ಭಯಭೀತ ಬದುಕು; ಒಳಮೀಸಲಿಗೆ ಮಲೆಕುಡಿಯರ ಆಗ್ರಹ

| Published : Nov 25 2024, 01:03 AM IST

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಒಟ್ಟು 468 ಕುಟುಂಬಗಳ ಪೈಕಿ ಕೇವಲ 6 ಮಂದಿ ಸರ್ಕಾರಿ ನೌಕರಾಗಿದ್ದಾರೆ. ಆದರೆ ಅರಣ್ಯ ಇಲಾಖೆಯೊಂದು ಬಿಟ್ಟರೆ ಯಾವುದೇ ಇಲಾಖೆಯಲ್ಲಿ ಮೀಸಲಾತಿ‌ ಸಿಗುತ್ತಿಲ್ಲ. ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ಜಾರಿಯಾಗಬೇಕು ಎನ್ನುತ್ತಾರೆ ಮಲೆಕುಡಿಯ ಸಂಘ ಜಿಲ್ಲಾಧ್ಯಕ್ಷ ಗಂಗಾಧರ ಮಲೆಕುಡಿಯ.

ನಕ್ಸಲ್, ಎ‌ಎನ್‌ಎಫ್ ಕಾರ್ಯಾಚರಣೆ ಹಿನ್ನೆಲೆ । ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಭೇಟಿ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ, ಹೆಬ್ರಿ ಭಾಗದ ಕಾಡಂಚಿನ ಮಲೆಕುಡಿಯ ಕುಟುಂಬಗಳು ಅತ್ತ ನಕ್ಸಲ್ ಹಾಗೂ ಇತ್ತ ಎ‌ಎನ್‌ಎಫ್ ಕಾರ್ಯಾಚರಣೆಗಳ ಮೂಲಕ ಮತ್ತೆ ಭಯಭೀತ ಜೀವನ ನಡೆಸುವಂತಾಗಿದೆ. ಪೀತಬೈಲ್‌ನಲ್ಲಿ ಜಯಂತ ಗೌಡರ ಮನೆಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಯಾದ ಬಳಿಕ ಮಲೆಕುಡಿಯ ಕುಟುಂಬಗಳಲ್ಲಿ ಮತ್ತಷ್ಟು ಭಯ ಹೆಚ್ಚಿಸುವಂತೆ ಮಾಡಿದೆ.

ನಕ್ಸಲ್ ವಿಕ್ರಮ್ ಗೌಡ ಕೂಡ ಇದೇ ಮಲೆಕುಡಿಯ ಕುಟುಂಬಕ್ಕೆ ಸೇರಿದ್ದ. ಉಡುಪಿ ಜಿಲ್ಲೆಯಲ್ಲಿ 468 ಮಲೆಕುಡಿಯ ಕುಟುಂಬಗಳಿವೆ. ಅದರಲ್ಲೂ ಹೆಬ್ರಿ ತಾಲೂಕಿನಲ್ಲಿ ಹೆಚ್ಚಿನ ಮಲೆಕುಡಿಯ ಕುಟುಂಬಗಳು ವಾಸಿಸುತ್ತಿವೆ. ಸುಮಾರು 100ಕ್ಕೂ ಹೆಚ್ಚು ಮನೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. 70ಕ್ಕೂ ಹೆಚ್ಚಿನ ‌ಮನೆಗಳಲ್ಲಿ ವಿದ್ಯುತ್ ಹಾಗೂ ರಸ್ತೆಗಳೇ ಇಲ್ಲವಾಗಿದೆ. ಕಷ್ಟ ಜೀವನ ಸಾಗಿಸುತ್ತಿರುವ ಮಲೆಕುಡಿಯ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿದರೆ ಗುಣಮಟ್ಟದ ಬದುಕು ಸಾಧಿಸಲು ಸಾಧ್ಯವಿದೆ.

