ಆತ್ಮಸಾಕ್ಷಿಯಿಂದ ಬದುಕು ನಡೆಸಬೇಕು: ಮಾಧುಸ್ವಾಮಿ

| Published : Feb 25 2024, 01:52 AM IST

ಸಾರಾಂಶ

ವೀರಶೈವ ಸಮಾಜ ಕರ್ಮ ಮತ್ತು ಧರ್ಮ ಆಧಾರಿತ ಹಾಗೂ ಸಿದ್ಧಾಂತಗಳ ಮೇಲೆ ನಿಂತಿದ್ದು, ದೈವತ್ವವನ್ನು ಅಳವಡಿಸಿಕೊಂಡು ಆತ್ಮಸಾಕ್ಷಿಯಿಂದ ಬದುಕು ನಡೆಸುವ ಮೂಲಕ ಸಂಘಟಿತರಾಗಬೇಕಲ್ಲದೆ, ಸಮಾಜದಲ್ಲಿ ದ್ವೇಷ, ಅಸೂಯೆ, ಕಾಲೆಳೆಯುವ ಸ್ವಭಾವ, ಪಿತೂರಿಗಳನ್ನು ಬಿಟ್ಟಾಗ ಮಾತ್ರ ವೀರಶೈವ ಸಮಾಜದ ಪಕ್ಕಾ ಸಂಘಟನೆ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ವೀರಶೈವ ಸಮಾಜ ಕರ್ಮ ಮತ್ತು ಧರ್ಮ ಆಧಾರಿತ ಹಾಗೂ ಸಿದ್ಧಾಂತಗಳ ಮೇಲೆ ನಿಂತಿದ್ದು, ದೈವತ್ವವನ್ನು ಅಳವಡಿಸಿಕೊಂಡು ಆತ್ಮಸಾಕ್ಷಿಯಿಂದ ಬದುಕು ನಡೆಸುವ ಮೂಲಕ ಸಂಘಟಿತರಾಗಬೇಕಲ್ಲದೆ, ಸಮಾಜದಲ್ಲಿ ದ್ವೇಷ, ಅಸೂಯೆ, ಕಾಲೆಳೆಯುವ ಸ್ವಭಾವ, ಪಿತೂರಿಗಳನ್ನು ಬಿಟ್ಟಾಗ ಮಾತ್ರ ವೀರಶೈವ ಸಮಾಜದ ಪಕ್ಕಾ ಸಂಘಟನೆ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ವೀರಶೈವ ಲಿಂಗಾಯತ ನೂತನ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಸಮಾಜಕ್ಕೆ ಸಂಘಟನೆ ಅವಶ್ಯಕತೆ ಇದ್ದು ಶಿಕ್ಷಣ, ಅರಿವು, ಹೋರಾಟದ ಮೂಲಕ ಸಂಘಟಿತರಾಗಬೇಕಿದೆ. ವೀರಶೈವ ಧರ್ಮ, ಬಸವಣ್ಣ, ಸಾಧು ಸಂತರ, ಶರಣರ ಬಗ್ಗೆ ನಾವು ಎಷ್ಟೋ ವರ್ಷಗಳಿಂದ ಓದಿಕೊಂಡು ಬರುತ್ತಿದ್ದೇವೆ. ಆದರೆ ಕೆಲವರು ವಚನಗಳನ್ನು ಓದಿದರೆ ಶ್ರೇಷ್ಠರಾಗುತ್ತಾರೆಂದು ಹೇಳುತ್ತಾರೆ. ಆದರೆ ವಚನಗಳನ್ನು ಹೇಳಿದರಲ್ಲ ವಚನಗಳ ಸಾರವನ್ನು ಬದುಕಿನಲ್ಲಿ ಅರ್ಥಮಾಡಿಕೊಂಡು ಅದರಂತೆ ನಡೆದುಕೊಂಡಾಗ ನಾವೆಲ್ಲರೂ ಶ್ರೇಷ್ಠರಾಗುತ್ತೇವೆಂಬುದು ಸತ್ಯ ಎಂದರು.

ಸಮಾಜದ ಋಣದಲ್ಲಿರುವ ನಾವು ಸಮಾಜ ಒಗ್ಗಟ್ಟಿಗೆ, ಅಭಿವೃದ್ಧಿಗೆ ನಿಸ್ವಾರ್ಥವಾಗಿ ಏನಾದರೂ ಕೊಡಬೇಕು. ಸಂಘಟನೆ ಕಟ್ಟಿ ಸಮಾಜವನ್ನು ಮುಂದಕ್ಕೆ ತರುತ್ತೇವೆಂದರೆ ಅದು ತಪ್ಪು ಕಲ್ಪನೆ. ಸಭೆ, ಮೆರವಣಿಗೆ ಮಾಡುವುದರಿಂದ ಸಮಾಜದ ಬೆಳವಣಿಗೆ ಸಾಧ್ಯವಿಲ್ಲ ಎಂದರು.

