ಸಾರಾಂಶ
ಚಾಮನಳ್ಳಿ ಗ್ರಾಮದಲ್ಲಿ ಕಂದಾಯ ಗ್ರಾಮಸಭೆ ಆಯೋಜನೆಕನ್ನಡಪ್ರಭ ವಾರ್ತೆ ಯಾದಗಿರಿ
ತಾಂಡಾದ ನಿವಾಸಿಗಳು ಪರಿಶ್ರಮ ಜೀವಿಗಳು, ಯಾವುದೇ ಕಾರಣಕ್ಕೂ ಸಣ್ಣ-ಪುಟ್ಟ ಕಾರಣಗಳಿಗೆ ಮನಸ್ತಾಪ ಮಾಡಿಕೊಳ್ಳದೇ ಶಾಂತಿ, ಸಾಮರಸ್ಯದಿಂದ ಬಾಳಬೇಕು ಎಂದು ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್ ಹೇಳಿದರು.ತಾಲೂಕಿನ ಚಾಮನಳ್ಳಿ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಅತೀ ಹೆಚ್ಚು ಜನ ವಸತಿ ಇರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ. ಅದರಂತೆ ಈ ತಾಂಡಾಕ್ಕೆ ಮೊದಲು ಇಲ್ಲಿನ ಜನರ ಅಭಿಪ್ರಾಯ ಹಾಗೂ ಬೆಂಬಲದ ಮೇಲೆ ಭವಾನಿನಗರ ಎಂದು ಹೆಸರಿಡಲು ಗ್ರಾಮಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಕೆಲ ದಿನಗಳ ನಂತರ ಇಲ್ಲಿನ ನಿವಾಸಿಗಳ ಇನ್ನೊಬ್ಬ ನಾಯಕರ ಗುಂಪು ಯಾರಿಗೂ ಮಾಹಿತಿ ನೀಡದೆ ಗ್ರಾಮಸಭೆ ನಡೆಸಿ ಪರಶುರಾಮ ನಗರ ಎಂಬ ಪ್ರಸ್ತಾವನೆ ಮಂಡಿಸಿ, ಜಿಲ್ಲಾಡಳಿತಕ್ಕೆ ವರದಿ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾಂಡಾದ ಎಲ್ಲಾ ಜನರು ಮತ್ತೊಮ್ಮೆ ಚರ್ಚಿಸಿ ಭವಾನಿ ನಗರ ಹಾಗೂ ಪರಶುರಾಮ ನಗರ ಹೆಸರು ಬೇಡ, ಎಲ್ಲರೂ ಕೂಡಿ, ಇನ್ನೊಂದು ಹೆಸರು ಮರಿಯಮ್ಮ ನಗರ ಎಂದು ಹೆಸರಿಡೋಣ ಎಂದು ತೀರ್ಮಾನಿಸಿದರು ಎಂದರು.
ನಂತರ ಗ್ರಾಮಸಭೆ ನಿಗದಿಪಡಿಸಿದ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ತಾಂಡಾಕ್ಕೆ ಆಗಮಿಸಿ, ಎಲ್ಲಾ ಜನರ ಅಭಿಪ್ರಾಯ ಸಂಗ್ರಹಿಸಿ ಮರಿಯಮ್ಮ ನಗರ ಎಂಬ ಹೆಸರಿಡುವ ಪ್ರಸ್ತಾವನೆಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.ಬಳಿಕ ತಾಂಡಾದ ಅರ್ಜುನ ಚೌಹಾಣ್ ಎಂಬುವರು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ಪರಿಣಾಮ ಇಂದು ಮತ್ತೊಮ್ಮೆ ಗ್ರಾಮಸಭೆ ನಡೆಸಲಾಗುತ್ತಿದೆ ಎಂದು ಹಿಂದೆ ನಡೆದಿರುವ ಎಲ್ಲಾ ವಿದ್ಯಮಾನಗಳನ್ನು ವಿವರಿಸಿದರು.
ನಂತರ ಮರಿಯಮ್ಮ ನಗರ ಹೆಸರಿಡಲು ಪ್ರಸ್ತಾವನೆಗೆ ಸಭೆಯಲ್ಲಿದ್ದ 126 ತಾಂಡಾದ ನಿವಾಸಿಗಳು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಅದರಂತೆ ಪರಶುರಾಮ ನಗರ ಎಂಬ ಹೆಸರಿಡುವ ಪ್ರಸ್ತಾವನೆಗೆ 73 ಜನರು ಕೈ ಎತ್ತುವ ತಮ್ಮ ಅಭಿಪ್ರಾಯ, ಬೆಂಬಲ ವ್ಯಕ್ತಪಡಿಸಿದರು.ನಂತರ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಸೇರಿ ಚರ್ಚಿಸಿ, ಗ್ರಾಮಸಭೆಯಲ್ಲಿ ವ್ಯಕ್ತವಾದ ಜನರ ಅಭಿಪ್ರಾಯ ಮರಿಯಮ್ಮ ನಗರ ಎಂಬ ಹೆಸರಿಡುವ ಪ್ರಸ್ತಾವನೆಯನ್ನು ಅಂಗೀಕರಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಸುರೇಶ ಅಂಕಲಗಿ, ಸಿಪಿಐ ಸುನೀಲ್ ಪಾಟೀಲ್, ಪಿಎಸ್‌ಐ ಮಂಜನಗೌಡ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ, ಹತ್ತಿಕುಣಿ ನಾಡಕಚೇರಿ ಉಪತಹಸೀಲ್ದಾರ್ ಸೋಮನಾಥ, ಕಂದಾಯ ನಿರೀಕ್ಷಕ ರಾಜಶೇಖರ ಪಾಟೀಲ್, ಗ್ರಾಪಂ ಸದಸ್ಯೆ ಸಂಗೀತಾ ಚೌಹಾಣ್, ರಾಮು ಚೌಹಾಣ್, ಪರಶುರಾಮ, ಥಾರು ಚೌಹಾಣ್, ಬಲರಾಮ ರಾಠೋಡ, ಸುರೇಶ ಚೌಹಾಣ್, ರಾಜು ರಾಠೋಡ, ಕಿಶನ ರಾಠೋಡ, ಶಿವಾಜಿ ಚೌಹಾಣ್, ಕೀರು ಚೌಹಾಣ್ ಸೇರಿದಂತೆ ತಾಂಡಾದ ನಿವಾಸಿಗಳು ಇದ್ದರು.