ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಎಲ್ಲಿ ಸಂಕಷ್ಟ, ಸಮಸ್ಯೆ, ಲೋಪಗಳಿವೆಯೋ ಅಲ್ಲಿ ಹಿಂದೂ ಸಮಾಜ ತೆರಳಿ ಕಾರ್ಯಪ್ರವೃತ್ತವಾಗಬೇಕು. ಅದು ಜೀವನದ ಧನ್ಯತೆಯೂ ಹೌದು. ಸೇವೆ, ತ್ಯಾಗದ ಮೂಲಕ ಸಮಾಜಕ್ಕಾಗಿ ಬದುಕಬೇಕು ಎನ್ನುವುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಮಗೆಲ್ಲಾ ತಿಳಿಸಿಕೊಟ್ಟಿದೆ ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ತದ್ಮ ಎಂಬಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ನಿಕಟಪೂರ್ವ ಅಧ್ಯಕ್ಷ, ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಬಡ ಮಹಿಳೆ ದೇವಕಿ ಮುಗೇರ ಅವರಿಗೆ ಗ್ರಾಮವಿಕಾಸ ಸಮಿತಿ ಪಜೀರು, ಸಂಘ ಶತಾಬ್ದಿ ನಿಮಿತ್ತ ಸೇವಾ ಬಸ್ತಿಯಲ್ಲಿ ನಿರ್ಮಾಣಗೊಂಡ ‘ನಮೋ ಕುಟೀರ’ ಎಂಬ ಸುಸಜ್ಜಿತ ನೂತನ ಮನೆಯ ಕೀಲಿ ಕೈಯನ್ನು ಸೋಮವಾರ ಹಸ್ತಾಂತರ ಮಾಡಿ ಮಾತನಾಡಿದರು.
ಸಮಾಜಕ್ಕೋಸ್ಕರ ಬದುಕಿದವರನ್ನ ಸಮಾಜವೇ ಗುರುತಿಸುತ್ತದೆ. ಅಶಕ್ತನಿಗೊಂದು ಮನೆ ಕಟ್ಟಿಕೊಡುವ ಹೃದಯ ವೈಶಾಲ್ಯತೆ ಹಿಂದೂ ಸಮಾಜದಲ್ಲಿಬೇಕು. ಹಿಂದೂ ಸಮಾಜವು ಜಗತ್ತಿಗೇ ಒಲಿತನ್ನು ಮಾಡಿದೆ, ನಮ್ಮವರಿಗೆ ಕೆಡುಕನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ವಿಭಿನ್ನ ಸಂಸ್ಕೃತಿಯ ನಮ್ಮ ದೇಶ ನೆಲೆನಿಂತಿರುವುದು ಧರ್ಮದ ಆಧಾರದಲ್ಲಿ. ತ್ಯಾಗ ಸೇವೆಯೇ ಇಲ್ಲಿಯ ಮೂಲವಾಗಿದೆ. ಭಾರತದ ಈ ನೆಲದಲ್ಲಿ ಹಿಂದೂ ಆಗಿ ಹುಟ್ಟಿರುವುದು ಪುಣ್ಯದ ಫಲ. ಆದ್ದರಿಂದ ಸಮಾಜದ ಸಂಕಷ್ಟಕ್ಕೆ ಜತೆಯಾಗಿ ಸ್ಪಂದಿಸೋಣ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಪ್ರಾಂತ್ಯವಾಹಕರಾದ ಪ್ರಕಾಶ್ ಪಿ.ಎಸ್. ಮಾತನಾಡಿ, ಮನೆ ಎಂಬುದು ಕೇವಲ ಕಲ್ಲಿನ ಕಟ್ಟಡ ಮಾತ್ರವಲ್ಲ, ನಮ್ಮಲ್ಲಿ ಉತ್ತಮತೆಯನ್ನು ರೂಪಿಸುವ ಆಲಯವೂ ಹೌದು. ಮನೆಯು ಮಕ್ಕಳಿಗೆ ಸಂಸ್ಕಾರವನ್ನು ನೀಡುವ ವಿದ್ಯಾಲಯಬೇಕು, ಭಕ್ತಿಯಿಂದ ದೇವರನ್ನು ಆರಾಧಿಸುವ ದೇವಾಲಯವಾಗಬೇಕು ಎಂದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವನ್ನು ಮೈಗೂಡಿಸಿಕೊಂಡು, ಸಾಮಾಜಿಕ ಚಿಂತನೆಯೊಂದಿಗೆ ಸಂತೋಷ್ ಕುಮಾರ್ ಬೋಳಿಯಾರ್ ಅವರು ಸಮಾಜದ ಸೇವೆ ಮಾಡಿದ್ದಾರೆ. ಇದು ಎಲ್ಲರಿಗೂ ಸ್ಪೂರ್ತಿಯಾಗಿದ್ದು ಇನ್ನಷ್ಟು ಸೇವೆಯಲ್ಲಿ ಅವರು ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.ಶಾಸಕರಾದ ವೇದವ್ಯಾಸ ಕಾಮತ್ , ಮುಗೇರ ಸಂಘದ ರಾಜ್ಯ ಅಧ್ಯಕ್ಷ ನಂದರಾಜ್ ಸಂಕೇಶ್ವರ ಮಾತನಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ರಾಜಾರಾಂ ಭಟ್, ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರು ಪುತ್ತೂರು, ನಾರ್ಯಗುತ್ತುವಿನ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಮುಗೇರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಂದರ, ಮುಗೇರ ಸಂಘದ ಉಳ್ಳಾಲ ತಾಲೂಕು ಅಧ್ಯಕ್ಷ ನಾಗೇಶ್ ಉಳ್ಳಾಲ್, ಹಿರಿಯರಾದ ಸೇಸಪ್ಪ ಟೈಲರ್, ಮಂಗಳೂರು ತಾಲೂಕು ಮುಗೇರ ಸಂಘದ ಅಧ್ಯಕ್ಷರಾದ ಸೀತಾರಾಮ ಕೊಂಚಾಡಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.ಮನೆಯ ಗುತ್ತಿಗೆದಾರರಾದ ಜಯಂತ್ ಶೆಟ್ಟಿ ಕಂಬಳಪದವು ಅವರನ್ನು ಗೌರವಿಸಲಾಯಿತು.ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ರೈ ಪಜೀರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.