ಯಾವ ರಾಜ್ಯದಿಂದ ಬೇಕಾದರೂ ಬೆಂಗಳೂರಿಗೆ ಜನರು ಬರಲಿ, ವಾಸವಿರಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು. ಇಲ್ಲಿ ಕನ್ನಡತನ ಬೆಳೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಾವ ರಾಜ್ಯದಿಂದ ಬೇಕಾದರೂ ಬೆಂಗಳೂರಿಗೆ ಜನರು ಬರಲಿ, ವಾಸವಿರಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು. ಇಲ್ಲಿ ಕನ್ನಡತನ ಬೆಳೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೈಗಾರಿಕಾ ವಲಯಗಳು ಹಾಗೂ ಅನ್‌ಬಾಕ್ಸಿಂಗ್ ಬಿಎಲ್‌ಆರ್(ಬೆಂಗಳೂರು) ಹಾಗೂ ವಿವಿಧ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ 10 ದಿನಗಳ ‘ಬೆಂಗಳೂರು ಹಬ್ಬ-2026’ ಅನ್ನು ಶುಕ್ರವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ರಾಜ್ಯ ಭಾಷೆಯಾಗಿದೆ. ಎಲ್ಲರೂ ಕನ್ನಡ ಕಲಿಯಬೇಕು. ವ್ಯವಹಾರ ಭಾಷೆಯಾಗಿ ಬಳಸಲೇಬೇಕು. ಇಲ್ಲಿ ಕನ್ನಡದ ವಾತಾವರಣ ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಎಂದರು.
ಬೆಂಗಳೂರು ಹಬ್ಬವು ನಗರದ 30ಕ್ಕೂ ಹೆಚ್ಚು ಕಡೆ ನಡೆಯುತ್ತದೆ. 250ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ. ಈ ಹಬ್ಬದ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಅನ್ಯ ರಾಜ್ಯದವರಿಗೆ ಹಾಗೂ ಯುವ ಜನತೆಗೆ ತಲುಪಿಸುವ ಉದ್ದೇಶವಿದೆ. ಎಲ್ಲರೂ ಒಂದು ಎನ್ನುವ ಭಾವನೆ ಮೂಡಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.ಎಲ್ಲಾ ಊರುಗಳಲ್ಲಿ ಹಬ್ಬ ಮಾಡುತ್ತೇವೆ. ಎಲ್ಲರೂ ಸಂತೋಷ ಪಡಲಿ ಎನ್ನುವುದು ಉದ್ದೇಶ. ಜಾತಿ, ಧರ್ಮ ಮರೆತು, ಮನುಷ್ಯರಾಗಿರುವುದು ಬಹಳ ಮುಖ್ಯ. ನಾವು ಮನುಷ್ಯರನ್ನು ಪ್ರೀತಿಸಬೇಕು. ಯಾವುದೇ ಧರ್ಮ ಜನರನ್ನು ದ್ವೇಷಿಸಿ ಎನ್ನುವುದಿಲ್ಲ. ಪ್ರೀತಿಸಿ ಎನ್ನುತ್ತದೆ. ನಾಡಿನಲ್ಲಿ ಜನಿಸಿದ ಮಹನೀಯರು ಕೂಡ ಭಾವೈಕ್ಯತೆಯಿಂದ ಬದುಕಬೇಕು ಎನ್ನುವ ಸಂದೇಶ ನೀಡಿದರು ಎಂದು ಮುಖ್ಯಮಂತ್ರಿ ತಿಳಿಸಿದರು.
ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ? ಏನು ಸಾಧಿಸಿದೆವು? ಸಮಾಜಕ್ಕೆ ಏನು ಕೊಟ್ಟೆವು? ಎನ್ನುವುದು ಮುಖ್ಯ. ಬೇರೆಯವರು ನಮ್ಮನ್ನು ಅನುಸರಿಸುವಂತಿರಬೇಕು. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮರೆಯಬಾರದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು ಎನ್ನುವ ಸಂದೇಶವನ್ನು ಸಂವಿಧಾನ ನೀಡಿದೆ ಎಂದು ಅವರು ಹೇಳಿದರು.ಮಣ್ಣಿನ ಸಂಸ್ಕೃತಿ ಮಾಯ:
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬೆಂಗಳೂರಲ್ಲಿ ಹಬ್ಬಗಳೇ ಇರುವುದಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ. ಈ ಮೂಲಕ ಈ ನಾಡಿನ, ಮಣ್ಣಿನ ಸಂಸ್ಕೃತಿಯು ಮರೆಯಾಗುತ್ತಿದೆ. ಕನ್ನಡಿಗರಿಗಿಂತ ಅನ್ಯ ರಾಜ್ಯದವರೇ ಹೆಚ್ಚು ಇದ್ದಾರೆ. ಪಂಚಮಿ ಹಬ್ಬಕ್ಕೆ ಹಗ್ಗ ಕಟ್ಟಿ ಜೋಕಾಲಿ ಆಡುತ್ತಿದ್ದರು. ಈಗಿನ ಮಕ್ಕಳಿಗೆ ಅದನ್ನು ಜಾಲತಾಣದಲ್ಲಿ ನೋಡಿ ತಿಳಿಯುವಂತಹ ಪರಿಸ್ಥಿತಿ ಎಂದರು.ನಟ ಶಿವರಾಜ್ ಕುಮಾರ್ ಮಾತನಾಡಿ, ಅತ್ಯಂತ ಸಡಗರ, ಸಂಭ್ರಮದಿಂದ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡುತ್ತಿರುವುದು ಖುಷಿ ತಂದಿದೆ. ಬೆಂಗಳೂರು ಹಬ್ಬ ಯಶಸ್ವಿಯಾಗಲಿ ಎಂದು ಹೇಳಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ನಟಿ ಜಯಮಾಲಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.ಮೆರವಣಿಗೆ-ಸಾಂಸ್ಕೃತಿಕ ಕಾರ್ಯಕ್ರಮತಾಯಿ ಭುವನೇಶ್ವರಿ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರತಿಮೆ, ಸಾಹಿತಿಗಳು, ಚಿತ್ರನಟರ ಭಾವಚಿತ್ರಗಳೊಂದಿಗೆ ಹೂವಿನಿಂದ ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಯಿತು. ಯಕ್ಷಗಾನ, ಭರತನಾಟ್ಯ, ಡೊಳ್ಳು ಕುಣಿತ, ಹುಲಿ ವೇಷಧಾರಿಗಳು, ಪೂಜಾ ಕುಣಿತ, ವೀರಗಾಸೆ ಸೇರಿದಂತೆ ಜಾನಪದ ಕಲಾತಂಡಗಳು ರಾಜಧಾನಿಯ ಹೃದಯ ಭಾಗದ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಮೆರವಣಿಗೆಯಲ್ಲಿ ನಮ್ಮ ನಾಡಿ, ಕಲೆ,ಸಾಹಿತ್ಯ, ಸ್ತಬ್ಧಚಿತ್ರಗಳು, ಸಂಸ್ಕೃತಿಯ ಭವ್ಯ ಪರಂಪರೆ ಅನಾವರಣಗೊಂಡಿತು. ಮಹಿಳೆಯ ಪೂರ್ಣಕುಂಭ, ಸಾಂಪ್ರದಾಯಿಕ ಉಡುಗೆ ತೊಟ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೆರವಣಿಗೆಯ ಮೆರಗು ಹೆಚ್ಚಿಸಿದರು.
ಹತ್ತು ದಿನಗಳ ಬೆಂಗಳೂರು ಹಬ್ಬರಾಜ್ಯ ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ, ಕಲೆ, ನಾಗರಿಕತೆ ಹಾಗೂ ನಾವೀನ್ಯತೆ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೈಗಾರಿಕಾ ವಲಯಗಳು ಹಾಗೂ ಅನ್‌ಬಾಕ್ಸಿಂಗ್ ಬಿಎಲ್‌ಆರ್(ಬೆಂಗಳೂರು) ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಸೇರಿ ಹಮ್ಮಿಕೊಂಡಿರುವ ಮೂರನೇ ಆವೃತ್ತಿಯ ‘ಬೆಂಗಳೂರು ಹಬ್ಬ-2026’ ಜನವರಿ 25ರವರೆಗೆ ಹಮ್ಮಿಕೊಂಡಿದೆ.ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್, ಸಭಾ, ಪ್ರೆಸ್ಟೀಜ್ ಫಾರ್ ಪರ್ಫಾಮಿಂಗ್ ಆರ್ಟ್ಸ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಪಂಚವಟಿ, ಅಲೈಯನ್ಸ್ ಫ್ರಾಂಚೈಸ್, ಯುವಕ ಸಂಘ, ಎಡಿಎ ರಂಗ ಮಂದಿರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವಲ್ಡ್‌ರ್ ಕಲ್ಚರ್, ರವೀಂದ್ರ ಕಲಾಕ್ಷೇತ್ರ, ಇಂಡಿಯನ್ ಹೆರಿಟೇಜ್ ಅಕಾಡೆಮಿ ಸೇರಿ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.