ವೀರಶೈವ ಸಮಾಜ ಎಲ್ಲಾ ಸಮಾಜಗಳಿಗೆ ಕಣ್ಣಾಗಿತ್ತು. ಈ ವೇಳೆಗಾಗಲೆ ಸಮಾಜದವರು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಪ್ರಬಲರಾಗಬೇಕಿತ್ತು ಆದರೆ ಸ್ವಾರ್ಥದಿಂದ ನಾವು ಶಕ್ತರಾಗದೆ ಅಸ್ವಸ್ತರಾಗುತ್ತಿದ್ದೇವೆ. ಆದ್ದರಿಂದ ಮಕ್ಕಳನ್ನು ಉನ್ನತ ಶಿಕ್ಷಣವಂತರನ್ನಾಗಿ ಮಾಡಿ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡಿ, ಸಂಘಟನೆಯಾಗಬೇಕು ಇಲ್ಲದಿದ್ದರೆ ಸಮಾಜ ಸದೃಢ ಹಾಗೂ ಜೀವಂತವಾಗಿರುವುದಿಲ್ಲ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್ ಮಾತನಾಡಿ, ಧಾರ್ಮಿಕ ಸಂದೇಶ ಕೊಟ್ಟ ಬಹು ದೊಡ್ಡ ಸಮಾಜ ವೀರಶೈವ ಸಮಾಜ. ಇಡಿ ವಿಶ್ವಕ್ಕೆ ವಿನೂತನ ಸಾಹಿತ್ಯದ ಕೊಡುಗೆ ನೀಡಿದ ಸಮಾಜ. ಕಾಯಕ, ವಿದ್ಯೆ, ದಾಸೋಹ ಪ್ರಜ್ಞೆಯ ಆವಿಷ್ಕಾರದಿಂದ ಇಡೀ ಜಗತ್ತಿಗೆ ಎಲ್ಲವನ್ನೂ ನೀಡಿದ ಸಮಾಜ ವೀರಶೈವ ಸಮಾಜ. ಸಂಘಟನೆಯ ಮೂಲ ಆಶಯ ಧರ್ಮ ಪ್ರಚಾರ ಆಗಬೇಕು. ಮಠಾಧೀಶರು, ರಾಜಕಾರಣಿಗಳು ಧರ್ಮ ಪ್ರಚಾರದ ಕಡೆ ಹೆಚ್ಚನ ಗಮನಹರಿಸುತ್ತಿಲ್ಲ. ಒಳಪಂಗಡಗಳಿಂದ ಸಮಾಜದ ಒಡೆದುಹೋಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಸಂಘಟನೆಯಾಗಬೇಕಿದ್ದು ಈ ಸಂಘಟನೆ ಕ್ರಿಯಾಶೀಲವಾಗಬೇಕು. ಬಸವಣ್ಣನವರ ಆಶಯಗಳನ್ನು ಯುವಪೀಳಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಷಡಕ್ಷರಿ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಒಂದೇ. ಗಂಡು, ಹೆಣ್ಣು ಎರಡೇ ಜಾತಿ. ವೀರಶೈವ ಧರ್ಮ ವಿಶ್ವ ಮಾನವನ ಏಳಿಗೆಗೆ ದುಡಿಯುತ್ತಿರುವ ಧರ್ಮವಾಗಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ದುಡಿಯುತ್ತಿರುವ ಸಮಾಜವಾಗಿದ್ದು, ಸಮಾಜದ ಮಠಮಾನ್ಯಗಳು ಶೈಕ್ಷಣಿಕ, ಅನ್ನದಾಸೋಹ ನೀಡುತ್ತಿವೆ. ಸಮಾಜದ ಉತ್ತಮವಾಗಿ ಬೆಳೆಯಬೇಕು ಇದರೊಟ್ಟಿಗೆ ಬೇರೆ ಸಮಾಜವೂ ಬೆಳೆಯಬೇಕು. ಸಮಾಜದ ಅಭಿವೃದ್ಧಿಗಾಗಿ ನಾನು ಸಹ ಶ್ರಮಿಸುವೆ ಎಂದರು.

ವೀರಶೈವ ಲಿಂಗಾಯತ ಸಂಘಟನೆಯ ತಾಲೂಕು ಅಧ್ಯಕ್ಷ ಸಿ.ಎಸ್. ರೇಣುಕಾರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಕೆ. ರಾಜಶೇಖರ್‌, ಯುವ ನಾಯಕ ನಟ ನಿರ್ದೇಶಕ ಮನು, ಸಮಾಜದ ಮುಖಂಡರಾದ ಬಸವರಾಜು, ಶಿವಪ್ರಸಾದ್, ಟಿ.ಎನ್. ಪರಮಶಿವಯ್ಯ, ಎಂ.ಆರ್‌ ಸಂಗಮೇಶ್, ಕೆ.ಎಂ. ಪರಮೇಶ್ವರಯ್ಯ, ಎಚ್.ಇ. ರಮೇಶ್, ಪ್ರಸನ್ನ ಕುಮಾರ್‌, ಸ್ವರ್ಣಗೌರಮ್ಮ, ನಾಗರತ್ನ, ಕೆಎಂಎಫ್ ನಿರ್ದೇಶ ಪ್ರಕಾಶ್ ಮಾದಿಹಳ್ಳಿ, ನಗರಸಭಾ ಸದಸ್ಯರು, ಸಂಘಟನೆಯ ಪದಾಧಿಕಾರಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.