ಗ್ರಾಮವಾರು ಸಂಖ್ಯೆ:

ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮ ವ್ಯಾಪ್ತಿಯ ಮುಂಡಾಣಿ, ಖಜಾನೆ, ಬಲ್ಲಾಡಿ ವ್ಯಾಪ್ತಿ ಸೇರಿದಂತೆ ಒಟ್ಟು 31 ಮಲೆಕುಡಿಯ ಕುಟುಂಬಗಳಿವೆ. ನಾಡ್ಪಾಲು ಗ್ರಾಮ ವ್ಯಾಪ್ತಿಯ ಅಜ್ಜೊಳ್ಳಿಯಲ್ಲಿ 7, ವಣಜಾರು 7, ಕೂಡ್ಲು 7, ಪೀತಬೈಲ್ 3, ತೆಂಗುಮಾರ್ 1, ತಿಂಗಳಮಕ್ಕಿ 2, ಕೊರ್ತಬೈಲು 1, ಮೆಗದ್ದೆ 1 ಸೇರಿದಂತೆ ಒಟ್ಟು 31 ಮನೆಗಳು, ವರಂಗ ಗ್ರಾಮ ವ್ಯಾಪ್ತಿಯಲ್ಲಿ 2 ಅಂಡಾರು ಗ್ರಾಮ ಪಂಚಾಯತಿಯ ಮೊರಂಟೆಬೈಲು 3 ಸೇರಿದಂತೆ ಒಟ್ಟು 39 ಮನೆಗಳಿವೆ.

ಈ ಮಲೆಕುಡಿಯ ಕುಟುಂಬಗಳು ಕಾಡುತ್ಪತ್ತಿ ಹಾಗೂ ಕೂಲಿ ಕೆಲಸವನ್ನು ನೆಚ್ಚಿಕೊಂಡಿದ್ದು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಈಗಲೂ ಸರಿಯಾದ ರಸ್ತೆ ಸಂಪರ್ಕವಿಲ್ಲದೇ ಇರುವುದರಿಂದ ಈ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತವಾಗಿದ್ದಾರೆ.

ಮೀಸಲಾತಿ ಕಲ್ಪಿಸಲು ಆಗ್ರಹ:

ಉಡುಪಿ ಜಿಲ್ಲೆಯಲ್ಲಿ ಒಟ್ಟು 468 ಕುಟುಂಬಗಳ ಪೈಕಿ ಕೇವಲ 6 ಮಂದಿ ಸರ್ಕಾರಿ ನೌಕರಾಗಿದ್ದಾರೆ. ಆದರೆ ಅರಣ್ಯ ಇಲಾಖೆಯೊಂದು ಬಿಟ್ಟರೆ ಯಾವುದೇ ಇಲಾಖೆಯಲ್ಲಿ ಮೀಸಲಾತಿ‌ ಸಿಗುತ್ತಿಲ್ಲ. ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ಜಾರಿಯಾಗಬೇಕು. ಅರಣ್ಯ ಇಲಾಖಾ ಮಾದರಿಯಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಸ್ಥಳೀಯ ಬುಡಕಟ್ಟು ಮೀಸಲಾತಿ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ವಿಸ್ತರಣೆಬೇಕು. ಈ ಮೀಸಲಾತಿ ನೀಡಿದರೆ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯವಿದೆ ಎನ್ನುತ್ತಾರೆ ಮಲೆಕುಡಿಯ ಸಂಘ ಜಿಲ್ಲಾಧ್ಯಕ್ಷ ಗಂಗಾಧರ ಮಲೆಕುಡಿಯ.

ಮುಂದುವರಿದ ಕೂಂಬಿಂಗ್:

ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌ ನಡೆದ ಬಳಿಕ ಪೀತಬೈಲ್, ನಾಡ್ಪಾಲು ಪರಿಸರದಲ್ಲಿ ಎಎನ್‌ಎಫ್ ಪಡೆ ಮತ್ತೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದೆ.

