ಸಾರಾಂಶ
ವಿದ್ಯಾರ್ಥಿಗಳಲ್ಲಿ ಎಚ್‌ಐವಿ/ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ತದಾನಕ್ಕೆ ಪ್ರೇರಣೆ ನೀಡುವ ಘಟಕಗಳೇ ರೆಡ್ ರಿಬ್ಬನ್ ಕ್ಲಬ್‌ಗಳು. ಇವುಗಳ ಮೂಲಕ ಯುವಜನರು ಸುರಕ್ಷಿತ ಮತ್ತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಅನುಕೂಲವಾಗಿದೆ ಎಂದು ಜಿಲ್ಲಾಸ್ಪತ್ರೆ ಮೇಲ್ವಿಚಾರಕ ಡಾ.ಎ.ಎಚ್.ಜಗದೀಶ ಹೇಳಿದರು.
ಎಚ್‌ಐವಿ/ಏಡ್ಸ್, ರಕ್ತದಾನ ಜಾಗೃತಿ ಕಾರ್ಯಕ್ರಮ
ದಾವಣಗೆರೆ: ವಿದ್ಯಾರ್ಥಿಗಳಲ್ಲಿ ಎಚ್‌ಐವಿ/ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ತದಾನಕ್ಕೆ ಪ್ರೇರಣೆ ನೀಡುವ ಘಟಕಗಳೇ ರೆಡ್ ರಿಬ್ಬನ್ ಕ್ಲಬ್‌ಗಳು. ಇವುಗಳ ಮೂಲಕ ಯುವಜನರು ಸುರಕ್ಷಿತ ಮತ್ತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಅನುಕೂಲವಾಗಿದೆ ಎಂದು ಜಿಲ್ಲಾಸ್ಪತ್ರೆ ಮೇಲ್ವಿಚಾರಕ ಡಾ.ಎ.ಎಚ್.ಜಗದೀಶ ಹೇಳಿದರು.ನಗರದ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ನಡೆದ ಎಚ್‌ಐವಿ/ ಏಡ್ಸ್ ಮತ್ತು ಸ್ವಯಂಪ್ರೇರಿತ ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎಚ್‌ಐವಿ/ ಏಡ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಜನತೆ ಅತಿ ಹೆಚ್ಚು ಎಚ್‌ಐವಿ ಸೋಂಕಿಗೆ ಒಳಗಾಗುತ್ತಿದೆ. ಇದೊಂದು ಮಾರಣಾಂತಿಕ ಕಾಯಿಲೆಯಾಗಿದೆ. ಏಡ್ಸ್ ಯಾವ ರೀತಿಯಾಗಿ ಹರಡುವುದು, ಅದರ ಲಕ್ಷಣ, ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮ ಕುರಿತು ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯೆ ಪ್ರೊ. ಜಿ.ಸಿ. ನೀಲಾಂಬಿಕಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನರು ಹದಿಹರೆಯದಲ್ಲಿ ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಮಾಹಿತಿಯ ಕೊರತೆಯಿಂದಾಗಿ ಬಹುಪಾಲು ಅಸುರಕ್ಷಿತ ಲೈಂಗಿಕತೆ ಹೊಂದುವ ಸಾಧ್ಯತೆ ಹೆಚ್ಚು. ಇದರಿಂದ ಎಚ್‌ಐವಿ ಸೋಂಕಿಗೆ ಒಳಗಾಗುವ ಅಪಾಯಗಳು ಹೆಚ್ಚಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧಿಕಾರಿ ಡಾ. ಆರ್.ರಾಘವೇಂದ್ರ, ಡಾ. ಓ.ಪ್ರವೀಣಕುಮಾರ, ಡಾ. ಎಂ.ಮಂಜಪ್ಪ, ಪ್ರೊ. ಟಿ.ಆರ್. ರಂಗಸ್ವಾಮಿ, ದೈಹಿಕ ನಿರ್ದೇಶಕ ಧನಂಜಯ, ಪ್ರಕಾಶ, ವಿದ್ಯಾರ್ಥಿಗಳು ಭಾಗವಹಿಸಿದ್ದರು.