ಒಗ್ಗೂಡಿ ಸಾಮರಸ್ಯದಿಂದ ಬದುಕು ಸಾಗಿಸಬೇಕು ಎಂದು ಕೇಸೂರು ಹಿರೇಮಠದ ಚಂದ್ರಶೇಖರ ದೇವರು ಅಭಿಪ್ರಾಯಪಟ್ಟರು.ತಾಲೂಕಿನ ಕೇಸೂರು ಗ್ರಾಮದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಲಿಂ. ಚಂದ್ರಶೇಖರ ಶಿವಾಚಾರ್ಯರ 30ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಬಂಧುತ್ವದ ಆದರ್ಶ ಮಾನವೀಯ ಮೌಲ್ಯ ತೋರಿಸಿದ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.
ಅಂತರಂಗ, ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟ ರೇಣುಕಾಚಾರ್ಯರು ಧರ್ಮದ ದಶ ಗಾತ್ರಗಳನ್ನು ಶೋಧಿಸಿ ಭಕ್ತರನ್ನು ಉದ್ಧರಿಸಿದರು. ಮಹಾಜ್ಞಾನಿ ಅಗಸ್ತ್ಯ ಮಹರ್ಷಿಗಳಿಗೆ ಶಿವಾದ್ವೈತ ತತ್ವ ಸಿದ್ಧಾಂತ ಬೋಧಿಸಿ ಹರಸಿದವರು. ಧಾರ್ಮಿಕ ಕ್ರಾಂತಿಯ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಅಸ್ಪೃಶ್ಯರ ಉದ್ಧಾರ ಮತ್ತು ಮಹಿಳೆಯರಿಗೆ ಧಾರ್ಮಿಕ ಆಚರಣೆ ಕೊಟ್ಟು ಹರಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.ಅದ್ಧೂರಿ ಮೆರವಣಿಗೆ:
ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಚಂದ್ರಶೇಖರ ಶಿವಾಚಾರ್ಯರ 30ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ದೋಟಿಹಾಳ ಹಾಗೂ ಕೇಸೂರಿನಲ್ಲಿ ಅವರ ಭಾವಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನೂರಾರು ಮಹಿಳೆಯರು ಕುಂಭ ಹಾಗೂ ಕಳಸ ಹಿಡಿಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮಾರ್ಗ ಮಧ್ಯೆ ಪಾನಕ, ಮಜ್ಜಿಗೆ, ಶರಬತ್ ವಿತರಿಸಲಾಯಿತು.ಈ ವೇಳೆ ವೀರಬಸವ ದೇವರು, ಶಿವಪ್ರಸಾದ ದೇವರು, ಪ್ರವಚನಕಾರ ಕಮತಗಿ ಗಣೇಶ ಶಾಸ್ತ್ರೀ, ಕಡಕಲಾಟ ಘನಲಿಂಗ ದೇವರು, ಗುರುದೇವ ದೇವರು, ಚಿದಾನಂದಯ್ಯ ಹಿರೇಮಠ, ಬಸವರಾಜ ಹೊನ್ನಿಗನೂರು ಸೇರಿದಂತೆ ವಿವಿಧ ಮಠದ ಸ್ವಾಮೀಜಿ, ಗ್ರಾಮಸ್ಥರು, ಮಹಿಳೆಯರು ಇದ್ದರು.