ಸಮಿತಿಯ ಭೇಟಿ:

ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯ ವಕೀಲ ಶ್ರೀಪಾಲ ಕೆ.ಪಿ. ಮತ್ತು ಪಾರ್ವತೇಶ್ ಬಿಳಿದಾಳೆ ನೇತೃತ್ವದ ತಂಡ ಶನಿವಾರ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತಬೈಲ್ ಪ್ರದೇಶಕ್ಕೆ ಭೇಟಿ ನೀಡಿತು.

ಸುಧಾಕರ ಗೌಡ, ಜಯಂತ ಗೌಡ, ನಾರಾಯಣ ಗೌಡ ಕುಟುಂಬಗಳ ಜೊತೆ ಮಾತನಾಡಿದ ಸದಸ್ಯರು, ನಕ್ಸಲರು ಮುಖ್ಯ ವಾಹಿನಿಗೆ ಬಂದಲ್ಲಿ ಸರ್ಕಾರದ ಶರಣಾಗತಿ ಹಾಗೂ ಪುನರ್ವಸತಿ ಒದಗಿಸಲು ಸಿದ್ಧ. ನಕ್ಸಲರು ಶರಣಾಗತಿ ಬಯಸಿದರೆ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರಾದ ನಮ್ಮನ್ನು ಸಂಪರ್ಕಿಸಬಹುದು ಎಂದು ಶ್ರೀಪಾಲ ಕೆ.ಪಿ. ತಿಳಿಸಿದರು.

ಪಾರ್ವತೇಶ್ ಬಿಳಿದಾಳೆ ಮಾತನಾಡಿ, ಸರ್ಕಾರ ಶೀಘ್ರದಲ್ಲಿ ಆದಿವಾಸಿಗಳ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯಲ್ಲಿ ಮಹತ್ತರವಾದ ಚರ್ಚೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಬೇಕು. ನ್ಯಾಯಾಂಗ ತನಿಖೆ ಬಗ್ಗೆ ಸರ್ಕಾರ ಶೀಘ್ರ ನಿರ್ಧರಿಸಲಿ. ಎನ್‌ ಕೌಂಟರ್‌ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡಗಳು ಕೇಳಿ ಬರುತ್ತಿದ್ದು, ಸರ್ಕಾರ ಅತಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕೆಂದು ಶ್ರೀಪಾಲ ಕೆ.ಪಿ. ಸರ್ಕಾರವನ್ನು ಆಗ್ರಹಿಸಿದರು.

........................

ವಿಕ್ರಂ ಗೌಡ ಪ್ರಜಾಪ್ರಭುತ್ವದ ವಿರುದ್ಧ ಬಂದೂಕು ಹಿಡಿದದ್ದು ತಪ್ಪು. ಆದರೆ ಸರ್ಕಾರ ನಮಗೆ ಮೂಲಸೌಕರ್ಯಗಳನ್ನು ಒದಗಿಸಲಿ. ಮನೆಗೊಂದು ರಸ್ತೆ ಇದ್ದರೆ ಸಾಕು, ನಮ್ಮನ್ನು ಮುಖ್ಯವಾಹಿನಿಗೆ ತರಲಿ.

। ಮಹೇಶ್ ಕೂಡ್ಲು

------------------

ಸರ್ಕಾರವು ನಕ್ಸಲ್ ಪೀಡಿತ ಪ್ರದೇಶಗಳಿಗೆ ನಕ್ಸಲ್ ಪ್ಯಾಕೇಜ್ ತರಲಿ, ಜೊತೆಗೆ ಮಲೆಕುಡಿಯರ ಶ್ರೇಯೋಭಿವೃದ್ಧಿಗೆ ಯೋಜನೆ ರೂಪಿಸಲಿ, ಮೀಸಲಾತಿಯು ಕಲ್ಪಿಸಲಿ.

। ಗಂಗಾಧರ ಗೌಡ ಈದು, ಮಲೆಕುಡಿಯ ಜಿಲ್ಲಾಧ್ಯಕ್ಷ